ಮಂಗಳೂರು: ಅಡಕೆ ಕೃಷಿಕರಿಗೆ ಮಣ್ಣಿನ ಫಲವತ್ತತೆ ಹಾಗೂ ಹೆಚ್ಚಿನ ಇಳುವರಿಗಾಗಿ ಕೇರಳ-ಕರ್ನಾಟಕದ ಅಂತರ್ರಾಜ್ಯಸಹಕಾರಿ ಸಂಸ್ಥೆ ಕ್ಯಾಂಪ್ಕೋ ತನ್ನದೇ ಬ್ರ್ಯಾಂಡ್‌ನಲ್ಲಿ ಆಯುಷ್ ಹಾಗೂ ಪೌಷ್ಠಿಕ ಎಂಬ ಎರಡು ಗೊಬ್ಬರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಂಗಳೂರಿನ ಸಂಘನಿಕೇತನದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಸೆ. 27 ರಂದು ನಡೆದ ಕ್ಯಾಂಪ್ಕೋ ವಾರ್ಷಿಕ ಮಹಾಸಭೆಯಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಕ್ಯಾಂಪ್ಕೋ ಆಯುಷ್ ಎಂಬುದು ಸಾವಯವ ಗೊಬ್ಬರವಾಗಿದ್ದು, ಕ್ಯಾಂಪ್ಕೋ ಪೌಷ್ಠಿಕ ಎಂಬುದು ಸತು ಮತ್ತು ಬೋರೋನ್ ಒಳಗೊಂಡ ಗೊಬ್ಬರವಾಗಿದೆ. ಇದು ನವೆಂಬರ್ ಅಂತ್ಯದೊಳಗೆ ಎಲ್ಲಾ ಬೆಳೆಗಾರರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ. ಇದು ಅಡಕೆ ಮಾತ್ರವಲ್ಲ, ಇತರೆ ಉಪ ಬೆಳೆಗಳಿಗೂ ಉಪಯುಕ್ತವಾಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.
ಬೈಲಾಕ್ಕೂ ತಿದ್ದುಪಡಿ : ಕ್ಯಾಂಪ್ಕೋ ತನ್ನ ಬೈಲಾದಲ್ಲಿ ತಿದ್ದುಪಡಿ ಮಾಡಿದ್ದು, ಬೆಳೆಗಾರರಿಗೆ ಅನುಕೂಲವಾಗಲು ಹಲವು ಕ್ರಮಗಳನ್ನು ಕೈಗೊಂಡಿದೆ. ಅಡಕೆ, ಕೋಕೋ, ರಬ್ಬರ್, ಗೇರು, ತೆಂಗಿನಕಾಯಿ ಜತೆಗೆ ಸಾಂಬಾರ, ಕಾಫಿ, ಔಷಧೀಯ ಉತ್ಪನ್ನ, ಅರೊಮ್ಯಾಟಿಕ್ ಪ್ಲಾಂಟ್ಸ್ ಹಾಗೂ ತಾಳೆ ಬೆಳೆ ಖರೀದಿಗೆ ಸಮ್ಮತಿಸಿದೆ. ಹಳದಿ ಎಲೆ ರೋಗಕ್ಕೂ ಸಂಶೋಧನೆಗೆ ಅನುದಾನ ನೀಡಲು ಅನುಮತಿಸಲಾಗಿದೆ. ಆಡಳಿತ ಮಂಡಳಿಗೆ ನಿರ್ದೇಶಕರ ಸಂಖ್ಯೆಯನ್ನು 19ಕ್ಕೆ ಏರಿಕೆ ಮಾಡಲಾಗಿದೆ. ಇದರಲ್ಲಿ ಇಬ್ಬರು ಮಹಿಳಾ ನಿರ್ದೇಶಕರ ನೇಮಕಕ್ಕೂ ನಿರ್ಧರಿಸಿದೆ.
22ಕೋಟಿ ರೂ. ಲಾಭ : ಕಳೆದ ಸಾಲಿನಲ್ಲಿ ಅಡಕೆ ಮುಕ್ತ ಆಮದು ನೀತಿ, ಭಾರಿ ಮಳೆಯಿಂದಾಗಿ ಬಿಳಿ ಅಡಕೆ ಗುಣಮಟ್ಟ ಕೊರತೆ, ಉತ್ತರ ಭಾರತದಲ್ಲಿ ಕುಸಿದ ಅಡಕೆ ಬೇಡಿಕೆ, ಇದರಿಂದ ಗೋದಾಮಿನಲ್ಲೇ ಉಳಿದ ಅಡಕೆ ಇತ್ಯಾದಿ ಕಾರಣದಿಂದ 12 ಕೋಟಿ ರೂ. ನಷ್ಟ ಅನುಭವಿಸುವಂತಾಗಿದೆ. ಇವೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಕಾರಣ 2023ರಲ್ಲಿ ಅಡಕೆ ವಹಿವಾಟಿನಲ್ಲಿ 99ಕೋಟಿ ರೂ. ಲಾಭ ಉಂಟಾಗಿದೆ. ವರ್ಷಾಂತ್ಯಕ್ಕೆ 30 ಕೋಟಿ ರೂ. ಲಾಭದ ಗುರಿ ಇರಿಸಿಕೊಳ್ಳಲಾಗಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಜಿಎಸ್‌ಟಿ ಸಮಸ್ಯೆಗೆ ನಿಯೋಗ : ಅಡಕೆ ಮಾರಾಟ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ವಿಧಿಸುತ್ತಿದ್ದು, ಇದು ಅ.7 ರ ಜಿಎಸ್‌ಟಿ ಕೌನ್ಸಿಲ್ ಸಭೆಗೆ ಮುನ್ನ ಇತ್ಯರ್ಥವಾಗಬೇಕಾಗಿದೆ. ಅದಕ್ಕಾಗಿ ಅಡಕೆ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ನೇತೃತ್ವದಲ್ಲಿ ದೆಹಲಿಗೆ ಕ್ಯಾಂಪ್ಕೋ ಸೇರಿದಂತೆ ಬೆಳೆಗಾರ ಸಂಘಟನೆಗಳ ನಿಯೋಗ ತೆರಳಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಮನವರಿಕೆ ಮಾಡಬೇಕಾಗಿದೆ ಎಂದರು.
ಎಲ್ಲ ಬೆಳೆಗಾರರಿಗೆ ಅನುಕೂಲವಾಗಲು ಆಯಾ ಶಾಖಾ ವ್ಯಾಪ್ತಿಯಲ್ಲಿ ಶೇರುದಾರರ ಸಭೆ ನಡೆಸಲಾಗುತ್ತಿದೆ. ಡಿಸೆಂಬರ್ ಒಳಗೆ ಬಾಕಿ ಉಳಿದ ಕಡೆಗಳಲ್ಲೂ ಸಭೆ ನಡೆಸಲಾಗುವುದು ಎಂದರು. ಅಡಕೆ ಹಳದಿ ರೋಗ ತಡೆ ಸಂಶೋಧನೆಗೆ ಆಗಿನ ಸಿಎಂ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ 25 ಕೋಟಿ ರೂ. ಕಾದಿರಿಸಿದರೂ ಅದನ್ನು ಬಿಡುಗಡೆಗೊಳಿಸಲು ಜನಪ್ರತಿನಿಧಿಗಳಿಂದ ಸಾಧ್ಯವಾಗಿಲ್ಲ ಎಂದ ಕಿಶೋರ್ ಕುಮಾರ್ ಕೊಡ್ಗಿ ಕೇಂದ್ರಕ್ಕೆ ಪಾವತಿಸುವ ಜಿಎಸ್‌ಟಿ ಮೊತ್ತದಲ್ಲಿ ಶೇ1ರಷ್ಟು ಮೊತ್ತವನ್ನು ಹಳದಿ ರೋಗ ಸಂಶೋಧನೆಗೆ ಕೊಡುಗೆಯಾಗಿ ನೀಡಿದರೆ ಉತ್ತಮ ಎಂದರು.
ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರದಾನ: ಈ ಸಂದರ್ಭ ರಾಷ್ಟ್ರಪತಿಗಳಿಂದ ಸಸ್ಯತಳಿ ಸಂರಕ್ಷಕ ಪುರಸ್ಕಾರ ಪಡೆದ ಬಿ.ಕೆ.ದೇವರಾಯ ಹಾಗೂ ಕರಿಮೆಣಸು ಸಂಸ್ಕರಣಾ ಯಂತ್ರ ಆವಿಷ್ಕರಿಸಿದ ಗೋಪಾಲಕೃಷ್ಣ ಶರ್ಮ ಇವರಿಗೆ ಆರ್‌ಎಸ್‌ಎಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಕ್ಯಾಂಪ್ಕೋ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು. ಸುವರ್ಣ ಮಹೋತ್ಸವ ಸಲುವಾಗಿ ಹೊರತಂದ ಪೂಗಸಿರಿ ಸ್ಮರಣ ಸಂಚಿಕೆಯನ್ನು ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಬಿಡುಗಡೆಗೊಳಿಸಿದರು.
ಅಡಕೆ ಆರೋಗ್ಯಕರ-ವರದಿ ಶೀಘ್ರ ಸುಪ್ರೀಂಗೆ : ಕ್ಯಾಂಪ್ಕೋ ಪೌಷ್ಠಿಕ ಮತ್ತು ಆಯುಷ್ ಗೊಬ್ಬರವನ್ನು ಅಡಕೆ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬ ಬಗ್ಗೆ ಸಂಶೋಧನಾ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಶೀಘ್ರ ಸಲ್ಲಿಸಲಾಗುವುದು. ಮಾರುಕಟ್ಟೆ ಪಾಲಿನಲ್ಲಿ ಶೇ.50ರಷ್ಟು ಅಡಕೆಯನ್ನು ಕ್ಯಾಂಪ್ಕೋ ಖರೀದಿಸುವಂತಾಗಲಿ ಎಂದರು.
ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗ, ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ್ ಹೆಗ್ಡೆ, ಕೃಷ್ಣ ಪ್ರಸಾದ್ ಮಡ್ತಿಲ, ಶಂಭುಲಿಂಗ ಜಿ.ಹೆಗಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ್ ಪಟ್ಟಾಜೆ, ಮಹೇಶ್ ಚೌಟ, ರಾಘವೇಂದ್ರ ಭಟ್, ಜಯಪ್ರಕಾಶ್ ನಾರಾಯಣ್, ರಾಧಾಕೃಷ್ಣನ್, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ರಾಘವೇಂದ್ರ ಎಚ್.ಎಂ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್, ಜನರಲ್ ಮೆನೇಜರ್ ರೇಷ್ಮಾ ಮಲ್ಯ, ಡಿಜಿಎಂ ಪರಮೇಶ್ವರ್, ಮಾರುಕಟ್ಟೆ ಮುಖ್ಯಸ್ಥ ಗೋವಿಂದ ಭಟ್, ಚಾಕಲೇಟ್ ಮಾರುಕಟ್ಟೆ ಮುಖ್ಯಸ್ಥ ಶ್ಯಾಮ ಪ್ರಸಾದ್, ಸಿಎಗಳಾದ ಪ್ರವೀಣ್ ಕುಮಾರ್, ಪ್ರಕಾಶ್, ಆರ್.ಡಿ.ಶಾಸ್ತ್ರಿ, ಚಂದ್ರಕಾಂತ್ ರಾವ್, ಲೆಕ್ಕ ಪರಿಶೋಧಕ ರಮೇಶ್ ಉಪಸ್ಥಿತರಿದ್ದರು.