ಉಪ್ಪಿನಂಗಡಿ: ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2023 ಸಮೀಕ್ಷೆಯಲ್ಲಿ ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾ.ಪಂ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಅ.2ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರ ಉಪಸ್ಥಿತಿಯಲ್ಲಿ ‘ಗಾಂಧಿ ಗ್ರಾಮ ಪುರಸ್ಕಾರ’ ಸಮಾರಂಭವನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಇಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ.ಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಹಾಗೂ ಅಭಿವೃದ್ಧಿ ಅಧಿಕಾರಿ ಸತೀಶ್ ಡಿ. ಬಂಗೇರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಇವರು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ – 2023 ಸಮೀಕ್ಷೆಯನ್ನು ಹಮ್ಮಿಕೊಂಡಿದ್ದು, ಪ್ರಸ್ತುತ ತಾಲೂಕು ಮಟ್ಟದ ಮೌಲ್ಯಮಾಪನದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಗ್ರಾ.ಪಂ.ಗಳನ್ನು ಜಿಲ್ಲಾ ಮಟ್ಟಕ್ಕೆ ಅರ್ಹಗೊಳಿಸಿತ್ತು. ಈ ಪೈಕಿ ಪ್ರತಿ ಜಿಲ್ಲೆಯಿಂದ ಮೂರು ವರ್ಗಗಳಲ್ಲಿ ಒಟ್ಟು 269 ಗ್ರಾಮ ಪಂಚಾಯತ್‌ಗಳನ್ನು ಎಸ್‌ಬಿಎಂ- ಜಿ ಐಎಂಐಎಸ್ ಮೂಲಕ ರಾಜ್ಯ ಮಟ್ಟಕ್ಕೆ ಸಲ್ಲಿಸಲಾಗಿದೆ. ಎಸ್‌ಎಸ್‌ಜಿ ಮಾರ್ಗಸೂಚಿಯಂತೆ ಜಿಲ್ಲೆಗಳಿಂದ ಆಯ್ಕೆ ಮಾಡಿದ ಗ್ರಾ.ಪಂ.ಗಳ ಪೈಕಿ ಅಂಕಗಳ ಆಧಾರದ ಮೇಲೆ ಪ್ರತಿ ವರ್ಗಗಳಲ್ಲಿ ಐದು ಗ್ರಾ.ಪಂ.ಗಳಂತೆ ಒಟ್ಟು 15 ಗ್ರಾ.ಪಂ.ಗಳನ್ನು ರಾಜ್ಯದಿಂದ ಕೇಂದ್ರಕ್ಕೆ ಐಎಂಐಎಸ್‌ನಲ್ಲಿ ಗುರುತಿಸಿ ಸಲ್ಲಿಸಲಾಗಿದೆ. ರಾಜ್ಯ ಮಟ್ಟಕ್ಕೆ ಅರ್ಹವಾಗಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಗ್ರಾ.ಪಂ.ಗಳಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಕೂಡಾ ಒಂದಾಗಿದೆ.