ಡಿ.24,25: ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

0

ಸುಭದ್ರ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ
ಧರ್ಮದ ವಿಚಾರದಲ್ಲಿ ಎಲ್ಲರ ಸಹಕಾರ ಅಗತ್ಯ-ಅರುಣ್ ಕುಮಾರ್ ಪುತ್ತಿಲ
ಮಹಾಲಿಂಗೇಶ್ವರನ ಮೂಲಕ ತಿರುಪತಿ ದರುಶನವಾಗಲಿದೆ-ಪ್ರಸನ್ನ ಮಾರ್ತ
ಲೋಕಕಲ್ಯಾಣಾರ್ಥವಾಗಿ ನಡೆಯುವ ಕಾರ್ಯಕ್ರಮ

ಪುತ್ತೂರು:ಕಲಿಯುಗದ ಪ್ರತ್ಯಕ್ಷ ದೇವರೆಂದೇ ಭಕ್ತರಿಂದ ಕರೆಯಲ್ಪಡುವ ಶ್ರೀನಿವಾಸ ಸ್ವಾಮಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಅತ್ಯಂತ ವೈಭವದಿಂದ ಶ್ರೀನಿವಾಸ ಕಲ್ಯಾಣೋತ್ಸವ ಡಿ.24 ಮತ್ತು 25ರಂದು ನಡೆಯಲಿದೆ.ಪುತ್ತಿಲ ಪರಿವಾರದ ಮಾರ್ಗದರ್ಶನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಪೂಜಾ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ನ.20ರಂದು ಸಂಜೆ ಮುಕ್ರಂಪಾಡಿಯ ಸುಭದ್ರ ಕಲ್ಯಾಣ ಮಂಟದ ಸಭಾಂಗಣದಲ್ಲಿ ನಡೆಯಿತು.


ಧರ್ಮದ ವಿಚಾರದಲ್ಲಿ ಎಲ್ಲರ ಸಹಕಾರಕ್ಕೆ ಅರುಣ್ ಕುಮಾರ್ ಪುತ್ತಿಲ ಮನವಿ :
ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಲೋಕಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಪ್ರಥಮ ಬಾರಿಗೆ ನಡೆಯಲಿದೆ.ಹಾಗಾಗಿ ಧರ್ಮದ ವಿಚಾರದಲ್ಲಿ ಎಲ್ಲರ ಸಹಕಾರ ಬೇಕೆಂದು ಮನವಿ ಮಾಡಿದರು.ಎರಡು ದಿನದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಅಂದಾಜು 1 ಲಕ್ಷಕ್ಕೂ ಅಧಿಕ ಜನ ಸೇರಲಿದ್ದು, ಎರಡು ದಿನವೂ ಮೂರು ಹೊತ್ತು ಅನ್ನದಾನ ನಡೆಯಲಿದೆ.ಡಿ.24ರಂದು ಸಂಜೆ ಬೊಳುವಾರಿನಿಂದ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ವೈಭವದಿಂದ ಶೋಭಾಯಾತ್ರೆ ಮೂಲಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿನ ಕಲ್ಯಾಣೋತ್ಸವ ಮಂಟಪಕ್ಕೆ ಕರೆತರಲಾಗುವುದು.ಬಳಿಕ ಗಂಟೆ 6ಕ್ಕೆ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ.ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಡಿ.25ರಂದು ಬೆಳಿಗ್ಗೆ ವಿಶೇಷವಾಗಿ ತಿರುಪತಿ ಮಾದರಿಯಲ್ಲೇ ಉದಯಾಸ್ತಮಾನ ಪೂಜೆ ನಡೆಯಲಿದೆ.ಬಳಿಕ ಪ್ರಸಾದ ವಿತರಣೆ ನಡೆಯಲಿದೆ.ಇದೇ ಸಂದರ್ಭ ಮಧ್ವಾದೀಶ ರಾಮಕೃಷ್ಣ ಕಾಟುಕುಕ್ಕೆ ಅವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ.ಸಂಜೆ ಧರ್ಮಸಭೆ ನಡೆಯಲಿದೆ.ಬಳಿಕ ಸಂಜೆ ಗಂಟೆ 6ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.ಪೂಜೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಕ್ಕೆ ಒಟ್ಟು ಸುಮಾರು ರೂ.30 ಲಕ್ಷ ವೆಚ್ಚ ತಗಲುವ ಸಾಧ್ಯತೆ ಇದೆ.ಯಾವುದೇ ಒಂದು ಕಪ್ಪು ಚುಕ್ಕಿ ಬಾರದ ರೀತಿಯಲ್ಲಿ ಕಾರ್ಯಕ್ರಮ ಸುಂದರವಾಗಿ, ಭಕ್ತಿಪ್ರಧಾನವಾಗಿ ನಡೆಯಬೇಕಾಗಿದೆ.ಈ ನಿಟ್ಟಿನಲ್ಲಿ 2ನೇ ಪೂರ್ವಭಾವಿ ಸಭೆಯಲ್ಲಿ ಪೂರ್ಣಮಟ್ಟದ ವಿವಿಧ ಸಮಿತಿ ರಚನೆ ಮಾಡಲಾಗುವುದು ಎಂದರು.


ಮಹಾಲಿಂಗೇಶ್ವರನ ಮೂಲಕ ತಿರುಪತಿ ದರುಶನವಾಗಲಿದೆ:
ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಮಾತನಾಡಿ ಶ್ರೀನಿವಾಸ ಕಲ್ಯಾಣೋತ್ಸವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುವ ಮೂಲಕ ತಿರುಪತಿಯ ದರುಶನವನ್ನು ಶ್ರೀ ಮಹಾಲಿಂಗೇಶ್ವರ ದೇವರು ಅನುಗ್ರಹಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಕೇವಲ ಪುತ್ತಿಲ ಪರಿವಾರದ ಪದಾಧಿಕಾರಿಗಳು, ಸಮಿತಿಯವರು ಮಾತ್ರ ಇದ್ದರೆ ಸಾಕಾಗುವುದಿಲ್ಲ. ಸಮಸ್ತ ಹಿಂದು ಸಮಾಜ ಪ್ರತಿನಿಽಸುವ ಮಾತೆಯರು, ಹಿರಿಯರು, ಧರ್ಮರಕ್ಷಕರು ಸಹಕಾರ ನೀಡುವ ಮೂಲಕ ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದರು.ಎಲ್ಲಾ ಹಿಂದು ಸಮಾಜದ ಮನೆ ಮನ ಮುಟ್ಟುವ ಮೂಲಕ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಕಾರ್ಯಕ್ರಮ ಯಶಸ್ವಿಯಾಗಬೇಕೆಂದವರು ಹೇಳಿದರು.ಪೂರ್ವಭಾವಿ ಸಭೆಯಲ್ಲಿ ಸಮಿತಿ ರಚನೆ ನಡೆಯಿತು.ಶ್ರೀನಿವಾಸ ಕಲ್ಯಾಣೋತ್ಸವದ ಅಧ್ಯಕ್ಷ ಶಶಾಂಕ್ ಕೊಟೇಚಾ,ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಿಕಾಪ್ರಸಾದ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ಗಣೇಶ್ ಭಟ್ ಮಕರಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪುತ್ತಿಲ ಪರಿವಾರದ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ಕಾರ್ಯಕ್ರಮ ನಿರೂಪಿಸಿದರು.ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಯಶಸ್ಸಿಗಾಗಿ ನೂರಾರು ಮಂದಿ ವಿವಿಧ ಸಮಿತಿಯ ಜವಾಬ್ದಾರಿ ವಹಿಸಿಕೊಂಡರು.

LEAVE A REPLY

Please enter your comment!
Please enter your name here