ಪುತ್ತೂರು ಬಿಜೆಪಿ ಕಾರ್ಯನಿರ್ವಹಣಾ ತಂಡದ ಸಭೆ-ನಿಕಟಪೂರ್ವ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಸನ್ಮಾನ

0

ನಮ್ಮ ಮೈಮರೆಯುವಿಕೆಯಿಂದ ಏನಾಗಿದೆ ಎಂದು ಗೊತ್ತಿರಲಿ – ನಳಿನ್ ಜಾಗೃತಿ
ಹಿಂದೂಗಳ ಭಾವನೆಗೆ ಸರಿಯಾಗಿ ಕೆಲಸ ಮಾಡಿದವರು- ಸಂಜೀವ ಮಠಂದೂರು
ಸಾಮಾನ್ಯ ಕಾರ್ಯಕರ್ತನನ್ನು ನಾಯಕನನ್ನಾಗಿ ಮಾಡುವ ಏಕೈಕ ಪಕ್ಷ ಬಿಜೆಪಿ – ಸುದರ್ಶನ್ ಮೂಡಬಿದ್ರೆ
ಕಾರ್ಯಕರ್ತರ ಉಳಿವಿಗಾಗಿ ಹಲವು ಕೆಲಸ ಮಾಡಿದ್ದಾರೆ – ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು: ಇವತ್ತು ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಇದು ನಮ್ಮ ಮೈಮರೆಯುವಿಕೆಯಿಂದ ಆಗಿರುವುದು ಎಂದು ಗೊತ್ತಿರಲಿ ಎಂದು ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.

ಪುತ್ತೂರು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 2014ಕ್ಕೂ ಹಿಂದಿನ ಸರಕಾರ ಮತ್ತು ಬಳಿಕದ ಮೋದಿ ಸರಕಾರವನ್ನು ತುಲನೆ ಮಾಡಬೇಕು. 2014ರ ಹಿಂದೆ ನಮ್ಮ ಜಿಲ್ಲೆಗೆ 14ಸಾವಿರ ಕೋಟಿ ಅನುದಾನ ಬಂದರೆ ಆ ನಂತರ ಬಂದಿರುವ ನರೇಂದ್ರ ಮೋದಿ ಸರಕಾರದಿಂದ ಜಿಲ್ಲೆಗೆ 50 ಸಾವಿರ ಕೋಟಿ ಅನುದಾನ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ರಸ್ತೆಗಳು ಚತುಷ್ಪಥ ರಸ್ತೆಗಳಾಗುತ್ತಿವೆ. ಡಿ.24ರೊಳಗೆ ಬಿ ಸಿ ರೋಡ್ ಅಡ್ಡಹೊಳೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಮಂಗಳೂರಿನಲ್ಲಿ ಅತಿ ದೊಡ್ಡ ವಿಮಾನ ನಿಲ್ದಾಣ, ಅಂತರಾಷ್ಟ್ರೀಯ ಈಜುಕೊಳ, ಇವೆಲ್ಲ ನರೇಂದ್ರ ಮೋದಿ ಕೊಟ್ಟ ಸ್ಮಾರ್ಟ್ ಸಿಟಿಯ ಅನುದಾನದಿಂದಾಗಿದೆ. ಆದರೆ ನಾವು ಇವತ್ತು ಮೈ ಮರೆತಾಗ ಏನಾಗಿದೆ ಎಂಬುದನ್ನು ಚಿಂತಿಸಬೇಕು. ಕಳೆದ ಅವಧಿಯ ಶಾಸಕರ ಅನುದಾನದಿಂದ ಇನ್ನೂ ಕಾಮಗಾರಿ ನಡೆಯುತ್ತಿದೆ, ಹೊರತು ಈಗಿನ ಶಾಸಕರಿಗೆ ಒಂದೇ ಒಂದು ಅನುದಾನ ಬಂದಿಲ್ಲ. ಹರ್ಷ ಹತ್ಯೆ ಸಂದರ್ಭ ಕುಟುಂಬಕ್ಕೆ 10 ಲಕ್ಷ, ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭ 25 ಲಕ್ಷ ಸಹಿತ ಕೆಎಫ್‌ಡಿಯನ್ನೇ ನಿಷೇಧ ಮಾಡಲಾಯಿತು. ಆದರೆ ಈಗಿನ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ 300 ಮಂದಿ ರೈತರು ಆತ್ಮಹತ್ಯೆ ಮಾಡಿದ್ದಾರೆ. ಪುತ್ತೂರಿನಲ್ಲಿ ಎರಡು ಮರ್ಡರ್ ಆಗಿದೆ. ಇದರಿಂದ ನಿರಂತರವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಇವೆಲ್ಲ ನಮ್ಮ ಮೈಮರೆಯುವಿಕೆಯಿಂದ ಎನಾಗಿದೆ ಎಂದು ಗೊತ್ತಿರಲಿ ಎಂದು ಕಾರ್ಯಕರ್ತರನ್ನು ಎಚ್ಚರಿಸಿದ ನಳಿನ್ ಕುಮಾರ್ ಕಟೀಲ್, ಬಹಳ ಎಚ್ಚರಿಕೆಯಿಂದ ಮುಂದಿನ ಲೋಕಸಭಾ, ಗ್ರಾ.ಪಂ, ಜಿ.ಪಂ ಚುನಾವಣೆ ಸಹಿತ ಎಲ್ಲಾ ಚುನಾವಣಯಲ್ಲಿ ಬಿಜೆಪಿ ಜಯಭೇರಿ ಭಾರಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಮಾಡಬೇಕು ಎಂದರು. ಒಬ್ಬ ಸಾಮಾನ್ಯ ಕಾರ್ಯಕರ್ತ ಯಾವುದೇ ರಾಜಕೀಯ ಹಿನ್ನಲೆ ಇಲ್ಲದೆ ಒಬ್ಬ ಲೋಕಸಭಾ ಸದಸ್ಯನಾಗಬಹುದು. ಒಬ್ಬ ಪಾಲಿಕೆಯ ಅಧ್ಯಕ್ಷನೂ ಆಗಬಹುದು ಎಂದು ಹೇಳಿದ್ದರೆ ಅದು ಬಿಜೆಪಯಲ್ಲಿ ಮಾತ್ರ. ಈ ನಿಟ್ಟಿನಲ್ಲಿ ಪಕ್ಷದ ಕೆಲಸ ನಡೆಯಬೇಕು. ಅದಕ್ಕೆ ಪೂರಕವಾದ ಕೆಲಸ ಮಾಡಬೇಕು ಎಂದರು.

ಹಿಂದೂಗಳ ಭಾವನಗೆ ಸರಿಯಾಗಿ ಕೆಲಸ ಮಾಡಿದವರು:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಅಭಿನಂದನಾ ಮಾತುಗಳನ್ನಾಡಿದರು. ಜಿಲ್ಲೆಯ ನಾಡಿಮಿಡಿತವನ್ನು ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನಳಿನ್ ತೋರಿಸಿಕೊಟ್ಡಿದ್ದಾರೆ. ಶ್ರೀನಿವಾಸ ಮಲ್ಯ ಅವರು ಮಂಗಳೂರಿಗೆ ಏರ್‌ಪೋರ್ಟ್ ಕೊಡುಗೆಯಾಗಿ ಕೊಟ್ಟರೆ ಅವರ ಬಳಿಕ ಜಿಲ್ಲೆಗೆ ಮೂಲಭೂತ ಸೌಕರ್ಯವನ್ನು ಕೊಟ್ಟವರು ಸಂಸದ ನಳಿನ್ ಕುಮಾರ್ ಕಟೀಲ್. ಅವರು ಸಂಸದರಾಗಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದಿದ್ದಾರೆ. 2018 ರಲ್ಲಿ ಜಿಲ್ಲೆಯಲ್ಲಿ ಕಾರ್ಯಕರ್ತರ ಹತ್ಯೆಯಾದಾಗ ನಳಿನ್ ಕುಮಾರ್ ರಸ್ತೆಗೆ ಇಳಿದು ಹೋರಾಟ ಮಾಡಿದವರು. ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಅವರ ಮಡದಿಗೆ ಮಾನಸಿಕ ಸ್ಥೈರ್ಯ ಮನೆ, ಉದ್ಯೋಗ ನೀಡಿದರು. ಇದರ ಜೊತೆಗೆ ಎನ್‌ಐಎ ಮೂಲಕ ದುಷ್ಕರ್ಮಿಗಳನ್ನು ಮಟ್ಟ ಹಾಕಿದರು. ನಾನು ಶಾಸಕನಾಗಿದ್ದಾಗ ಸಮರ್ಥವಾಗಿ ಕೆಲಸ ಕಾರ್ಯನಿರ್ವಹಿಸಲು ಅದರ ಹಿಂದೆ ನಳಿನ್ ಇದ್ದರು ಎಂದರು.

ಸಾಮಾನ್ಯ ಕಾರ್ಯಕರ್ತನ್ನು ನಾಯಕನ್ನಾಗಿ ಮಾಡುವ ಏಕೈಕ ಪಕ್ಷ ಬಿಜೆಪಿ:
ಸಾಮಾನ್ಯ ಕಾರ್ಯಕರ್ತನನ್ನು ನಾಯಕನ್ನನಾಗಿ ಮಾಡು ಎಕೈಕ ಪಕ್ಷ ಬಿಜೆಪಿ. ಅದಕ್ಕೆ ಸಾಕ್ಷಿಯಾಗಿ ನಳಿನ್ ನಮ್ಮ ಮುಂದೆ ಇದ್ದಾರೆ. ಜಿಲ್ಲೆಯಲ್ಲಿ 3 ಭಾರಿ ಸಂಸದರಾಗಿ 15 ವರ್ಷ ಪೂರೈಸಿದ ಸಂಸದ ನಳಿನ್ ಅವರು ಸಂಘಟನೆಗೆ ಚ್ಯುತಿ ಬಾರದ ರೀತಿಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿ ಸಮರ್ಥವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿ, ರಾಜ್ಯದಲ್ಲಿ ದಕ್ಷಿಣ ಕನ್ನಡದ ಕೀರ್ತಿಯ ಪತಾಕೆ ಹಾರಿಸಿದ್ದಾರೆ. ರಾಜ್ಯದಲ್ಲಿ 18 ಬಾರಿ ಪ್ರವಾಸ ಮಾಡುವ ಮೂಲಕ ರಾಷ್ಟ್ರೀಯ ಅಧ್ಯಕ್ಷರಿಂದ ಶಹಬಾಸ್ ಗಿರಿ ಪಡೆದ ಎಕೈಕ ಸಂಸದ ನಳಿನ್ ಎಂದ ಅವರು ಸಂಘಟನೆಯಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲಾ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ನಾಟಕದಲ್ಲಿ ಬಿಜೆಪಿ ಸಂಘಟನೆಯನ್ನು ಬಹಳ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ ಎಂದರು. ಇವತ್ತು ಅಧಿಕಾರ ಇರಲಿ, ಇಲ್ಲದೆ ಇರಲಿ ನಮ್ಮೆಲ್ಲರ ಗುರಿ ಸಂಘಟನೆ. ಅದು ಬೂತ್ ಮಟ್ಟದಲ್ಲಿ ಯಶಸ್ವಿಯಾಗಬೇಕು. ಮೊನ್ನೆ ನಡೆದ ಚುನಾವಣೆಯಲ್ಲಿ ನಾವು ಸೋತ್ತಿದ್ದೇವೆ. ಅದರಿಂದ ಕಾರ್ಯಕರ್ತರು ವಿಚಲಿತರಾಗದೆ ಆತ್ಮವಿಶ್ವಾಸದಿಂದ ಮುಂದೆ ಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದರು. ದೇಶದ ಭವಿಷ್ಯದ ದೃಷ್ಟಿಯಿಂದ ಮತ್ತು ಜಗತ್ತಿನ ಹಿತಕ್ಕಾಗಿ ನಡೆಯುವ ಚುನಾವಣೆಯಾಗಿದೆ ಎಂದರು.

ಕಾರ್ಯಕರ್ತರ ಉಳಿವಿಗಾಗಿ ಹಲವು ಕೆಲಸ ಮಾಡಿದ್ದಾರೆ:
ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾದಾಗ ಅವರ ಉಳಿವಿಗಾಗಿ ಅನೇಕ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಇತ್ತೀಚೆಗೆ ನಮ್ಮ ಕಾರ್ಯಕರ್ತರನ್ನು ಗಡಿಪಾರು ಮಾಡುವ ಆದೇಶ ಬಂದಾಗ ಸಹಾಯಕ ಕಮೀಷನರ್‌ಗೆ ಪೋನ್ ಕರೆ ಮಾಡಿ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಸಂದರ್ಭದಲ್ಲೂ ಅವರ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಮೂಲಕ ಮಹತ್ವದ ಕೆಲಸ ಮಾಡಿದ್ದಾರೆ. ಇವತ್ತು ಮುಂದಿನ ಲೋಕಸಭಾ ಚುನಾವಣೆ ಸುಗಮಗೊಳಿಸಲು ಬಿಜೆಪಿ ಕಾರ್ಯನಿರ್ವಹಣಾ ನಗರ ಮತ್ತು ಗ್ರಾಮಾಂತರ ಸಭೆ ನಡೆಸಲಾಗುತ್ತಿದೆ ಎಂದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಸಹಪ್ರಭಾರಿ ರಾಜೇಶ್ ಕಾವೇರಿ, ನಗರಮಂಡಲದ ಉಪಾಧ್ಯಕ್ಷ ಇಂದುಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರೀಶ್ ಆಚಾರ್ಯ, ಯುವರಾಜ್ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್, ಅರುಣ್ ವಿಟ್ಲ, ನಿತೀಶ್ ಕುಮಾರ್ ಶಾಂತಿವನ, ದಯಾನಂದ ಉಜಿರುಮಾರು, ವಿಜಯ ರೈ ಕೊರಂಗ ಅತಿಥಿಗಳನ್ನು ಗೌರವಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು. ಗೌರಿ ಬನ್ನೂರು ಪ್ರಾರ್ಥಿಸಿದರು. ಸಾಮಾಜಿಕ ಜಾಲತಾಣದ ವಿಕಾಸ್ ಪುತ್ತೂರು, ಬಿಜೆಪಿ ಹಿರಿಯ ಪ್ರಮುಖರಾದ ಎಸ್.ಅಪ್ಪಯ್ಯ ಮಣಿಯಾಣಿ, ವಿಶ್ವೇಶ್ವರ ಭಟ್ ಬಂಗಾರಡ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಸ್ತೂರಿ ಪಂಜ, ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸನ್ಮಾನ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಗರ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳ ಘೋಷಣೆ:

ಸಭೆಯಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಘೋಷಣೆ ಮಾಡಲಾಯಿತು. ನಗರ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆಯಾದ ಜಯಶ್ರೀ ನಾೖಕ್‌, ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ವಿಮಲ ಸುರೇಶ್ ಮತ್ತು ಕುಸುಮಾ ಚಂದಪ್ಪ ಅವರಿಗೆ ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಪಕ್ಷದ ಶಾಲು ನೀಡಿ ಜವಾಬ್ದಾರಿ ವಹಿಸಿಕೊಟ್ಟರು.

ನಿಮ್ಮೆಲ್ಲರ ಪ್ರೀತಿಗೆ ಋಣಿಯಾಗಿದ್ದೇನೆ:
ಪಾರ್ಟಿಯನ್ನು ಮಾಸ್ ಆಗಿ ಬೆಳೆಸಬೇಕೆಂದು ನನ್ನನ್ನು ರಾಜ್ಯ ಅಧ್ಯಕ್ಷನನ್ನಾಗಿ ಮಾಡಿದ್ದರು. ಅದಕ್ಕೆ ತಕ್ಕಂತೆ ನಾನು ಸಂಘಟನೆಯ ಆಧಾರದಲ್ಲಿ ಕರಾವಳಿಯಲ್ಲಿ ಬೆಳೆದ ಹಾಗೆ ರಾಜ್ಯ ಸಂಘಟನೆ ಮಾಡಿದೆ. ಅನಿವಾರ್ಯವಾಗಿ ಮೊನ್ನೆಯ ದಿನ ಸೋಲಾಗಿದೆ. ಆದರೂ ಹೆಚ್ಚಿನ ಸಮಯ ರಾಜ್ಯ ಪ್ರವಾಸಕ್ಕೆ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದೇನೆ. ಇವತ್ತು ಸನ್ಮಾನ ಸ್ವೀಕರಿಸಿ ನಿಮ್ಮೆಲ್ಲರ ಪ್ರೀತಿಗೆ ಋಣಿಯಾಗಿದ್ದೇನೆ. ನನ್ನ ಬೆಳವಣಿಗೆಗೆ ಸಂಘಟನೆ ಮತ್ತು ಹಿರಿಯರು ಕಾರಣೀಭೂತರು. ಕೊಟ್ಟಿರುವ ಜವಾಬ್ದಾರಿಯಲ್ಲಿ ಸಾಧನೆ ಮಾಡಿದ್ದೇನೆ ಎಂದು ಹೇಳುವುದಿಲ್ಲ. ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ನೀವು ಕೊಟ್ಟ ಸನ್ಮಾನವನ್ನು ಸಮಸ್ತ ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತೇನೆ. ನಮ್ಮ ಪಾರ್ಟಿ ವಿಚಾರ ಆಧಾರಿತ. ಇಲ್ಲಿ ನಳಿನ್ ಶೂನ್ಯ, ಹಾಗಾಗಿ ಮುಂದಿನ ದಿನವೂ ಪಕ್ಷ ಹೇಳಿದಂತೆ ಕೆಲಸ ಮಾಡುತ್ತೇನೆ.
-ನಳಿನ್ ಕುಮಾರ್ ಕಟೀಲ್, ಸಂಸದರು

LEAVE A REPLY

Please enter your comment!
Please enter your name here