ಫೆ.13, 14: ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ

0

ನೆಲ್ಯಾಡಿ: ಗ್ರಾಮದೇವರಾದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಫೆ.13 ಮತ್ತು 14ರಂದು ವರ್ಷಾವಧಿ ಜಾತ್ರೆ, ದೈವಗಳ ನೇಮೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀ ದೇವರಿಗೆ ಸ್ವರ್ಣ ಕಿರೀಟ, ಬೆಳ್ಳಿಯ ಎದೆ ಕವಚ ಮತ್ತು ಶ್ರೀ ಮಹಾಗಣಪತಿ ದೇವರಿಗೆ ರಜತ ಕವಚ ಸಮರ್ಪಣೆಯೂ ನಡೆಯಲಿದೆ ಎಂದು ಆಡಳಿತ ಮೊಕ್ತೇಸರರು ಮತ್ತು ದೇವಸ್ಥಾನದ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

ಫೆ.12ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಫೆ.13ರಂದು ಬೆಳಿಗ್ಗೆ 8.45ಕ್ಕೆ ಗೊನೆ ಮುಹೂರ್ತ ನಡೆಯಲಿದೆ. 9.30ರಿಂದ ಬಜತ್ತೂರು, ಕಾಂಚನ, ಪದಕ ದೈವಗಳಿಗೆ ತಂಬಿಲ ಮತ್ತು ಬಜತ್ತೂರು ಗುತ್ತಿನ ನಾಗತಂಬಿಲ, 10ಕ್ಕೆ ತೋರಣ ಮುಹೂರ್ತ ನಡೆಯಲಿದೆ. ರಾತ್ರಿ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಗ್ರಾಮ ದೈವವಾದ ಶಿರಾಡಿ ದೈವಗಳ ಭಂಡಾರ ತರುವುದು, 7.30ಕ್ಕೆ ಶ್ರೀ ದೇವರಿಗೆ ಸ್ವರ್ಣ ಕಿರೀಟ, ಎದೆ ಕವಚ, ಶ್ರೀ ಮಹಾಗಣಪತಿ ದೇವರಿಗೆ ರಜಿತ ಕವಚ ಸಮರ್ಪಣೆ ನಡೆಯಲಿದೆ. ರಾತ್ರಿ 8ಕ್ಕೆ ಶ್ರೀ ದೇವರಿಗೆ ರಂಗಪೂಜೆ, ಪಂಜುರ್ಲಿ ಮತ್ತು ಗ್ರಾಮದ ದೈವಗಳಿಗೆ ಕೊಡಿನಾಡಿನಲ್ಲಿ ತಂಬಿಲ ನಡೆಯಲಿದೆ. ರಾತ್ರಿ 8.30ಕ್ಕೆ ಶ್ರೀ ದೇವರ ಬಲಿ ಹೊರಡುವುದು, ಅಶ್ವತ್ಥ ಕಟ್ಟೆಪೂಜೆ, ಉತ್ಸವ, ವಸಂತಕಟ್ಟೆಪೂಜೆ, ನೃತ್ಯ ಬಲಿ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಫೆ.14ರಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, ಕಲಶಾಭಿಷೇಕ, ಗಣಪತಿ ದೇವರಿಗೆ ಅಪ್ಪಸೇವೆ ನಡೆಯಲಿದೆ. 9 ರಿಂದ ಶ್ರೀ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪಂಜುರ್ಲಿ ದೈವಕ್ಕೆ ತಂಬಿಲ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಕ್ಕೆ ಶ್ರೀ ದೇವರಿಗೆ ರಂಗಪೂಜೆ, ವರ್ಣರ ಪಂಜುರ್ಲಿ ದೈವಕ್ಕೆ ತಂಬಿಲ, ಭಂಡಾರ ತೆಗೆಯುವುದು, ದೇವರ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10ರಿಂದ ವರ್ಣರ ಪಂಜುರ್ಲಿ, ಚಕ್ರವರ್ತಿ ಕೊಡಮಣಿತ್ತಾಯ, ಗ್ರಾಮ ದೈವ ಶಿರಾಡಿ ದೈವಗಳ ನೇಮೋತ್ಸವ ನಡೆಯಲಿದೆ. ಫೆ.15ರಂದು ಅಪರಾಹ್ನ 2ಕ್ಕೆ ದೊಂಪದ ಬಲಿಯ ಮಾರಿ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಾಂಸ್ಕೃತಿಕ ಕಾರ್ಯಕ್ರಮ/ಸನ್ಮಾನ
ಫೆ.14ರಂದು ಸಂಜೆ 5ರಿಂದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. 6ರಿಂದ ಕಡಬ ವಿಶ್ವಮೋಹನ ನೃತ್ಯ ಕಲಾಶಾಲೆಯ ವಿದುಷಿ ಮಾನಸ ಪುನೀತ್ ರೈ ಅವರ ಶಿಷ್ಯೆ ಕೀರ್ತನ ಗಣೇಶ್ ಅವರಿಂದ ಭರತನಾಟ್ಯ ಪ್ರಥಮ ಪ್ರದರ್ಶನ ನಡೆಯಲಿದೆ. ರಾತ್ರಿ 6.15 ರಿಂದ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ‘ರತಿ ಕಲ್ಯಾಣ’ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ 8ರಿಂದ ಸನ್ಮಾನ ಸಮಾರಂಭ ನಡೆಯಲಿದೆ.

LEAVE A REPLY

Please enter your comment!
Please enter your name here