ಟಿಡಿಆರ್ ಕ್ಲಿಯರೆನ್ಸ್‌ಗೆ 25ಲಕ್ಷ ರೂ.ಲಂಚ ಸ್ವೀಕಾರ ಪ್ರಕರಣ-ಬಂಧಿತ ಬ್ರೋಕರ್, ಮುಡಾ ಆಯುಕ್ತರಿಗೆ ಜಾಮೀನು ನಿರಾಕರಣೆ

0

ಮಂಗಳೂರು:ಟಿಡಿಆರ್ ಕ್ಲಿಯರೆನ್ಸ್ ಮಾಡಲೆಂದು ಉದ್ಯಮಿಯೊಬ್ಬರಿಂದ 25 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇರಿಸಿದ್ದ ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರ್ ಅಲಿ ಮತ್ತು ಅವರ ನಿರ್ದೇಶನದಂತೆ ಉದ್ಯಮಿಯಿಂದ ಲಂಚವನ್ನು ಸ್ವೀಕರಿಸುತ್ತಿದ್ದ ಬ್ರೋಕರ್ ಮಹಮ್ಮದ್ ಸಲೀಂ ಅವರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

ಮಂಗಳೂರು ತಾಲೂಕಿನ ಕುಡುಪು ಗ್ರಾಮದ 10.8 ಎಕರೆ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿ ಗಿರಿಧರ್ ಶೆಟ್ಟಿ ಖರೀದಿಸಿದ್ದರು.ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ವಿಸ್ತರಿಸುವ ಬಗ್ಗೆ ಅವಶ್ಯವಾಗಿರುವ ಜಮೀನನ್ನು ಟಿಡಿಆರ್ ನಿಯಮದಡಿ ಖರೀದಿ ಮಾಡುವ ಬಗ್ಗೆ ಗಿರಿಧರ್ ಶೆಟ್ಟಿ ಹಾಗೂ ಜಮೀನಿನ ಈ ಹಿಂದಿನ ಮಾಲೀಕರಿಗೆ ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಪತ್ರ ವ್ಯವಹಾರವಾಗಿತ್ತು. ಅದರಂತೆ ಈ ಜಮೀನು 2024ರ ಜನವರಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹೆಸರಿಗೆ ನೋಂದಣಿಯಾಗಿತ್ತು. ಬಳಿಕ ಮಹಾನಗರ ಪಾಲಿಕೆಯ ಆಯುಕ್ತರು ಟಿಡಿಆರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿಯಲ್ಲಿ ಕಡತ ಕಳುಹಿಸಿದ್ದರು.ಆದರೆ ಮುಡಾ ಆಯುಕ್ತ ಮನ್ಸೂರ್ ಆಲಿರವರು ಈ ಕಡತವನ್ನು ವಿಲೇವಾರಿ ಮಾಡದೆ ಬಾಕಿಯಿರಿಸಿದ್ದರು. ಈ ಬಗ್ಗೆ ಗಿರಿಧರ್ ಶೆಟ್ಟಿಯವರು ಮುಡಾ ಆಯುಕ್ತ ಮನ್ಸೂರ್ ಅಲಿಯವರ ಬಳಿ ಹೋಗಿ ಮಾತನಾಡಿದಾಗ 25 ಲಕ್ಷ ರೂ.ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಗಿರಿಧರ ಶೆಟ್ಟಿಯವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಅದರಂತೆ,ಮಾ.23ರಂದು ಮುಡಾ ಆಯುಕ್ತ ಮನ್ಸೂರ್ ಆಲಿ ಹಾಗೂ ಅವರ ನಿರ್ದೇಶನದಂತೆ ಬ್ರೋಕರ್ ಮಹಮ್ಮದ್ ಸಲೀಂರವರು 25 ಲಕ್ಷ ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2024 ಕಲಂ 7(ಎ) ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರಡಿ ಪ್ರಕರಣ ದಾಖಲಾಗಿತ್ತು.ಆರೋಪಿಗಳನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ, ಮಂಗಳೂರು ಇಲ್ಲಿಗೆ ಹಾಜರುಪಡಿಸಿದ ವೇಳೆ ನ್ಯಾಯಾಲಯವು ಏ.8ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು  ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್.ಅವರು ಏ.5ರಂದು ವಜಾಗೊಳಿಸಿದ್ದಾರೆ.ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿರವರು ವಾದಿಸಿದ್ದರು.

LEAVE A REPLY

Please enter your comment!
Please enter your name here