ಪುತ್ತೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ನಿಮಿತ್ತ ಏ.23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಹಾಗೂ ಗಣ್ಯರು ಪುತ್ತೂರಿನ ಪಂಜಳದಲ್ಲಿರುವ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ. ವಂ|ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಇವರ ನಿವಾಸಕ್ಕೆ ತೆರಳಿ ಚುನಾವಣೆಯ ಪ್ರಯುಕ್ತ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆಯನ್ನು ಹಾಗೂ ಕ್ರೈಸ್ತ ಸಮುದಾಯದ ಕುಂದು ಕೊರತೆಗಳು ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ವಂ| ಬಿಷಪ್ ಗೀವರ್ಗೀಸ್ ಮಾರ್ ಮಕಾರಿಯೋಸ್ ರವರು ಎಲ್ಲರನ್ನು ಸ್ವಾಗತಿಸಿ ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲೆಯ ಕ್ಯಾಥೋಲಿಕ್ ಸಭೆಯಲ್ಲಿ ಪುತ್ತೂರು ಧರ್ಮ ಪ್ರಾಂತ್ಯವನ್ನು ಪ್ರತಿನಿಧಿಸುವ ಸೀರೋ ಮಲಂಕರ ಧರ್ಮಸಭೆಯ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಕರ್ನಾಟಕ ರಾಜ್ಯಾದ್ಯಂತ ಪುತ್ತೂರು ಧರ್ಮ ಸಭೆಯ ಅಧೀನದಲ್ಲಿದೆ. ಹಾಗೆಯೇ ಮಂಗಳೂರು ಧರ್ಮ ಪ್ರಾಂತ್ಯದ ಲ್ಯಾಟಿನ್ ಧರ್ಮಸಭೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಕರ್ನಾಟಕ ರಾಜ್ಯಾದ್ಯಂತ ಇದೆ. ಹಾಗೆಯೇ ಬೆಳ್ತಂಗಡಿ ಧರ್ಮಪ್ರಾಂತ್ಯದ ಅಧೀನದಲ್ಲಿ ಸೀರೊ ಮಲಬಾರ್ ಧರ್ಮಸಭೆಯ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಇವೆ. ಹಾಗೆಯೇ ಕ್ರೈಸ್ತ ಧರ್ಮ ಸಭೆಗಳಾದ ಓರ್ಥೋಡೊಕ್ಸ್ ಪಂಗಡ, ಜಾಕೊ ಬೈಟ್ಸ್ ಪಂಗಡ ಪ್ರೊಟೆಸ್ಟೆಂಟ್ ಚರ್ಚ್ ಗಳು, ಅನೇಕ ಕ್ರೈಸ್ತ ಮಿಷನರಿಗಳು ಹಾಗೂ ಧರ್ಮಭಗಿನಿಯರು ನಡೆಸುವ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಅನಾಥಾಲಯಗಳು, ಆಸ್ಪತ್ರೆಗಳು, ವಿಶೇಷ ಅಗತ್ಯವುಳ್ಳ ಶಿಕ್ಷಣ ಸಂಸ್ಥೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಶತಮಾನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸೇವೆ ಸಲ್ಲಿಸುವುದರ ಜೊತೆಗೆ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಕ್ರೈಸ್ತ ಸಮುದಾಯಗಳು ಸಾಕಷ್ಟು ಕೊಡುಗೆಗಳನ್ನು ನೀಡಿದೆ. ರಾಷ್ಟ್ರದ ಹಿತಕ್ಕಾಗಿ ಯಾವುದೇ ಪಕ್ಷಭೇದ ಮರೆತು ರಾಷ್ಟ್ರದ ಏಳಿಗೆಗೆ ಸದಾ ಸೇವಾ ಮನೋಭಾವದಿಂದ ಕಾರ್ಯಪ್ರವೃತ್ತರಾಗುತ್ತಿರುವ ಕ್ರೈಸ್ತರಿಗೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಭದ್ರತೆಯ ಅಗತ್ಯತೆ ಇದೆ. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಮ್ಮ ಸಮುದಾಯದ ಪ್ರತಿನಿಧಿಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಾಧಿನಿತ್ಯವನ್ನು ನೀಡುವಂತೆ ಬಿಷಪ್ ರವರು ಸರ್ಕಾರಕ್ಕೆ ಕ್ರೈಸ್ತ ಸಮುದಾಯಗಳ ಪರವಾಗಿ ಮನವಿ ಮಾಡಿದರು. ಸುಭದ್ರ ಸರಕಾರದ ರಚನೆಗೆ ಹಾಗೂ ಸಾಮರಸ್ಯದ ಬದುಕಿಗೆ ಪ್ರತಿಯೊಬ್ಬರೂ ಮತದಾನ ಮಾಡುವುದರ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಲು ನಮ್ಮ ಕರ್ತವ್ಯವನ್ನು ಮರೆಯದೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಕರೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ರಾಜಕೀಯ ಮುಖಂಡರಾದ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ವಿನಯರಾಜ್, ವಕೀಲರಾದ ಜಯರಾಜ್, ಕರ್ನಾಟಕ ಗೇರು ನಿಗಮದ ಅಧ್ಯಕ್ಷರಾದ ಶ್ರೀಮತಿ ಮಮತಾ ಗಟ್ಟಿ, ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ ಪಿ ವರ್ಗಿಸ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್, ಯುವ ಘಟಕದ ಅಧ್ಯಕ್ಷ ಕಿರಣ್, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀಮತಿ ವಲ್ಸಮ್ಮ , ಪುತ್ತೂರು ನಗರ ಪಾಲಿಕೆಯ ಮಾಜಿ ಉಪಾಧ್ಯಕ್ಷರಾದ ಲ್ಯಾನ್ಸಿ ಮಸ್ಕರೇನ್ಹಸ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುರಿಯನ್, ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರುಗಳಾದ ಸಾಬು ಉರುಂಬಿಲ್, ಟಿ.ಯಂ ಮತ್ತಾಯಿ , ಶ್ರೀಮತಿ ಉಷಾ ಜೋಯಿ. ಶ್ರೀಮತಿ ಉಷಾ ಅಂಚನ್, ಥಾಮಸ್ ಈಡೆಯಾಲ್, ಮನೋಜ್, ಶಾಜಿ ಹೀಗೆ ಅನೇಕ ಮುಖಂಡರು, ಎಲ್ಲಾ ಧರ್ಮ ಗುರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.