ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಆಯ್ಕೆ

0

ಪುತ್ತೂರು: ಹವ್ಯಾಸಿ ಕಲಾವಿದ, ಬರಹಗಾರ, ಕಲಾಪೋಷಕ, ನಿವೃತ್ತ ಬ್ಯಾಂಕ್ ಅಧಿಕಾರಿ ಬೆಟ್ಟಂಪಾಡಿ ಸುಂದರ ಶೆಟ್ಟಿಯವರಿಗೆ ಈ ಸಾಲಿನ ಆರ್ಯಭಟ ಪ್ರಶಸ್ತಿ ಘೋಷಿಸಲಾಗಿದೆ. ಕುಂಬ್ಳೆ ಸಮೀಪದ ಕಾರಿಂಜಗುತ್ತು ಮನೆತನಕ್ಕೆ ಸೇರಿದ ಇವರು ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಮುಂಡೂರಿನ ಕೃಷಿ ಮನೆತನದಲ್ಲಿ ಹುಟ್ಟಿದವರು. ಯಕ್ಷಗಾನದ ತೆಂಕು ಬಡಗಿನ ಖ್ಯಾತ ಹಾಸ್ಯ ಕಲಾವಿದ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಮತ್ತು ಶರ್ವಾಣಿ ಬಿ. ಶೆಟ್ಟಿಯವರ ಪುತ್ರ.

ಸುಂದರ ಶೆಟ್ಟಿಯವರು ಬಿ.ಕಾಂ. ಸಿಎಐಐಬಿ ಎಂ.ಬಿ.ಎ. ಪದವೀಧರರು. ವಿಜಯಾ ಬ್ಯಾಂಕ್‌ (ಪ್ರಸ್ತುತ ಬ್ಯಾಂಕ್ ಆಫ್ ಬರೋಡಾ) ನಲ್ಲಿ ಉದ್ಯೋಗ ಪಡೆದು ದಕ್ಷಿಣೋತ್ತರ ಭಾರತದ ಪ್ರಮುಖ
ನಗರಗಳಲ್ಲಿ ದುಡಿದಿದ್ದು, ಜತೆ ಜತೆಯಾಗಿ ಕನ್ನಡ ನಾಡು ನುಡಿಗಾಗಿಯೂ ತೊಡಗಿಸಿಕೊಂಡವರು. ಕಾರ್ಮಿಕ ಸಂಘ, ಅಧಿಕಾರಿ ಸಂಘಗಳಲ್ಲಿ ಪದಾಧಿಕಾರಿಗಳಾದವರು. ತುಳುಕೂಟ ಪುತ್ತೂರು
ಕಾರ್ಯದರ್ಶಿಯಾಗಿ, ಅಖಿಲ ಭಾರತ ತುಳು ಒಕ್ಕೂಟದ ಸಮಿತಿಯಲ್ಲಿಯೂ ಪದಾಧಿಕಾರಿಯಾಗಿ, ಬೆಂಗಳೂರು ಬ್ಯಾಂಕ್ ಕನ್ನಡ ಸಂಘಗಳ ಒಕ್ಕೂಟದಲ್ಲೂ ಕೆಲಸ ನಿರ್ವಹಿಸಿದ್ದಾರೆ. ಪುತ್ತೂರು ಜೇಸಿ ಅಧ್ಯಕ್ಷರಾಗಿದ್ದು, ಲಯನ್ಸ್ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡವರು. ವಿಜಯ ಬ್ಯಾಂಕಿನಿಂದ ಮುಖ್ಯ ಪ್ರಬಂಧಕರಾಗಿ ನಿವೃತ್ತಿಗೊಂಡ ಬಳಿಕ ಕೃಷಿಯ ಜತೆ ಯಕ್ಷಗಾನದಲ್ಲಿ ತೊಡಗಿಸಿಕೊಂಡವರು. ತಂದೆಯವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಿ, ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಿದ್ದಾರೆ. ಅಶಕ್ತ ಕಲಾವಿದರಿಗೆ ಧನಸಹಾಯ ನೀಡುತ್ತಿದ್ದಾರೆ. ಪ್ರಕೃತ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ಗೌರವ ಅಧ್ಯಕ್ಷರಾಗಿ, ಮಂಗಳೂರು ಯಕ್ಷಾಂಗಣದ ಉಪಾಧ್ಯಕ್ಷರಾಗಿ, ಪಟ್ಲ ಟ್ರಸ್ಟ್‌ನಲ್ಲಿ ಓರ್ವ ಟ್ರಸ್ಟಿಯಾಗಿ, ಲಯನ್ಸ್ ಜಿಲ್ಲಾ ಸಂಪುಟದಲ್ಲಿ ಯಕ್ಷಗಾನವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ “ಪುತ್ತೂರಿನಿಂದ ಹತ್ತೂರಿಗೆ” ಎಂಬ ಪ್ರವಾಸಿ ಕಥನವನ್ನು ಬರೆದು ಪ್ರಕಟಿಸಿರುತ್ತಾರೆ.
ಇವರ ಪತ್ನಿ ಸುರೇಖ ಎಸ್. ಶೆಟ್ಟಿ, ಪ್ರಥಮ ಪುತ್ರ ಸೂರಜ್ ಶೆಟ್ಟಿಯವರು ದೇರಳಕಟ್ಟೆಯ ಕೆ.ಎಸ್‌. ಮೆಡಿಕಲ್ ವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಿರಿಯ ಸೊಸೆ ವೈದ್ಯೆಯಾಗಿದ್ದಾರೆ. ದ್ವಿತೀಯ ಪುತ್ರ ಧೀರಜ್ ಶೆಟ್ಟಿ ಅಮೇರಿಕಾದಲ್ಲಿ ಪತ್ನಿ ಜೊತೆ ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದಾರೆ. ಸುಂದರ ಶೆಟ್ಟಿಯವರು ಮಂಗಳೂರು ನಗರದ ಕದ್ರಿಯ ಮಂಜುಶ್ರೀ ಬಡಾವಣೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಸುಮ ಸೌರಭ ಪ್ರಶಸ್ತಿ, ಚೈತನ್ಯಶ್ರೀ ಪ್ರಶಸ್ತಿ, ಶಿವಾನಂದ ಸ್ಮೃತಿ ಗೌರವದೊಂದಿಗೆ ಹಲವಾರು ಸನ್ಮಾನಗಳು ದೊರೆತಿವೆ. ಇದೀಗ ಇವರ ಸಮಾಜ ಸೇವೆ ಗುರುತಿಸಿ ಆರ್ಯಭಟ ಪ್ರಶಸ್ತಿ’ಗೆ ಭಾಜನರಾಗಿದ್ದು, ಜೂ.23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

LEAVE A REPLY

Please enter your comment!
Please enter your name here