ಜು.19: ಪುತ್ತೂರಿನಲ್ಲಿ ಚಾರಿತ್ರಿಕ ಕಾರ್ಯಕ್ರಮ – ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ

0

ಪುತ್ತೂರು: ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆಯ ನೆಲೆಯಲ್ಲಿ ಬೃಹತ್ ಕಾರ್ಯಕ್ರಮವೊಂದು ಪುತ್ತೂರಿನಲ್ಲಿ ಆಯೋಜನೆಗೊಳ್ಳುತ್ತಿದೆ. ಪುತ್ತೂರಿನಲ್ಲಿ ’ಅಮರ್ ಜವಾನ್ ಜ್ಯೋತಿ ಸ್ಮಾರಕ’ವನ್ನು ರೂಪಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಂದಾಳತ್ವದಲ್ಲಿ ಮಾಜಿ ಸೈನಿಕರ ಸಂಘ, ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿಯೇ ಮೊದಲಾದ ಅನ್ಯಾನ್ಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ಜು.19ರಂದು ಅಮರ್ ಜವಾನ್ ಜ್ಯೋತಿ ಸ್ಮಾರಕದ ಮುಂಭಾಗದಲ್ಲಿರುವ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ.

ಕಳೆದ ಶತಮಾನದ ಕೊನೆಯ ಘಟ್ಟದಲ್ಲಿ ಜಾಗತಿಕವಾಗಿ ತೆರೆದುಕೊಂಡ ಭಾರತೀಯ ಸೈನ್ಯದ ಶಕ್ತಿ ಸಾಮರ್ಥ್ಯ ಚರಿತ್ರೆಯ ಪುಟಗಳಲ್ಲಿ ಸಾಹಸಗಾಥೆಯಾಗಿ ಉಲ್ಲೇಖಿಸಲ್ಪಟ್ಟಿದೆ. ಎಂತಹ ಪ್ರತಿಕೂಲ ವಾತಾವರಣದಲ್ಲೂ, ಪ್ರಾಕೃತಿಕವಾಗಿಯೂ ಅಸಹಕಾರಿ ಸಂದರ್ಭಗಳಲ್ಲೂ ಭಾರತೀಯ ಸೇನೆ ಹೇಗೆ ಪರಾಕ್ರಮ ಮೆರೆಯಬಲ್ಲುದೆಂಬುದಕ್ಕೆ ಕಾರ್ಗಿಲ್ ಯುದ್ಧ ಜ್ವಲಂತ ಸಾಕ್ಷಿ. ಕಾರ್ಗಿಲ್ ಹೋರಾಟದಲ್ಲಿ ನಮ್ಮ ಸೈನಿಕರು ತಮಗೆ ಎದುರಾದ ಸಹಸ್ರ ಸಹಸ್ರ ಸವಾಲುಗಳನ್ನೆದುರಿಸಿ ಪ್ರಾಣಾರ್ಪಣೆ ಮಾಡಿ ದೇಶದ ಗೌರವ, ಮಾನ ರಕ್ಷಿಸಿದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಯುದ್ಧದ ಬಿಸಿ ನೇರವಾಗಿ ತಟ್ಟಿಲ್ಲ. ಅಕಸ್ಮಾತ್ ಪಾಕಿಸ್ಥಾನದೆದುರಿಗಿನ ಯುದ್ಧದಲ್ಲಿ ಭಾರತೀಯ ಸೈನಿಕರು ನಮ್ಮೆಲ್ಲರನ್ನು ರಕ್ಷಿಸದೇ ಇರುತ್ತಿದ್ದರೆ ಇಂದು ನಾವು ಹೀಗೆ ಬದುಕುವುದಕ್ಕೆ ಸಾಧ್ಯವಿರುತ್ತಿರಲಿಲ್ಲ ಎಂಬುದು ಮಾತ್ರ ಗಮನದಲ್ಲಿರಬೇಕಾದ ಸತ್ಯ! ’ಅಕಸ್ಮಾತ್ ಸೋತಿದ್ದರೆ’ ಎಂಬ ಯೋಚನೆಯೇ ನಮ್ಮ ಎದೆಯಲ್ಲಿ ನಡುಕ ಹುಟ್ಟಿಸುವಂಥದ್ದು. ಹೀಗೆ ನಮ್ಮೆಲ್ಲರನ್ನು ಉಳಿಸಿದ, ಹೆಮ್ಮೆಯಿಂದ ಬದುಕುವಂತೆ ಮಾಡಿದ ಗೆಲುವು ಕಾರ್ಗಿಲ್. ಇಂತಹ ಕಾರ್ಗಿಲ್ ವಿಜಯಕ್ಕೆ 25 ವರ್ಷ ತುಂಬಿರುವ ಸಂದರ್ಭದಲ್ಲಿ ಪುತ್ತೂರು ಒಂದು ಚಾರಿತ್ರಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.

ಈ ಕಾರ್ಯಕ್ರಮದಲ್ಲಿ ಪುತ್ತೂರು ಮಾತ್ರವಲ್ಲದೆ ನಾನಾ ಭಾಗಗಳಿಂದ ದೇಶಭಕ್ತ ಬಂಧುಗಳು ಭಾಗಿಯಾಗಲಿದ್ದಾರೆ. ಮಂಗಳೂರು ಕೊಡಗು ಮೊದಲಾದ ಭಾಗಗಳ ಮಾಜಿ ಸೈನಿಕರ ತಂಡಗಳೂ ಭಾಗಿಯಾಗಲಿವೆ. ಅನೇಕ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ವೃಂದದವರು ಮಾತ್ರವಲ್ಲದೆ ಪುತ್ತೂರು ಹಾಗೂ ಸುತ್ತಮುತ್ತಲಿನ ರಾಜಕೀಯ ನೇತಾರರು, ಉದ್ಯಮಿಗಳು, ಗಣ್ಯರು, ಅಧಿಕಾರಿ ವರ್ಗ, ಸೇವಾ ಸಂಘಟನೆಗಳು ಭಾಗಿಯಾಗಲಿವೆ. ಬೆಳಗ್ಗೆ 9.3೦ಕ್ಕೆ ದರ್ಬೆ ವೃತ್ತದಿಂದ ಬೃಹತ್ ಮೆರವಣಿಗೆ ನಡೆಯಲಿದ್ದು ಕಾರ್ಗಿಲ್ ಹೋರಾಟದಲ್ಲಿ ಮೆರೆದ ವಿಕ್ರಮಕ್ಕಾಗಿ ಸೇನೆಯ ಅತ್ಯುಚ್ಚ ಗೌರವವಾದ ಪರಮವೀರ ಚಕ್ರ ಪ್ರಶಸ್ತಿ ಪಡೆದ ಕ್ಯಾ.ಯೋಗೀಂದ್ರ ಸಿಂಗ್ ಯಾದವ್ ಹಾಗೂ ಕಾರ್ಗಿಲ್ ಹೋರಾಟದಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿ, ಅಂತಿಮವಾಗಿ ತನ್ನ ಕಾಲುಗಳನ್ನು ಕಳೆದುಕೊಂಡರೂ ಸಾಹಸ ಬಿಡದ ಕೊಡಗಿನ ವೀರಯೋಧ, ಸೇನಾಪದಕ ಪುರಸ್ಕೃತ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನು ತೆರೆದ ವಾಹನದಲ್ಲಿ ಕಿಲ್ಲೆ ಮೈದಾನಕ್ಕೆ ಕರೆತರಲಾಗುತ್ತಿದೆ. ಈ ಸಂದರ್ಭದಲ್ಲಿ ಆ ಅಸಾಮಾನ್ಯ ಯೋಧರಿಗೆ ಹಾರಾರ್ಪಣೆ ಮಾಡಿ ಗೌರವಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ.

ಸಭಾ ಕಾರ್ಯಕ್ರಮ:
ಪೂರ್ವಾಹ್ನ 11.30ಕ್ಕೆ ಅಮರ್ ಜವಾನ್ ಜ್ಯೋತಿ ಸ್ಮಾರಕದ ಮುಂಭಾಗದ ಕಿಲ್ಲೆ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪುತ್ತೂರಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. ಪರಮವೀರ ಚಕ್ರ ಪುರಸ್ಕೃತ ಕ್ಯಾ.ಯೋಗೀಂದ್ರ ಯಾದವ್ ಹಾಗೂ ಸೇನಾಪದಕ ಪುರಸ್ಕೃತ ಕ್ಯಾ.ನವೀನ್ ನಾಗಪ್ಪ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿರುವರು. ಪುತ್ತೂರಿನ ಮಾಜಿ ಶಾಸಕರುಗಳಾದ ಸಂಜೀವ ಮಠಂದೂರು, ಶಕುಂತಲಾ ಶೆಟ್ಟಿ, ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ನಗರ ಸಭಾ ಆಯುಕ್ತ ಮಧು ಎಸ್ ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿರಲಿದ್ದಾರೆ.

ಮಳೆಯಿಂದ ತೊಂದರೆಯಾಗದಂತೆ ಸಿದ್ಧತೆ:
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಹಾಗೂ ಕಿಲ್ಲೆ ಮೈದಾನಕ್ಕೆ ಶೀಟ್ ವ್ಯವಸ್ಥೆ ಮಾಡಲಾಗಿದೆ. ಸುಮಾರು ಮೂರು ಸಾವಿರ ಜನರಿಗೆ ಕುಳಿತುಕೊಳ್ಳುವ ಆಸನಗಳನ್ನೂ ಸಿದ್ಧಪಡಿಸಲಾಗಿದೆ. ವೇದಿಕೆಗೆ ಎಲ್.ಇ.ಡಿ ವ್ಯವಸ್ಥೆಯನ್ನೂ ಅಳವಡಿಸಲಾಗುತ್ತಿದೆ.



ಯೋಧರು ನಮ್ಮ ದೇಶದ ಆಸ್ತಿ. ಮೈನಸ್ 40 ಡಿಗ್ರಿಗಿಂತಲೂ ಕೆಳಗಿನ ಕೊರೆಯುವ ಚಳಿಯಲ್ಲಿ ನಮಗಾಗಿ ತಮ್ಮ ಬದುಕನ್ನು ಅರ್ಪಿಸಿಕೊಂಡವರು. ಪರಮವೀರ ಚಕ್ರ ಪ್ರಶಸ್ತಿ ಪಡೆದವರನ್ನು ನೋಡುವುದೇ ವಿದ್ಯಾರ್ಥಿಗಳ ಪುಣ್ಯ. ವರ್ಷಪೂರ್ತಿ ನಮಗಾಗಿ ಮಳೆ ಚಳಿ ಗಾಳಿ ಲೆಕ್ಕಿಸದ ಸೈನಿಕರನ್ನು ಗೌರವಿಸುವುದಕ್ಕಾಗಿ ತುಸು ಸಮಯ ಮಳೆ ಗಾಳಿಯನ್ನು ಲೆಕ್ಕಿಸದೆ ಬೃಹತ್ ಮೆರವಣಿಗೆಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾಗವಹಿಸಬೇಕು. ಮಾತ್ರವಲ್ಲದೆ ನಾಗರಿಕರೆಲ್ಲರೂ ಅಂತಹ ವೀರ ಯೋಧರನ್ನು ಪುಷ್ಪಾರ್ಚನೆ ಮಾಡಿ ಸ್ವಾಗತಿಸಬೇಕಾದದ್ದು ಕರ್ತವ್ಯ. ಈ ದೇಶದ ಸಂಪತ್ತನ್ನು ಅನುಭವಿಸಿದ ಋಣದಲ್ಲಿ ನಾವಿದ್ದೇವೆ. ಈ ದೇಶದ ಅನ್ನವನ್ನು ಉಂಡು ಬೆಳೆದ ನಾವು ದೇಶವನ್ನು ಕಾಪಾಡಿದ ವೀರ ಯೋಧರನ್ನು ಗೌರವಿಸಲೂ ಸಮಯ ಮಾಡಿಕೊಳ್ಳದಿದ್ದರೆ ನಾವು ಈ ದೇಶದ ಪ್ರಜೆಗಳಾಗಿ ಏನು ಪ್ರಯೋಜನ? ಹಾಗಾಗಿ ಪ್ರತಿಯೊಬ್ಬರೂ ಅರ್ಧ ದಿನ ಬಿಡುವು ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕು.”
– ಸುಬ್ರಹ್ಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು

LEAVE A REPLY

Please enter your comment!
Please enter your name here