ಪುತ್ತೂರು: ಇತ್ತೀಚಿನ ದಿನಗಳಲ್ಲಿ ಮಾರಕ ಡೆಂಗ್ಯೂ ಸೇರಿದಂತೆ ಹಲವು ಸಾಂಕ್ರಮಿಕ ಖಾಯಿಲೆಗಳು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಒಳಮೊಗ್ರು ಗ್ರಾ.ಪಂ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿದೆ. ಗ್ರಾಮದ ಹಲವು ಕಡೆಗಳಲ್ಲಿ ಕಸ,ತ್ಯಾಜ್ಯಗಳನ್ನು ರಸ್ತೆ ಬದಿಗೆ ಎಸೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ರಸ್ತೆ ಬದಿಗೆ ಕಸ, ತ್ಯಾಜ್ಯ ಇತ್ಯಾದಿಗಳನ್ನು ಹಾಕುವವರ ವಿರುದ್ಧ ಸೂಕ್ತ ಕಾನೂನು ಕ್ರಮದೊಂದಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೂ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ. ಇದಲ್ಲದೆ ಗ್ರಾಮದಲ್ಲಿ ಯಾರಾದರೂ ಕಸ,ತ್ಯಾಜ್ಯ ಇತ್ಯಾದಿಗಳನ್ನು ರಸ್ತೆ ಬದಿಗೆ ಎಸೆದು ಹೋಗುತ್ತಿರುವುದು ಕಂಡು ಬಂದರೆ ಅಂತವರ ಮಾಹಿತಿಯನ್ನು ಫೋಟೋ ಇದ್ದರೆ ಫೋಟೋ ಸಮೇತ ಗ್ರಾ.ಪಂ ಕಛೇರಿಗೆ ನೀಡಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಮಾಹಿತಿ ನೀಡಿದವರಿಗೆ ಗ್ರಾಪಂನಿಂದ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಮಾಹಿತಿ ನೀಡಿದವರ ಹೆಸರನನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸದೆ ಗೌಪ್ಯವಾಗಿಡಲಾಗುವುದು ಎಂದು ತಿಳಿಸಲಾಗಿದೆ.
ಮಾರಕ ಡೆಂಗ್ಯೂ ರೋಗವನ್ನು ತಡೆಯುವಲ್ಲಿ ಪ್ರಮುಖವಾಗಿ ನಮ್ಮ ಮನೆ, ಅಂಗಡಿ ಮುಂಗಟ್ಟುಗಳ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತೀ ಅವಶ್ಯಕ ಆದ್ದರಿಂದ ಮನೆ, ಅಂಗಡಿ, ಹೊಟೇಲ್, ವ್ಯಾಪಾರ ಮಳಿಗೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಹಳೆಯ ಪಾತ್ರೆ, ಟಯರ್, ಸಿಯಾಳದ ಗೆರಟೆ ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ವ್ಯಾಪಾರಸ್ಥರ ಜವಾಬ್ದಾರಿಯಾಗಿದೆ. ಎಲ್ಲಾದರೂ ಸೊಳ್ಳೆ ಉತ್ಪತ್ತಿಯಾಗುವಂತಹ ಸ್ಥಳಗಳಿದ್ದರೆ ಅದರ ಮಾಹಿತಿಯನ್ನು ಕೂಡ ಪಂಚಾಯತ್‌ಗೆ ನೀಡುವಂತೆ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಕೇಳಿಕೊಂಡಿದ್ದಾರೆ.