ಕಾರ್ಮಿಕ ಶಿವಪ್ಪರವರ ಸಾವಿನ ಪ್ರಕರಣ ಖಂಡಿಸಿ ಆದಿ ದ್ರಾವಿಡ ಸಂಘದಿಂದ ಪ್ರತಿಭಟನೆ

0

ಪುತ್ತೂರು: ಕಾರ್ಮಿಕ ಶಿವಪ್ಪ ರವರ ಮೃತದೇಹವನ್ನು ಪಿಕಪ್‌ನಲ್ಲಿ ತಂದು ರಸ್ತೆ ಬದಿ ಮಲಗಿಸಿದ ಅಮಾನವೀಯ ಕೃತ್ಯ ಖಂಡಿಸಿ, ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ನ.22ರಂದು ಆದಿ ದ್ರಾವಿಡ ಸಮಾಜ ಸೇವಾ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಘಟನೆಯ ಪ್ರಮುಖ ಆರೋಪಿಗಳ ಬಂಧನಕ್ಕೆ ಎರಡು ದಿನಗಳ ಗಡುವು ನೀಡಲಾಗುವುದು. ಬಂಧಿಸದಿದ್ದರೆ ಎಲ್ಲಾ ದಲಿತ ಸಂಘಟನೆಗಳು ಒಟ್ಟು ಸೇರಿ ನಗರ ಠಾಣೆಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದಾರೆ.


ಘಟನೆ ಖಂಡಿಸಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಎಸ್ಪಿ, ಡಿವೈಎಸ್ಪಿಯವರೊಂದಿಗೆ ಚರ್ಚೆ ಮಾಡಲಾಗಿದೆ. ಇಲಾಖೆಯ ನಿಯಮದಂತೆ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಎಸ್ಪಿಯವರೇ ತಿಳಿಸಿದ್ದಾರೆ. ನಿಮಗಾದ ನೋವು ನಮಗಾದಂತೆ. ನ್ಯಾಯ ದೊರೆಯಬೇಕು. ಘಟನೆಯ ಬಗ್ಗೆ ನನ್ನ ಗಮನಕ್ಕೆ ಬಂದ ಕೂಡಲೇ ಎಸ್ಪಿ, ಡಿವೈಎಸ್ಪಿಯವರಿಗೆ ಕರೆ ಮಾಡಿ ವಿಚಾರಿಸಿದ್ದೇನೆ. ದೌರ್ಜನ್ಯ ಪ್ರಕರಣದಲ್ಲಿ ಖುದ್ದು ಎಸ್ಪಿಯವರೇ ತನಿಖೆಯಲ್ಲಿದ್ದಾರೆ. ತನಿಖೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಒಬ್ಬನ ಬಂಧನವಾಗಿದೆ. ಎಸ್ಪಿಯವರ ನೇತೃತ್ವದಲ್ಲಿ ತಂಡವಾಗಿ ಈಗಾಗಲೇ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಹಾಯಕ ಆಯುಕ್ತರು ತಿಳಿಸಿದರು.


ದಲಿತ ಸಂಘರ್ಷ ಸಮಿತಿ ಸ್ಥಾಪಕಾಧ್ಯಕ್ಷ ಶೇಷಪ್ಪ ಬೆದ್ರಕಾಡು ಮಾತನಾಡಿ, ದಲಿತ ಸಮಾಜದ ಶಿವಪ್ಪರವರ ಸಾವಿನಲ್ಲಿ ಹೆನ್ರಿಯವರು ಅಮಾನವೀಯವಾಗಿ ವರ್ತಿಸಿದ್ದಾರೆ. ಘಟನೆ ನಡೆದು ಹಲವು ದಿನಗಳಾಗಿದೆ. ಆದರೂ ಅರೋಪಿಗಳನ್ನು ಬಂಧಿಸಿಲ್ಲ. ನಾವು ಅಂಬೇಡ್ಕರ್ ಅನುಯಾಯಿಗಳು. ಕಾನೂನಿಗೆ ಗೌರವ ಕೊಡುವವರು. ನಮ್ಮ ತಾಳ್ಮೆ ಪರೀಕ್ಷಿಸುವುದು ಬೇಡ. ಆರೋಪಿಗಳ ಬಂಧನಕ್ಕೆ ಎರಡು ದಿನಗಳ ಕಾಲಾವಕಾಶ ನೀಡುತ್ತೇವೆ. ನ.24ರ ಸಂಜೆಯ ಒಳಗಾಗಿ ಬಂಧಿಸದಿದ್ದರೆ ನಾವು ನ.25ರಂದು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ. ಆಸ್ತಿ, ಪಾಸ್ತಿಗೆ ನಷ್ಟ ಉಂಟುಮಾಡುವುದಿಲ್ಲ. ನಮಗೆ ಯಾರ ಅನುಮತಿಯೂ ಬೇಡ. ತಾಳ್ಮೆಯ ಕಟ್ಟೆ ಒಡೆದರೆ ನಾವು ಬೇರೆ ದಾರಿಯಲ್ಲಿ ಹೋಗುತ್ತೇವೆ. ನಮ್ಮ ತಾಳ್ಮೆಯಲ್ಲಿ ಆಟವಾಡಿದರೆ ನಾವೂ ಆಟವಾಡುವ ಸಂದರ್ಭ ಬರಬಹುದು. ಅದಕ್ಕೆ ಅವಕಾಶ ಕೊಡಬಾರದು. ನಾವು ಠಾಣೆಗೆ ಶಾಂತಿಯುತವಾಗಿ ಮುತ್ತಿಗೆ ಹಾಕುತ್ತೇವೆ. ಪೊಲೀಸ್ ಇಲಾಖೆ ಬಲಪ್ರಯೋಗ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.


ಅನುಮತಿ ನಿರಾಕರೆಣೆಗೆ ಆಕ್ರೋಶ:
ನಗರ ಠಾಣೆಯ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಸಂಘಟನೆಯವರು ಸಿದ್ದತೆ ಮಾಡಿದ್ದರು. ಆದರೆ ಪೊಲೀಸ್ ಇಲಾಖೆಯವರು ಇದಕ್ಕೆ ಅನುಮತಿ ನೀಡದೇ ಇರುವುದರಿಂದ ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದ್ದೇವೆ. ಪೊಲೀಸರು ಅನುಮತಿ ನಿರಾಕರಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ಯಾವುದೋ ಮೆರವಣಿಗೆಗೆ ರಸ್ತೆ ಬಂದ್ ಮಾಡುತ್ತಾರೆ. ಆಗ ಪೊಲೀಸರಿಗೆ ರಸ್ತೆ ತಡೆ ಉಂಟಾಗುವುದಿಲ್ಲ. ನಾವು ನ್ಯಾಯಕ್ಕಾಗಿ ಕೆಲ ಕಾಲ ರಸ್ತೆ ತಡೆ ಮಾಡಿದರೆ ಮಾತ್ರ ಜನರಿಗೆ ತೊಂದರೆಯಾಗುವುದಾ ಎಂದು ಪ್ರತಿಭಟನಕಾರರು ಪ್ರಶ್ನಿಸಿದ್ದಾರೆ. ನಾವು ಸಂವಿಧಾನ ಬದ್ಧವಾಗಿ ಪೊಲೀಸರಲ್ಲಿ ಅನುಮತಿ ಕೇಳಿದ್ದೇವೆ. ಆದರೆ ಅವರು ನಿರಾಕರಿಸಿದ್ದಾರೆ. ಘಟನೆ ನಡೆದು ಇಷ್ಟು ದಿನ ಕಳೆದರೂ ಇನ್ನೂ ಬಂಧನವಾಗಿಲ್ಲ. ಪೊಲೀಸರು ನಿರ್ಲಕ್ಷ ಮಾಡುತ್ತಿದ್ದಾರೆ. ಪೊಲೀಸರಿಗೆ ಇನ್ನೂ ಕಾಲಾವಕಾಶ ನೀಡಬಾರದು. ಆರೋಪಿಗಳನ್ನು ಬಂಧಿಸದಿದ್ದರೆ ಠಾಣೆಗೆ ಮುತ್ತಿಗೆ ಹಾಕುತ್ತೇವೆ. ಆಗ ಏನು ಮಾಡುತ್ತಾರೆ ನೋಡುವಾ. ಎಲ್ಲರ ಮೇಲೂ ಕೇಸು ಹಾಕಲಿ. ನಮ್ಮ ಮೇಲೆ ಯಾವುದೇ ರೀತಿಯ ಕೇಸುಗಳಾದರೂ ನಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.


ಮಗನನ್ನು ಬಂಧಿಸಿ:
ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಲಾಗಿದೆ. ಅವರಿಗೆ ಮೂವತ್ತು ಸಾವಿರ ರೂಪಾಯಿ ನೀಡಲಾಗಿದೆ ಎಂದು ಹೆನ್ರಿಯವರ ಮಗ ಹೇಳಿಕೆ ನೀಡಿದ್ದಾನೆ. ಇದು ಎಲ್ಲರಿಗೂ ನೋವುಂಟು ಮಾಡಿದೆ. ಆತನನ್ನು ಬಂಧಿಸುವಂತೆ ನಾವು ಪೊಲೀಸರಿಗೆ ಮನವಿ ನೀಡಿದ್ದೇವೆ. ಆದರೆ ಆತನನ್ನೂ ಬಂಧಿಸಿಲ್ಲ. ಅವನನ್ನಾದರೂ ಬಂಧಿಸಿ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.


ಆರೋಪಿ ನಮ್ಮ ಕೈಗೆ ಸಿಕ್ಕರೆ ಬಿಡುವುದಿಲ್ಲ:
ಪೊಲೀಸ್ ಇಲಾಖೆಯೇ ಆರೋಪಿಯನ್ನು ಬಂಧಿಸುವುದು ಉತ್ತಮ. ಒಂದು ವೇಳೆ ಆತ ನಮ್ಮ ಕೈಗೆ ಸಿಕ್ಕರೆ ಅವನನ್ನು ಹಾಗೇ ಬಿಡುವುದಿಲ್ಲ. ಆತನ ಸೊಂಟ ಮುರಿದು ಕೊಡುತ್ತೇವೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಶೇಷಪ್ಪ ಬೆದ್ರಕಾಡು ಎಚ್ಚರಿಸಿದರು.

ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಶೇಷಪ್ಪ ಬೆದ್ರಕಾಡು ಮಾತನಾಡಿ, ಕಾರ್ಮಿಕ ಶಿವಪ್ಪರವರ ಸಾವಿನಲ್ಲಿ ಅಮಾನವೀಯತೆ ನೋವುಂಟು ಮಾಡಿದೆ. ಇವರ ಸಾವಿಗೆ ಕಾರಣವಾದ ಹೆನ್ರಿ ನೀಚ, ಅವಿವೇಕಿ. ಮೃತದೇಹವನ್ನು ಮುಟ್ಟಲು ಅಸ್ಪೃಶ್ಯತೆ ತೋರಿದ್ದು ಎಲ್ಲರೂ ಖಂಡಿಸಬೇಕು. ಆರೋಪಿಯನ್ನು ಬಂಧಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಈ ತನಕ ಪೊಲೀಸರು ಬಂಧಿಸಿಲ್ಲ. ಸಂವಿಧಾನದ ಅಡಿಯಲ್ಲಿ ಠಾಣೆ ಮುಂಭಾಗದಲ್ಲಿ ಪ್ರತಿಭಟನೆಗೆ ಅನುಮತಿ ನೀಡದೆ ಇದ್ದಾಗ ಕಾನೂನಿಗೆ ಗೌರವ ನೀಡಿ ನಾವು ಸ್ಥಳ ಬದಲಾಯಿಸಿದ್ದೇವೆ. ದಲಿತರಲ್ಲಿ ಒಗ್ಗಟ್ಟು ಇರದೇ ಇರುವುದರಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪೊಲೀಸರಿಂದ ದೌರ್ಜನ್ಯ, ನಡೆಯುತ್ತಿದ್ದು ಇನ್ನು ಯಾರಿಂದ ನ್ಯಾಯ ನಿರಿಕ್ಷಿಸಲು ಸಾಧ್ಯ. ಎರಡು ದಿನದಲ್ಲಿ ಆರೋಪಿಯನ್ನು ಬಂಧಿಸದಿದ್ದರೆ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.


ಸುಳ್ಯ ತಾಲೂಕು ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ನಮ್ಮ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡದಿರಬಹುದು. ಮುಂದಿನ ದಿನಗಳಲ್ಲಿ ದ.ಕ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯಲಿದೆ. ಸೋಮವಾರದ ಒಳಗಾಗಿ ಬಂಧಿಸದಿದ್ದರೆ ಸುಳ್ಯದಲ್ಲಿ ಪ್ರತಿಭಟನೆ ನಡೆಸಲಾಗುವುದು. ಪೊಲೀಸ್ ಇಲಾಖೆಯ ಖಾಕಿ ಅಂಬೇಡ್ಕರ್ ನೀಡಿದ ಕೊಡುಗೆ, ಅದನ್ನು ಮರೆಯಬಾರದು. ಪ್ರತಿಭಟನೆಗೆ ನಿಮ್ಮ ಅನುಮತಿ ಅಗತ್ಯವಿಲ್ಲ. ಎಲ್ಲ ಸಂಘಟನೆಯವರು ಒಟ್ಟು ಸೇರುತ್ತೇವೆ. ಪೊಲೀಸರು ಖಾಕಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಬಾರದು. ದಲಿತರನ್ನು ಮತದಾನಕ್ಕೆ ಮಾತ್ರ ಉಪಯೋಗ ಮಾಡುತ್ತಿದ್ದಾರೆ. ಹೀಗೆ ನಡೆದರೆ ಮತ್ತೊಂದು ಘೋರ ಘಟನೆಗೆ ಕಾರಣವಾಗಬಹುದು. ನಮ್ಮ ಸಂವಿಧಾನ ಬದ್ದವಾದ ಹಕ್ಕಿಗೆ ಅನುಮತಿ ನೀಡದಿದ್ದರೆ ನಾವು ಈ ರೀತಿ ಇರುವುದಿಲ್ಲ. ಪೊಲೀಸರ ಲಾಠಿ ಮಾತನಾಡದಿದ್ದರೆ ನಮ್ಮ ಬಾವುಟದಲ್ಲಿರುವ ಉದ್ದನೆಯ ಲಾಠಿ ಮಾತನಾಡಲಿದೆ ಎಂದು ತಿಳಿಸಿದರು.


ಎಸ್‌ಡಿಪಿಐ ಮುಖಂಡ ಅಬೂಬಕ್ಕರ್ ಸಿದ್ದಿಕ್ ಮಾತನಾಡಿ, ಶಿವಪ್ಪರವರ ಮೇಲಿನ ಅಮಾನವೀಯ ಕೃತ್ಯ ದೇಶದ ನಾಗರೀಕರು ತಲೆತಗ್ಗಿಸುವಂತೆ ಮಾಡಿದೆ. ಇದನ್ನು ಎಸ್‌ಡಿಪಿಐ ಖಂಡಿಸುತ್ತದೆ. ಇಂತಹ ಘಟನೆಗಳು ಮುಂದೆ ಮರುಕಳಿಸಬಾರದು. ನಮಗೆ ಹಣ ಮುಖ್ಯವಲ್ಲ, ಕುಟುಂಬಕ್ಕೆ ನ್ಯಾಯ ದೊರೆಯಬೇಕು. ಆರೋಪಿಯ ವಿರುದ್ದ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ ಬಂಧಿಸಬೇಕು. ಪೊಲೀಸರು ಬಂಧಿಸದೇ ಇರುವುದರಿಂದ ಇದರ ಹಿಂದೆ ಯಾವುದೋ ಶಕ್ತಿಯಿದೆ. ಪೊಲೀಸ್ ಠಾಣೆ ಮುಂದೆ ನಡೆಯುವ ಪ್ರತಿಭಟನೆಗೂ ಎಸ್‌ಡಿಪಿಐ ಬೆಂಬಲವಿದೆ ಎಂದರು.


ಆದಿ ದ್ರಾವಿಡ ಸಮಾಜ ಸೇವಾ ಸಂಘ ಸುಳ್ಯದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಸುಬ್ರಹ್ಮಣ್ಯ ಮಾತನಾಡಿ, ಘಟನೆ ನಡೆದು ಎಂಟು ದಿನಗಳು ಕಳೆದಿದೆ. ಪೊಲೀಸರಿಗೆ ಠಾಣೆಯಿಂದ ಒಂದು ಕಿ.ಮೀ ದೂರದಲ್ಲಿರುವ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ. ನಾವು ನ್ಯಾಯಕ್ಕಾಗಿ ಪ್ರತಿಭಟನೆ ಮಾಡುತ್ತಿರುವುದು. ಇದಕ್ಕೆ ನಮಗೆ ಅನುಮತಿ ಬೇಡ. ಆರೋಪಿ ಎಲ್ಲಿದ್ದಾನೆ ಎಂಬುದು ಪೊಲೀಸ್ ಇಲಾಖೆಗೆ ಗೊತ್ತಿದೆ. ಪೊಲೀಸರು ಸ್ಪಂದಿಸಬೇಕು. ದಲಿತರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಅರ್ಧ ತಾಸಿನ ಒಳಗಡೆ ಬರಬೇಕು ಇಲ್ಲದಿದ್ದರೆ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.


ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಬು ಮರಿಕೆ ಮಾತನಾಡಿ, ಶಿವಪ್ಪರವರ ಅಸ್ವಾಭಾವಿಕ ಮರಣದಲ್ಲಿ ಗೊಂದಲವಿದ್ದು ನಾವು ಹಲವು ಬಾರಿ ಮನವಿ ಸಲ್ಲಿಸಿದರೂ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಆರೋಪಿಯನ್ನು ಬಂಧಿಸಿದೇ ಇರುವುದರಿಂದ ಆತನನ್ನು ಉಳಿಸುವ ಷಡ್ಯಂತ್ರ ನಡೆಯುತ್ತದೆ. ಇದಕ್ಕೆ ಯಾರೂ ಬೆಂಬಲ ನೀಡುತ್ತಾರೆ. ಪೊಲೀಸರ ವೈಫಲ್ಯ ಇದ್ದಂತೆ ಕಾಣುತ್ತಿದೆ ಗೊತ್ತಿಲ್ಲ. ವೈಫಲ್ಯ ಇದೆ. ನಾವು ಸುಮ್ಮನಿರುವುದು ನಮ್ಮ ಅಸಮರ್ಥತೆಯಲ್ಲ. ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿವೈಎಸ್ಪಿಯವರನ್ನು ಮಾತನಾಡಿದಾಗ, ನಾವು ಒತ್ತಡಕ್ಕೂ ಮಣಿಯುವುದಿಲ್ಲ. ನಿಗಾ ವಹಿಸಿದ್ದೇವೆ. ಮಹಾಲಿಂಗೇಶ್ವರ ಹಾಗೂ ತನ್ನ ಇಬ್ಬರು ಮಕ್ಕಳ ಮೇಲೆ ಆಣೆ ಮಾಡಿ ನ್ಯಾಯ ಒದಗಿಸುವುದಾಗಿ ಡಿವೈಎಸ್‌ಪಿಯವರು ತಿಳಿಸಿದ್ದರು. ಅವರ ಭರವಸೆಯಂತೆ ಕಾನೂನಿಗೆ ಗೌರವ ನೀಡಿ ಠಾಣೆ ಮುಂಭಾಗದ ಪ್ರತಿಭಟನೆಯನ್ನು ಬದಲಾಯಿಸಿದ್ದೇವೆ ಎಂದು ಹೇಳಿದರು.


ಆದಿ ದ್ರಾವಿಡ ಸಮಾಜ ಸೇವಾ ಸಂಘದ ಗೌರವ ಸಲಹೆಗಾರ ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ, ಘಟನೆ ನಡೆದು ಹಲವು ದಿನಗಳು ಕಳೆದರೂ ಆರೋಪಿಯನ್ನು ಬಂಧಿಸದೇ ಇರುವುದರಿಂದ ಪೊಲೀಸ್ ಇಲಾಖೆಯ ಮೇಲೆ ಅನುಮಾನ ಕಾಡುತ್ತಿದೆ. ನಾವು ಪೊಲೀಸ್ ಅಧಿಕಾರಿಗಳ ಮೇಲೆ ಬಹಳಷ್ಟು ಒತ್ತಡ ಹಾಕಿದ್ದೇವೆ. ಆರೋಪಿ ಯಾವ ಬಿಲದಲ್ಲಿ ಅಡಗಿದ್ದರೂ ಕೂಡಲೇ ಬಂಧಿಸಬೇಕು. ಮೃತದೇಹವನ್ನು ಮನೆಗೆ ತರುವ ಸಂದರ್ಭದಲ್ಲಿ ಪಿಕಪ್‌ನಲ್ಲಿ ಮೂರು ಜನ ಇದ್ದರೂ ಅವರ‍್ಯಾರು ಮುಟ್ಟದೆ ಶಿವಪ್ಪರವರ ಮನೆಯವರ ಮೃತದೇಹವನ್ನು ವಾಹನದಿಂದ ಇಳಿಸುವ ಮೂಲಕ ಅವರು ಅಸ್ಪೃಶ್ಯತೆ ತೋರಿದ್ದು ಅರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.


ಪ್ರತಿಭಟನಕಾರರಲ್ಲಿಯೇ ಭಿನ್ನಾಭಿಪ್ರಾಯ:
ಠಾಣೆಯ ಮುಂಭಾಗದಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಕೈ ಬಿಟ್ಟು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸುವ ವಿಚಾರದಲ್ಲಿ ಪ್ರತಿಭಟನಕಾರರ ಎರಡು ಗುಂಪುಗಳಲ್ಲಿ ಭಿನ್ನಾಭಿಪ್ರಯ ಉಂಟಾಗಿತ್ತು. ಇದೇ ವಿಚಾರದಲ್ಲಿ ಪ್ರತಿಭಟನಾ ಸಭೆಯ ಪ್ರಾರಂಭದಲ್ಲಿ ಎರಡು ತಂಡದೊಂದಿಗೆ ಪರಸ್ಪರ ಚರ್ಚೆಗಳು ನಡೆಯುತ್ತಿರುವುದು ಕಂಡುಬಂದಿದೆ.


ಎಸ್‌ಡಿಪಿಐ, ಕಾಂಗ್ರೆಸ್ ಸಾಥ್:
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಪಕ್ಷದ ಅಬೂಬಕ್ಕರ್ ಸಿದ್ದೀಕ್, ಹಮೀದ್ ಸಾಲ್ಮರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಇಸಾಖ್ ಸಾಲ್ಮರ, ಜಯಪ್ರಕಾಶ್ ಬದಿನಾರು ಮೊದಲಾದವರು ಉಪಸ್ಥಿತರಿದ್ದರು.


ಆದಿ ದ್ರಾವಿಡ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಲೋಹಿತ್ ಅಮ್ಚಿನಡ್ಕ, ಸ್ಥಾಪಕ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಪ್ರಮುಖರಾದ ಮಹೇಶ್ ಮರಿಕೆ, ಪ್ರೇಮ್ ಬಳ್ಲಾಲ್‌ಬಾಗ್, ದಯಾಕರ, ಶಶಿ ಕೆರೆಮೂಲೆ, ಮುಖೇಶ್ ಕೆಮ್ಮಿಂಜೆ, ಜಯಕರ, ವಿಜಯ ಆಲಡ್ಕ, ರಾಘವ ಖಂಡಿಗ, ಚಂದ್ರ ಬೀರಿಗ, ಅಭಿಷೇಕ ಬೆಳ್ಳಿಪ್ಪಾಡಿ, ಬಾಬು ಸವಣೂರು, ಅಭಿಷೇಕ್ ಬೆಳ್ಳಿಪ್ಪಾಡಿ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here