ಪುತ್ತೂರು: ಆಟೋ ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರು ಗಾಯಗೊಂಡ ಘಟನೆ ಸರ್ವೆ ಗ್ರಾಮದ ಸೊರಕೆ ಕರ್ಮಿನಡ್ಕ ಎಂಬಲ್ಲಿ ಫೆ.19ರಂದು ನಡೆದಿದೆ.
ಸವಣೂರು ಕಡೆಗೆ ವಿದ್ಯುತ್ ಕಂಬಗಳನ್ನು ಸಾಗಿಸುತ್ತಿದ್ದ ಲಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ.
ಸರ್ವೆಯ ಕ್ಯೂನಲ್ಲಿ ಬಾಡಿಗೆ ಮಾಡುವ ಅವಿನಾಶ್ ಎಂಬವರ ರಿಕ್ಷಾದಲ್ಲಿ ಕರ್ಮಿನಡ್ಕದ ಸರೋಜಿನಿ, ವೇದಾವತಿ ಹಾಗೂ ಮಾಲತಿ ಎಂಬವರು ಕಲ್ಪನೆಯಲ್ಲಿರುವ ರೇಷನ್ ಅಂಗಡಿಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಮೂವರೂ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಸರೋಜಿನಿ ಅವರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ರಿಕ್ಷಾ ಚಾಲಕ ಅವಿನಾಶ್ ಅವರಿಗೂ ಸಣ್ಣ ಪುಟ್ಟ ಗಾಯವಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಲಾರಿ ಚಾಲಕ ವಿರುದ್ಧ ದಿಕ್ಕಿನಲ್ಲಿ ಬಂದದ್ದೇ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರಾದ ಮರಾಟಿ ಯುವ ವೇದಿಕೆಯ ಮುಖಂಡ ಅಶೋಕ ನಾಯ್ಕ ಸೊರಕೆ ಅವರು ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ವ್ಯವಸ್ಥೆಯನ್ನು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ ಅವರ ಮಾನವೀಯ ಕಾರ್ಯ ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ.