ಪುತ್ತೂರು: ಎಪಿಎಂಸಿ ರಸ್ತೆಯಲ್ಲಿರುವ ಪುತ್ತೂರು ಸಿಟಿ ಆಸ್ಪತ್ರೆಯು 15 ವರ್ಷಗಳನ್ನು ಪೂರೈಸಿ 16ನೇ ವರ್ಷಕ್ಕೆ ದಾಪುಗಾಲಿಡುತ್ತಿರುವ ಸುಸಂದರ್ಭವನ್ನು ಮಾ.30ರಂದು ಪುತ್ತೂರು ಗಾರ್ಡನ್‌ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಿದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ಪುತ್ತೂರಿನಲ್ಲಿ 100 ಬೆಡ್ ಆಸ್ಪತ್ರೆಯಾಗಿ ಪುತ್ತೂರು ಸಿಟಿ ಆಸ್ಪತ್ರೆ ಸೃಷ್ಠಿಯಾಗಿದೆ. ದೊಡ್ಡ ಗುರಿ ಇಟ್ಟುಕೊಂಡು ಪ್ರಾರಂಭಿಸಲಾಗಿರುವ ಆಸ್ಪತ್ರೆಯಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಹೆಚ್ಚಿಸಬೇಕು. ವಿವಿಧ ವಿಭಾಗಗಳಲ್ಲಿ ಸ್ಪೇಷಾಲಿಸ್ಟ್‌ಗಳೊಂದಿಗೆ ಸ್ಪೆಷಾಲಿಟಿ ಸೌಲಭ್ಯಗಳನ್ನು ಒದಗಿಸುವುದು, ಹೈಟೆಕ್ ಕ್ಯಾತಲಾಗ್‌ಗಳನ್ನು ಮಾಡಬೇಕು. ಆಸ್ಪತ್ರೆಗಳು ಹಣ ಮಾಡುವ ಸಂಸ್ಥೆಗಳಲ್ಲ. ಅದು ಸೇವಾ ಆಧಾರಿತ ಸಂಸ್ಥೆಯಾಗಿ ಬೆಳೆಯಬೇಕು. ಸಿಟಿ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಹಾಗೂ ಸೇವಾ ಮನೋಭಾವದ ಸಿಬಂದಿಗಳ ತಂಡವಿದೆ. ಪರಿಶೀಲನೆಯ ಸಂದರ್ಭದಲ್ಲಿ ಶೇ.100 ಪಾರದರ್ಶಕವಾಗಿ ಸೇವೆ ನೀಡುತ್ತಿರುವುದು ಕಂಡುಬಂದಿದೆ. ರೋಗಿಗಳು ಇನ್ಸ್ಯೂರೆನ್ಸ್ ಸೌಲಭ್ಯಗಳಿಂದ ವಂಚಿತರಾಗದಂತೆ ಆಸ್ಪತ್ರೆಯಲ್ಲಿ ವಿಮಾ ಆಧಾರಿತ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ಸಿಟಿ ಆಸ್ಪತ್ರೆಯು ಪುತ್ತೂರಿನಲ್ಲಿ ಟಾಪ್ ಆಸ್ಪತ್ರೆಯಾಗಬೇಕು. ಪುತ್ತೂರಿನಲ್ಲಿ 100 ಬೆಡ್‌ನ ಆಸ್ಪತ್ರೆ ಪ್ರಾರಂಭಿಸಿದ ಡಾ. ಭಾಸ್ಕರ್‌ರವರ ಶ್ರಮವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಭಾಸ್ಕರ್ ಎಸ್ ಮಾತನಾಡಿ, ಪುತ್ತೂರು ಸಿಟಿ ಆಸ್ಪತ್ರೆಯು 15 ವರ್ಷಗಳನ್ನು ಪೂರೈಸಿದೆ. ಸೇವೆಯನ್ನೇ ಪ್ರಧಾನವಾಗಿಸಿಕೊಂಡು ಆಸ್ಪತ್ರೆ ಮುನ್ನಡೆಯುತ್ತಿದೆ. ದಿನದ 24 ಗಂಟೆ ವರ್ಷದ 365 ದಿನವೂ ಸೇವೆ ನೀಡಲಾಗುತ್ತಿದೆ. ಆಸ್ಪತ್ರೆಯ ಸೇವೆಯ ಕುರಿತು ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯಗಳು ಬಂದಿವೆ. ಸಾರ್ವಜನಿಕರ ಅಭಿಪ್ರಾಯವನ್ನು ಪಡೆದುಕೊಂಡು ಆಸ್ಪತ್ರೆ ಮುನ್ನಡೆಯುತ್ತಿದೆ. ಆಸ್ಪತ್ರೆಯ ಉನ್ನತೀಕರಣಕ್ಕೆ ಪ್ರಯತ್ನಿಸಲಾಗುವುದು. ಯಾವ ವಿಭಾಗದಲ್ಲಿ ಮುಂದೆ ಹೋಗಬೇಕು ಎಂದು ಯೋಚಿಸಿ ತೀರ್ಮಾನಿಸಲಾಗುವುದು. ಟರ್ಸರಿ ಕ್ಯಾರ್ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ನುರಿತ ವೈದ್ಯರು ಹಾಗೂ ಸಿಬಂದಿಗಳ ತಂಡವಿದ್ದು ಪಾರದರ್ಶಕವಾಗಿ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಬಹುಮಾನ ವಿತರಣೆ:
ತಾಲೂಕು ಅಸ್ಪತ್ರೆ ಅಸೋಸಿಯೇಷನ್‌ನಿಂದ ನಡೆದ ತ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ ಬಹುಮಾನ ತಂಡದ ಕ್ರೀಡಾಪಟುಗಳಿಗೆ ಬಹುಮಾನವಾಗಿ ದೊರೆತ ರೂ.7,272ರ ನಗದು ಬಹುಮಾನದ ಚೆಕ್‌ನ ಜೊತೆಗೆ ತಂಡದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಆಸ್ಪತ್ರೆಯ ವತಿಯಿಂದ ತಲಾ ರೂ.1ಸಾವಿರ ನಗದು ಬಹುಮಾನ ನೀಡಲಾಯಿತು. ಅಲ್ಲದೆ ವಾರ್ಷಿಕೋತ್ಸವ ಅಂಗವಾಗಿ ಆಸ್ಪತ್ರೆಯ ಸಿಬಂದಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಭಾಸ್ಕರ್ ಎಸ್ ಸ್ವಾಗತಿಸಿದರು. ಪಾಲುದಾರ ಡಾ. ಎಸ್.ಎಮ್ ಪ್ರಸಾದ್ ಅತಿಥಿಗಳ ಪರಿಚಯ ಮಾಡಿದರು. ಮಂಜುಳಾ ಭಾಸ್ಕರ್ ಹಾಗೂ ಮನೋರಮಾ ಸೂರ್ಯನಾರಾಯಣ ಬಹುಮಾನ ವಿಜೇತರ ಪಟ್ಟಿ ಓದಿದರು. ನಿರ್ದೇಶಕ ಡಾ. ಸೂರ್ಯ ನಾರಾಯಣ ವಂದಿಸಿದರು. ಸಿಬ್ಬಂದಿಗಳಾದ ಸ್ವಾತಿ ಹಾಗೂ ಶ್ವೇತಾ ಪ್ರಾರ್ಥಿಸಿದರು. ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಪಿಆರ್‌ಓ ವಿಷ್ಣುಕಿರಣ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ವೈವಿದ್ಯಮಯ ಕಾರ್ಯಕ್ರಮಗಳು ಮೇಳೈಸಿತು. ಕೊನೆಯಲ್ಲಿ ಸಹಭೋಜನದೊಂದಿಗೆ ಸಂಭ್ರಮಾಚರಣೆ ಸಂಪನ್ನಗೊಂಡಿತು.