ಗೀರ್ ಎತ್ತಿನೊಂದಿಗೆ 36 ದಿನ 360 ಕಿಲೋಮೀಟರ್ ನಡೆದು  ತನ್ನ ಮನೆಯ ಮೊದಲ ಕರುವನ್ನು ಧರ್ಮಸ್ಥಳಕ್ಕೊಪ್ಪಿಸಿದ ಯುವಕ

0

ಧರ್ಮಸ್ಥಳ: ದೇವರ ಮೇಲಿನ ಭಕ್ತಿ ಮನುಷ್ಯನ ಯೋಚನೆ, ಯೋಜನೆಯನ್ನು ಬದಲಿಸುತ್ತೆ. ದೇವರ ದರುಶನಕ್ಕೆ ಕಠಿಣ ವೃತಾಚರಣೆ ಮಾಡುವವರಿದ್ದಾರೆ. ಇವರೆಲ್ಲರ ನಡುವೆ ಕಳಸದ ಹಿರೇಬೈಲ್‌ನ ಶ್ರೇಯಾಂಸ್ ಜೈನ್ ವಿಭಿನ್ನವಾಗಿ ನಿಲ್ಲುತ್ತಾರೆ. ತನ್ನ ಮನೆಯ ಮೊದಲ ಗೀರ್ ಕರುವನ್ನು ಧರ್ಮಸ್ಥಳಕ್ಕೆ ಅರ್ಪಿಸುತ್ತೇನೆಂಬ ಮನದ ಪ್ರಾರ್ಥನೆಯನ್ನು ಎರಡು ವರ್ಷಗಳ ನಂತರ ಬರೋಬ್ಬರಿ 360 ಕಿಲೋಮೀಟರ್ ಗೀರ್ ಎತ್ತು ಜೊತೆ ನಡೆದುಕೊಂಡು ಬಂದು ಧರ್ಮಸ್ಥಳಕ್ಕೆ ಅರ್ಪಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ,ವೀರೇಂದ್ರ ಹೆಗ್ಗಡೆಯವರು ಗೀರ್ ಎತ್ತಿಗೆ ತಿನ್ನಲು ಫಲಹಾರ ನೀಡುವ ಮೂಲಕ ಬರಮಾಡಿಕೊಂಡರು.

ಹೈನುಗಾರಿಕೆ ಮೇಲೆ ಆಸಕ್ತಿ:

ಕಳಸದ ಶ್ರೇಯಾಂಸ್ ಜೈನ್ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. 2019ರಲ್ಲಿ ಬಂದೆರಗಿದ ಕೊರೊನಾ ಮಹಾ ಮಾರಿಯಿಂದಾಗಿ ಲಾಕ್ ಡೌನ್ ಆಗಿದ್ದರಿಂದ, ಇವರಿಗೆ ವರ್ಕ್ ಫ್ರಂ ಹೋಮ್ ಪದ್ಧತಿ ಜಾರಿಯಾಗಿತ್ತು. ಹೀಗಿರುವಾಗಲೇ ಬೆಂಗಳೂರಿನ ತನ್ನ ಬಾಡಿಗೆ ಮನೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ದನ ಸಾಕುವ ಯೋಚನೆಯನ್ನು ಮಾಡಿದ್ರು. ಖಾಲಿ ಸೈಟ್ ನಲ್ಲೇ ದನ ಸಾಕಲು ಮುಂದಾಗಿ ಹೈನುಗಾರಿಕೆಗೆ ಮುಂದಡಿಯಿಟ್ಟರು.

ಮಂಜುನಾಥ ಸ್ವಾಮಿಗೆ ಮೊದಲ ಕರು ಭೀಷ್ಮನನ್ನು ಅರ್ಪಿಸುವ ಸಂಕಲ್ಪ: ಕರು ಎತ್ತು ಆದಾಗ ನಡೆದುಕೊಂಡು ಬಂದು ಅರ್ಪಿಸಲು ಚಿಂತನೆ:
ಬೆಂಗಳೂರಿನಲ್ಲಿ ಹೈನುಗಾರಿಕೆ ಆರಂಭಿಸಿದ ಶ್ರೇಯಾಂಸ್ ಜೈನ್ ತನ್ನ ಮನೆಯ ಮೊದಲ ಕರುವನ್ನು ಮಂಜುನಾಥ ಸ್ವಾಮಿಗೆ ಅರ್ಪಿಸಬೇಕೆಂದು ಮನದಲ್ಲಿ ಅಂದುಕೊಂಡರು. ಒಂದು ವರ್ಷದೊಳಗೆ ಮೊದಲ ಗಂಡು ಕರು ಭೀಷ್ಮನನ್ನು ಕ್ಷೇತ್ರಕ್ಕೆ ತಲುಪಿಸುವ ಯೋಜನೆ ರೂಪಿಸಿಕೊಂಡಿದ್ದರು. ಆದರೆ ಅದು ಸಾಧ್ಯವಾಗದೇ ಇದ್ದಾಗ ಎತ್ತಿಗೆ 1 ವರ್ಷ ಎಂಟು ತಿಂಗಳುಗಳಾದಾಗ ಕ್ಷೇತ್ರಕ್ಕೆ ನಡೆದುಕೊಂಡೇ ಬಂದು ಅರ್ಪಿಸುವ ಚಿಂತನೆ ಮಾಡಿದ್ರು. ಇದಕ್ಕಾಗಿ ಸುಮಾರು ತಿಂಗಳುಗಳ ಪೂರ್ವಭಾವಿ ಚಿಂತನೆ, ರೂಪುರೇಷೆ ಕೈಗೊಂಡಿದ್ದರು.

ತಾನು ಹೋಗುವಲ್ಲಿ ಎತ್ತು ನಡೆಯುವುದಲ್ಲ, ಎತ್ತು ಹೋದಲ್ಲಿ ತಾನು ಹೋಗುವ ನಿರ್ಧಾರ: 


ಎತ್ತನ್ನು ದೇವರೆಂದು ನಂಬಿರುವ ಶ್ರೇಯಾಂಸ್,ಭೀಷ್ಮನ ಬೇಡಿಕೆಗಳಿಗೆ ಮೊದಲ ಆದ್ಯತೆ. ಭೀಷ್ಮನಿಗೆ ಸುಸ್ತಾದರೆ, ಕಷ್ಟಪಟ್ಟರೆ ನಡಿಗೆಗೆ ಬ್ರೇಕ್ ಹಾಕಿ ವಾಹನದಲ್ಲಿ ಬರುವ ನಿರ್ಧಾರ
ಬೆಂಗಳೂರಿನ ಜಿಗಣಿಯಿಂದ ಮುಖ್ಯರಸ್ತೆಯಲ್ಲೇ ಸಾಗಿಬರುವುದಾದರೇ ಎತ್ತಿಗೆ ಆಹಾರದ ವ್ಯವಸ್ಥೆ ಸರಿಯಾಗಿ ಆಗುವುದಿಲ್ಲ. ಎತ್ತು ಹಳ್ಳಿರಸ್ತೆಗಳಲ್ಲಿ ನಡೆದು ಸಾಗಿದರೆ ಸುತ್ತಮುತ್ತಲು ಹುಲ್ಲು ಸಿಗುತ್ತದೆ.ಇದರಿಂದ ಭೀಷ್ಮನಿಗೂ ಆಹಾರದ ವ್ಯವಸ್ಥೆ ಆಗುತ್ತದೆ ಎಂದು ಯೋಜನೆ ರೂಪಿಸಿ ಗರಿಷ್ಠ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಹಾದು ಬಂದಿದ್ದಾರೆ. ಹೀಗೆ ಬರುವ ವೇಳೆ ಭೀಷ್ಮನಿಗೆ ಸುಸ್ತಾದರೆ ಅಥವಾ ನಡೆದಾಡಲು ಕಷ್ಟಪಟ್ಟರೆ ನಡಿಗೆಗೆ ಬ್ರೇಕ್ ಹಾಕಿ ವಾಹನದಲ್ಲಿ ಬರುವ ನಿರ್ಧಾರವನ್ನು ಕೈಗೊಂಡೇ ನಡಿಗೆಯನ್ನು ಆರಂಭ ಮಾಡಿದ್ದರು.

360 ಕಿಲೋಮೀಟರ್ ಬರೋಬ್ಬರಿ 36 ದಿನದ ಪ್ರಯಾಣ: ಕಚೇರಿಗೆ ಶ್ರೇಯಾಂಸ್ ಒಂದು ದಿನವೂ ಹಾಕಿಲ್ಲ ರಜೆ! ಮುಂಜಾನೆ ಹೊತ್ತಲ್ಲಿ ನಡಿಗೆ ನಂತರ ವರ್ಕ್ ಫ್ರಂ ಹೋಮ್ ನಡಿ ಕೆಲಸ:
ಭೀಷ್ಮನೊಂದಿಗಿನ ನಡಿಗೆ ಬಗ್ಗೆ ಆರಂಭದಲ್ಲಿ ಶ್ರೇಯಾಂಸ್ ಗೂ ಕೂಡ ಚಿಕ್ಕ ಅಳುಕಿತ್ತು. ಅದಕ್ಕಾಗಿ ಮೊದಲೆರಡು ದಿನ ಗೆಳೆಯನೂ ಶ್ರೇಯಾಂಸ್‌ಗೆ ಸಾಥ್ ನೀಡಿದ್ದ, ಆದರೆ ಭೀಷ್ಮನ ಸಹಕಾರ ಮತ್ತು ತಾಳ್ಮೆಯುತ ವರ್ತನೆ ನೋಡಿದ ನಂತರ ಶ್ರೇಯಾಂಸ್ ತೊಂದರೆಯಾಗುವುದಿಲ್ಲ ಎಂದು ಸಾಬೀತಾಯ್ತ್ತು. ಸತತ ೩೬ ದಿನಗಳ ಕಾಲ ಪ್ರಯಾಣಿಸಿ ಧರ್ಮಸ್ಥಳವನ್ನು ತಲುಪಿದ್ದಾರೆ. ಆದರೆ ಈ ವೇಳೆ ಒಂದು ದಿನವೂ ಕೂಡ ಕಚೇರಿಗೆ ಶ್ರೇಯಾಂಸ್ ರಜೆ ಹಾಕಿಲ್ಲ, ಮುಂಜಾನೆಹೊತ್ತಲ್ಲಿ ನಡೆದು ನಂತರ ವರ್ಕ್ ಫ್ರಂ ಹೋಮ್ ನಡಿ ಕೆಲಸ ನಿರ್ವಹಿಸುತ್ತಾ ಸಾಗಿದ್ರು.

ಪ್ರತಿ ಊರಿನಲ್ಲೂ ಎತ್ತಿನ ಆರೋಗ್ಯ ತಪಾಸಣೆ: ಭೀಷ್ಮನ ನಡಿಗೆ,ವರ್ತನೆ,ಜನರೊಂದಿಗೆ ಬೆರೆತ ರೀತಿ ಪವಾಡ :
ಪ್ರತಿ ಊರಿನಲ್ಲೂ ಕೂಡ ಎತ್ತಿನ ಆರೋಗ್ಯ ತಪಾಸಣೆ ಮಾಡಲಾಗುತ್ತಿತ್ತು. ಅಲ್ಲದೇ ಕೆಲವೆಡೆ ದೃಷ್ಟಿ ತೆಗೆಯುವ ಕೆಲಸವನ್ನು ಊರಿನವರು ಮಾಡುತ್ತಿದ್ದರು.ಇದರ ಜೊತೆ ಭೀಷ್ಮನ ನಡಿಗೆ, ಆತನ ವರ್ತನೆ ಮತ್ತು ಜನರ ಮನೆಯೊಳಗೆ ಹೋಗಿ ಗಂಜಲ, ಸೆಗಣಿ ಹಾಕುತ್ತಾ ಪ್ರೀತಿ ತೋರಿಸುತ್ತಿದ್ದ ರೀತಿ ಎಲ್ಲವೂ ಕೂಡ ಪವಾಡದಂತೆ ಕಂಡುಬಂತು ಎಂದು ಶ್ರೇಯಾಂಸ್ ಸುದ್ದಿಯೊಂದಿಗೆ ಮಾತನಾಡುವ ವೇಳೆ ತಿಳಿಸಿದರು.

ತನ್ನ ಗುರಿ ಈಡೇರಿಕೆ ಹಿಂದಿದೆ ಕುಟುಂಬದವರ ಸಾಥ್
ಅಪ್ಪ ಅಮ್ಮನಿಗೆ ತಡವಾಗಿ ವಿಷಯ ತಿಳಿಸಿದ್ದ ಯುವಕ :
ಶ್ರೇಯಾಂಸ್ ಈ ನಿರ್ಧಾರಕ್ಕೆ ಆರಂಭದಲ್ಲಿ ಪತ್ನಿ ಕೊಂಚ ವಿರೋಧ ವ್ಯಕ್ತಪಡಿಸಿದ್ರೂ ಕೂಡ ನಂತರ ಇವರ ಯೋಜನೆ ಯೋಚನೆಗೆ ಸಾಥ್ ನೀಡಿದರು. ಆದರೆ ತನ್ನ ತಂದೆ ತಾಯಿ ಈ ಸಾಹಸದ ಬಗ್ಗೆ ಭಯ ಪಡುತ್ತಾರೆ ಅನ್ನುವ ಕಾರಣಕ್ಕೆ ಅವರಿಗೆ ವಿಷಯ ತಡವಾಗಿ ತಿಳಿಸಲಾಗಿತ್ತು ಎಂದು ಶ್ರೇಯಾಂಸ್ ಹೇಳಿದ್ರು.

LEAVE A REPLY

Please enter your comment!
Please enter your name here