ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ, ಅನ್ನಸಂತರ್ಪಣೆ

0

ಪುತ್ತೂರು: ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ (ಅರಿಯಡ್ಕ, ಕೆದಂಬಾಡಿ ಮತ್ತು ಕೆಯ್ಯೂರು ಗ್ರಾಮ ಸಮಿತಿ) ಆಶ್ರಯದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.9 ರಂದು ಮಜ್ಜಾರಡ್ಕದಲ್ಲಿ ವಿಜೃಂಭಣೆಯಿಂದ ಜರಗಿತು. ಸಂಜೆ ಮಾಲಕೊಚ್ಚಿ ಸ್ಥಾನದಿಂದ ಭಂಡಾರ ತೆಗೆದು ಕುಂಬ್ರ ಅಶ್ವತ್ಥಕಟ್ಟೆಯಲ್ಲಿಟ್ಟು ಅಲ್ಲಿಂದ ಮಜ್ಜಾರಡ್ಕಕ್ಕೆ ಹೊರಟು ಬಂದು ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ಸನ್ನಿಧಿಯಲ್ಲಿ ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಿತು. ಇದೇ ಸಂದರ್ಭದಲ್ಲಿ ಅರಿಯಡ್ಕ ಶ್ರೀ ಕೃಷ್ಣ ಭಜನಾ ಸಂಘ ಕೌಡಿಚ್ಚಾರು ಇವರಿಂದ ಭಜನಾ ಸೇವೆ ನಡೆಯಿತು. ರಾತ್ರಿ ೧೧ ಕ್ಕೆ ಕುಳಿಚ್ಚಾಟ ದೈವದ ನರ್ತನ, ಸುಡುಮದ್ದು ಪ್ರದರ್ಶನ ನಡೆಯಿತು. ಬೆಳಿಗ್ಗೆ ೬ ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆದು ಮಂತ್ರವಾದಿ ಗುಳಿಗ ದೈವದ ನೇಮ ನಡೆಯಿತು. ಊರ ಪರವೂರ ಸಾವಿರಾರು ಭಕ್ತಾಧಿಗಳು ಆಗಮಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು. ಸಮಿತಿಯ ಗೌರವಾಧ್ಯಕ್ಷ ಅರಿಯಡ್ಕ ಚಿಕ್ಕಪ್ಪ ನಾಕ್, ಪ್ರಧಾನ ಕಾರ್ಯದರ್ಶಿ ಕೆ.ಚಂದ್ರಹಾಸ ಬಲ್ಲಾಳ್ ಬೀಡು, ಉಪಾಧ್ಯಕ್ಷರುಗಳಾದ ಮೋಹನ್ ರೈ ಓಲೆಮುಂಡೋವು, ಎ.ಕೆ ಜಯರಾಮ ರೈ, ಮನೋಹರ ರೈ ಎಂಡೆಸಾಗು, ಜತೆ ಕಾರ್ಯದರ್ಶಿ ಸಾರ್ಥಕ್ ರೈ, ಕೋಶಾಧಿಕಾರಿ ನರಸಿಂಹ ಪೂಂಜ ಹಾಗೂ ಕಾರ್ಯಕಾರಿ ಸಮಿತಿ, ಹಿಂದೂ ಜಾಗರಣ ವೇದಿಕೆ ತ್ಯಾಗರಾಜನಗರ ಅನ್ನದಾನ ಸಮಿತಿಯ ಸದಸ್ಯರುಗಳು ಭಕ್ತಾಧಿಗಳನ್ನು ಸ್ವಾಗತಿಸಿ ಪ್ರಸಾದ ನೀಡಿ ಸತ್ಕರಿಸಿದರು. ಒತ್ತೆಕೋಲಕ್ಕೆ ಊರಪರವೂರ ಸಾವಿರಾರು ಮಂದಿ ಭಕ್ತಾಧಿಗಳು ಆಗಮಿಸಿದ್ದರು. ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಹಿಂದೂ ಜಾಗರಣ ವೇದಿಕೆ ತ್ಯಾಗರಾಜನಗರ ಅನ್ನದಾನ ಸಮಿತಿಯ ಸದಸ್ಯರುಗಳು ಉಸ್ತುವಾರಿ ವಹಿಸಿಕೊಂಡಿದ್ದರು.

 

ಮನರಂಜಿಸಿದ ನಿತ್ಯೆ ಬನ್ನಗ ತುಳು ನಾಟಕ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ವಿಷ್ಣು ಸಾಂಸ್ಕೃತಿಕ ಸೇವಾ ಸಮಿತಿ ಅರ್ಪಿಸುವ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಅಭಿನಯದಲ್ಲಿ ಕೃಷ್ಣ ಜಿ.ಮಂಜೇಶ್ವರ ನಿರ್ದೇಶನದಲ್ಲಿ, ದೀಪಕ್ ರೈ ಪಾಣಾಜೆ ಅಭಿನಯಿಸುವ, ಜೆ.ಪಿ ತೂಮಿನಾಡು ರಚನೆಯ ಯಶಸ್ವಿ ೧೮೨ ನೇ ಪ್ರಯೋಗದ `ನಿತ್ಯ ಬನ್ನಗ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಸಾವಿರಾರು ಮಂದಿ ನಾಟಕ ವೀಕ್ಷಿಸಿದರು. ಶ್ರೀ ವಿಷ್ಣು ಸಾಂಸ್ಕೃತಿಕ ಸೇವಾ ಸಮಿತಿಯ ಅಧ್ಯಕ್ಷ ರಾಜೇಶ್ ಕೆ.ಮಯೂರ ಗೋಳ್ತಿಲ ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here