ನೆಕ್ಕಿಲಾಡಿ ಬೇರಿಕೆಯಲ್ಲಿ ಕಾರು-ಬೈಕ್ ಅಪಘಾತ : ಬೆಳ್ಳಿಪ್ಪಾಡಿ ನೆಕ್ಕರೆಯ ಅಶ್ವತ್ಥ್ ಮೃತ್ಯು

0

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ 34ನೇ ನೆಕ್ಕಿಲಾಡಿ ಅಂಬೆಲ ತಿರುವು ರಸ್ತೆ ಸಮೀಪದ ಬೇರಿಕೆಯಲ್ಲಿ ಬೈಕ್ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿ ಬೆಳ್ಳಿಪ್ಪಾಡಿ ಗ್ರಾಮದ ನೆಕ್ಕರೆಯ ಅಶ್ವತ್ಥ್(17ವ)ಎಂಬವರು ಮೃತಪಟ್ಟ ಘಟನೆ ಎ. 16ರಂದು ಸಂಜೆ ನಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ನೆಕ್ಕಿಲಾಡಿಯ ಬೀತಲಪ್ಪು ನಿವಾಸಿ ವರ್ಷಿತ್ ಎಂಬವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು-ಬೈಕ್ ಅಪಘಾತ : ಬೆಳ್ಳಿಪ್ಪಾಡಿ ಗ್ರಾಮದ ನೆಕ್ಕರೆ ನಿವಾಸಿಯಾಗಿದ್ದು ಇಲೆಕ್ಟ್ರಿಕಲ್ ವೃತ್ತಿ ಮಾಡುತ್ತಿರುವ ಬಾಬು ನೆಕ್ಕರೆ ಮತ್ತು ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಬಾಬು ನೆಕ್ಕರೆಯವರ ಪುತ್ರ ಅಶ್ವತ್ಥ್(17ವ) ಮತ್ತು ಅಶ್ವತ್ಥ್ ಅವರ ಸ್ನೇಹಿತ ನೆಕ್ಕಿಲಾಡಿ ಗ್ರಾಮದ ಬೀತಲಪ್ಪು ನಿವಾಸಿ ವರ್ಷಿತ್ ಅವರು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದರೆನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಅಶ್ವತ್ಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ವರ್ಷಿತ್ ಅವರನ್ನು ಅದೇ ದಾರಿಯಲ್ಲಿ ಬರುತ್ತಿದ್ದ ಕಾರಿನವರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ವರ್ಷಿತ್ ಅವರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಬೆಳ್ಳಿಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಅಶ್ವತ್ಥ್ ಅವರು ತನ್ನ ತಂದೆಯ ಜತೆಗೆ ಕೆಲಸ ಮಾಡುತ್ತಿದ್ದರು. ತನ್ನ ಸಂಬಂಧಿಕರ ಬೈಕ್ ಪಡೆದುಕೊಂಡು ವರ್ಷಿತ್ ಜತೆ ಉಪ್ಪಿನಂಗಡಿಗೆ ಹೋಗಿದ್ದ ಅವರು ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ. ಅಪಘಾತ ನಡೆದ ಸ್ಥಳದಲ್ಲಿ ರಕ್ತದ ಓಕುಳಿ ಹರಿದಿತ್ತು. ಮೃತ ಅಶ್ವತ್ಥ್ ಅವರು ತಂದೆ ಬಾಬು ನೆಕ್ಕರೆ, ತಾಯಿ ಮೀನಾಕ್ಷಿ, ಸಹೋದರಿಯರಾದ ನಳಿನಿ ಮತ್ತು ನಯನಾರವರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪುತ್ತೂರು ಸಂಚಾರ ಠಾಣಾ ಎಸ್.ಐ. ರಾಮ ನಾಯ್ಕ್ ಅವರು ಪ್ರಕರಣ ದಾಖಲಿಸಿದ್ದಾರೆ. ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಶ್ವತ್ಥ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

LEAVE A REPLY

Please enter your comment!
Please enter your name here