ಪಂಚಾಯತ್ ರಾಜ್ ದಿವಸದ ಅಂಗವಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮ ಸಭೆ

0

  • ಬ್ಯಾಂಕ್ ಅಧಿಕಾರಿಗಳಿಂದ ಸಾಲ ಸೌಲಭ್ಯ ನೀಡಲು ನಿರಾಕರಣೆ-ಆರೋಪ

ಉಪ್ಪಿನಂಗಡಿ: ಪ್ರಧಾನ ಮಂತ್ರಿಯವರು ಜಾರಿಗೊಳಿಸಿದ ಹಲವಾರು ಸಾಲ ಸೌಲಭ್ಯಗಳನ್ನು ಬ್ಯಾಂಕ್ ಅಧಿಕಾರಿಗಳು ನೀಡಲು ನಿರಾಕರಿಸುತ್ತಿರುವುದರಿಂದ ಸರಕಾರಿ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ವಿಶ್ವಾಸ ಕುಸಿದಿದೆ ಎಂಬ ಆರೋಪ ವ್ಯಕ್ತವಾಗಿ, ಈ ಬಗ್ಗೆ ಮುತುವರ್ಜಿ ವಹಿಸುವಂತೆ ಉಪ್ಪಿನಂಗಡಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಆಗ್ರಹ ವ್ಯಕ್ತವಾಯಿತು.

 


ಎ. 24ರಂದು ಪಂಚಾಯತ್ ರಾಜ್ ದಿವಸದ ಅಂಗವಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ವಿಶೇಷ ಗ್ರಾಮ ಸಭೆಯಲ್ಲಿ ಈ ಆರೋಪ ವ್ಯಕ್ತವಾಯಿತು.

ಸಭೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆ ಗ್ರಾಮಸ್ಥರಾದ ಲಕ್ಷ್ಮಣ್ ಎಂಬವರು ಮಾತನಾಡಿ ಸರಕಾರ ನೀಡಿದ ಸೌಲಭ್ಯಗಳೆಲ್ಲವೂ ಬಡವರ ಕೃಷಿಕರ ನಿರುದ್ಯೋಗಿಗಳ ಪರವಾಗಿ ಮತ್ತು ಪ್ರೋತ್ಸಾಹದಾಯವಾಗಿದೆ. ಆದರೆ ಪ್ರತಿಯೊಂದು ಯೋಜನೆಗಳನ್ನು ಅನುಷ್ಠಾನಿಸಲು ಬ್ಯಾಂಕ್ ಅಧಿಕಾರಿಗಳು ನಿರಾಸಕ್ತಿ ತೋರುತ್ತಿರುವುದರಿಂದ ಯೋಜನೆಗಳು ಪೋಷ್ಟರ್‌ಗಳಲ್ಲಿ ಮಾತ್ರವೇ ಎನ್ನುವಂತಾಗಿದೆ. ಸರಕಾರ ಕೊಡುವ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಯಾಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು.

ಇದಕ್ಕೆ ಯೂನಿಯನ್ ಬ್ಯಾಂಕ್ ಅಧಿಕಾರಿ ಕೇಶವ್ ಪ್ರತಿಕ್ರಿಯಿಸಿ ಗ್ರಾಮ ಸಭೆಯಲ್ಲಿ ವ್ಯಕ್ತವಾದ ಆಪಾದನೆಗಳು ಸತ್ಯವಾಗಿದೆ. ಬ್ಯಾಂಕ್ ಅಧಿಕಾರಿಗಳ ವೈಯಕ್ತಿಕ
ಗುಣದೋಷದಿಂದಾಗಿ ಹಾಗೂ ಇದನ್ನು ಪ್ರಶ್ನಿಸುವ ಬಗ್ಗೆ ನಾಗರಿಕರು ತೋರುವ ಭೀತಿಯಿಂದಾಗಿ ಇದು ಮುಂದುವರೆಯುತ್ತಾ ಬಂದಿದೆ. ಸರಕಾರ ಜಾರಿಗೊಳಿಸಿದ ಯಾವುದೇ ಯೋಜನೆಯನ್ನು ನಿರಾಕರಿಸಲು ಬ್ಯಾಂಕ್ ಅಧಿಕಾರಿಗಳಿಗೆ ಯಾವ ಕಾರಣಕ್ಕೂ ಅಧಿಕಾರವಿಲ್ಲ. ಸಾಲ ಮಂಜೂರಾತಿಗೊಳಿಸಲು ನಿರಾಕರಿಸಿದ ಸಂಧರ್ಭದಲ್ಲಿ ಯಾಕಾಗಿ ಸಾಲ ಮಂಜೂರುಗೊಳ್ಳುತ್ತಿಲ್ಲ ಎನ್ನುವುದನ್ನು ಲಿಖಿತವಾಗಿ ನೀಡಲು ಒತ್ತಾಯಿಸಿ, ಸರಕಾರಿ ಯೋಜನೆಯ ಫಲಾನುಭವಿಗಳಿಗೆ ಸಾಲ ನಿರಾಕರಿಸಿದರೆ ಸೂಕ್ತ ದಾಖಲೆಯೊಂದಿಗೆ ಆಯಾ ಬ್ಯಾಂಕುಗಳ ವಿಭಾಗೀಯ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ಸಲ್ಲಿಸಬೇಕೆಂದು ಸಲಹೆ ನೀಡಿದರು.

ಗ್ರಾಮ ಸಭೆಯಲ್ಲಿ ಗ್ರಾಹಕರ ಸೇವಾ ಸಿಂಧು ವಿಭಾಗದ ಬಗ್ಗೆ ಹಮೀದ್, ಪ್ರಧಾನಮಂತ್ರಿ ಜನ ಔಷದ ಕೇಂದ್ರದ ಬಗ್ಗೆ ಜಯಂತ ಪೊರೋಳಿ ಮಾಹಿತಿ ನೀಡಿದರು.
ಅಧ್ಯಕ್ಷೆ ವಹಿಸಿದ ಉಷಾ ಮುಳಿಯ ಮಾತನಾಡಿ ಈ ವರೆಗೆ ಬ್ಯಾಂಕ್ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಅನುಷ್ಠಾನಿಸದೇ ಇರುವ ಬಗ್ಗೆ ನಮಗೆ ಆದೇಶ ಬಂದಿದೆ ಎಂದು ತಿಳಿಸಿದ್ದನ್ನು ಸತ್ಯವೆಂದು ನಂಬಿ ಹಿಂತಿರುಗುತ್ತಿದ್ದೇವು. ಇನ್ನು ಮುಂದಕ್ಕೆ ಬ್ಯಾಂಕ್ ಅಧಿಕಾರಿಗಳ ಧೋರಣೆ ವಿರುದ್ಧ ಮತ್ತು ಸರಕಾರದ ಯೋಜನೆಯು ಕಾರ್ಯಾನುಷ್ಠಾನವಾಗುವ ತನಕ ಹೋರಾಟವನ್ನು ನಡೆಸಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ದಿನೇಶ್ ವಂದಿಸಿದರು.
=

LEAVE A REPLY

Please enter your comment!
Please enter your name here