ಕುಂಡಾಜೆ ಗೇರುಬೀಜ ತೋಟದಲ್ಲಿರುವ ಪಾಂಡವರ ಗುಹೆಯ ರಹಸ್ಯ ಬಯಲು

0


ರಾಮಕುಂಜ: ಇಲ್ಲಿನ ಕುಂಡಾಜೆ ಸಮೀಪ ಸರಕಾರಿ ಗೇರುಬೀಜ ತೋಟದಲ್ಲಿರುವ ಬೃಹತ್ ಗುಹೆ ಶಿಲಾಯುಗದ ಸಮಾದಿ ಗುಹೆ ಎಂದು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ.

ಕುಂಡಾಜೆಯಲ್ಲಿ ಗೇರುತೋಟದಲ್ಲಿ ಬೃಹತ್ ಗುಹೆಯೊಂದಿದ್ದು ಇದು ಪಾಂಡವರ ಗುಹೆ ಎಂದು ಸ್ಥಳೀಯವಾಗಿ ಪ್ರಚಲಿತದಲ್ಲಿತ್ತು. ಇದಕ್ಕೆ ಪುಷ್ಠಿ ಎಂಬಂತೆ ಈ ಪ್ರದೇಶ ಪಾಂಡ್ರಡ್ಕ ಎಂದೇ ಪ್ರಸಿದ್ಧಿಯೂ ಪಡೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ಈ ಗುಹೆಯ ಕುರಿತು ಇರುವ ಕುತೂಹಲದಿಂದ ಹಾಗೂ ಇದರ ಬಗ್ಗೆ ಅಧ್ಯಯನಕ್ಕಾಗಿ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ನಿಶ್ಚಿತ್ ಗೋಳಿತ್ತಡಿಯವರು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಮುರುಗೇಶಿ ಹಾಗೂ ಅವರ ತಂಡದವನ್ನು ಕರೆ ತಂದಿದ್ದರು. ಇದರ ಅಧ್ಯಯನ ನಡೆಸಿರುವ ಮುರುಗೇಶಿಯವರು ಇದೊಂದು ಅಪರೂಪದ ಬೃಹತ್ ಶಿಲಾಯುಗದ ಸಮಾಧಿಯಾಗಿದೆ ಎಂದು ಇದೀಗ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಇಲ್ಲಿರುವ ಗುಹಾ ಸಮಾಧಿಗಳು ಶಿಲಾಯುಗ ಕಾಲದಲ್ಲಿ ರಚಿಸಲಾದ ಸಮಾಧಿಗಳಾಗಿದ್ದು, ಸಮಾಧಿಯ ಮಧ್ಯಭಾಗದಲ್ಲಿ ಸುಮಾರು ಎರಡರಿಂದ ಮೂರು ಅಡಿ ವ್ಯಾಸದ ರಂಧ್ರವನ್ನು ಸುಮಾರು ಒಂದು ಮೀಟರ್ ಆಳದ ವರೆಗೆ ಸಿಲಿಂಡರ್ ಆಕಾರದಲ್ಲಿ ಕೆಂಪು ಮುರಕಲ್ಲಿನ ಭೂಪಾತಳಿಯಲ್ಲಿ ಕೊರೆಯಲಾಗಿದೆ. ಇದರ ಕೆಳಭಾಗದಲ್ಲಿ ಅರ್ಧಗೋಳಾಕೃತಿಯ ಗುಹೆಯನ್ನು ಅಗತ್ಯವಾದ ಆಳ ಹಾಗೂ ಸುತ್ತಳತೆಯೊಂದಿಗೆ ಅಗೆದು ರಚಿಸಲಾಗಿದ್ದು, ಇದು ಬಹುತೇಕ ಬೌದ್ಧ ಧರ್ಮದ ಸ್ಥೂಪಗಳ ರಚನೆಯನ್ನು ಹೋಲುತ್ತದೆ. ಕರ್ನಾಟಕದ ಕರಾವಳಿಯಲ್ಲಿ ಇಂತಹ ರಚನೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ ಎಂದು ಅವರು ತಿಳಿಸಿದ್ದಾರೆ.

ಶಿಲಾಯುಗದ ಸಮಾಧಿಗಳ ಇರುವನ್ನು ಗುರುತಿಸಲು ಆ ಕಾಲದಲ್ಲಿ ಸಮಾಧಿಯ ಮೇಲೆ ಅಥವಾ ಸಮಾಧಿಯ ಸಮೀಪದಲ್ಲಿ ದೊಡ್ಡ, ದೊಡ್ಡ ಕಲ್ಲಿನ ಕಂಬಗಳನ್ನು ನಿಲ್ಲಿಸುತ್ತಿದ್ದರು. ಇಲ್ಲವೇ ಸಮಾಧಿಯ ಮೇಲ್ಭಾಗದಲ್ಲಿ ದೊಡ್ಡ, ದೊಡ್ಡ ಕಾಡು ಕಲ್ಲುಗಳ ಶಿಲಾ ವರ್ತುಲವನ್ನು ರಚಿಸುತ್ತಿದ್ದರು. ಕೆಲವು ಕಡೆ ಸಮಾಧಿಯ ಮೇಲೆ ಕಲ್ಲುಗಳ ರಾಶಿಯನ್ನು ಹೇರಿ, ಕಲ್ಗುಪ್ಪೆಗಳನ್ನು ನಿರ್ಮಿಸಿ ಸಮಾಽಗಳ ಇರುವನ್ನು ನಿರ್ದೇಶಿಸಲಾಗಿದೆ. ಆದರೆ ಕೆಂಪು ಮುರಕಲ್ಲಿನ ಮೇಲೆ ದೊಡ್ಡ ವೃತ್ತವನ್ನು ರಚಿಸಿ ಸಮಾಧಿಯ ಇರುವನ್ನು ಗುರುತಿಸಿರುವುದು ಕುಂಡಾಜೆಯಲ್ಲಿರುವ ಗುಹಾ ಸಮಾಧಿಯ ವಿಶೇಷತೆಯಾಗಿದೆ. ಆ ವೃತ್ತದ ಕೆಳಭಾಗದಲ್ಲಿ ಆ ವೃತ್ತದ ವಿಸ್ತಾರಕ್ಕೆ ಅನುಗುಣವಾಗಿ ಗುಹೆಯನ್ನು ರಚಿಸಲಾಗಿದೆ. ಆ ವೃತ್ತದ ವಿಸ್ತಾರ ಸುಮಾರು ಏಳು ಅಡಿಯಾಗಿದ್ದು, ಕೆಳಗಿನ ಗುಹೆಯೂ ಏಳು ಅಡಿ ವಿಸ್ತಾರವಾಗಿದೆ. ಇದೊಂದು ಅಪರೂಪದ ಹೊಸ ಮಾದರಿಯಾಗಿದೆ. ಗುಹೆಯ ಮಧ್ಯಭಾಗದಲ್ಲಿ ಅಗ್ನಿಕುಂಡವನ್ನು ಹೋಲುವ ಒಂದು ಗುಂಡಿ ಕಂಡು ಬಂದಿದ್ದು, ಇದೂ ಸಹ ಒಂದು ವಿಶೇಷ ಅಂಶವಾಗಿದೆ. ಗುಹೆಯ ಒಳಭಾಗದಲ್ಲಿ ಅತ್ಯಲ್ಪ ಪ್ರಮಾಣದ ಕೆಂಪು, ಕಪ್ಪು ಮತ್ತು ಕೆಂಪು ಬಣ್ಣದ ಮಡಕೆಯ ಚಿಕ್ಕ, ಚಿಕ್ಕ ಚೂರುಗಳು ಕಂಡು ಬಂದಿವೆ. ಬಹುಶಃ ಸಮಾಧಿಯ ಅವಶೇಷಗಳನ್ನು ದೋಚಿರುವಂತೆ ಗೋಚರಿಸುತ್ತಿದೆ ಎಂದು ಮುರುಗೇಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಮಾಧಿ ಅಧ್ಯಯನದ ಸಂದರ್ಭದಲ್ಲಿ ನಿಶ್ಚಿತ್ ಗೋಳಿತ್ತಡಿ, ನ್ಯಾಷನಲ್ ಗೋಲ್ಡ್ ಮತ್ತು ಡೈಮಂಡ್‌ನ ಮಾಲೀಕರಾದ ಯೂಸೂಫ್ ಹೈದರ್, ವಿದ್ಯಾರ್ಥಿಗಳಾದ ಶ್ರೇಯಸ್, ಗೌತಮ್, ಶಾರೀಕ್, ಕಾರ್ತಿಕ್, ವಿಶಾಲ್ ರೈ ಮತ್ತು ದಿಶಾಂತ್ ಪಾಲ್ಗೊಂಡಿದ್ದರು

ಗುಹೆಯಿಂದ ಬರುತ್ತಿತ್ತು ಆಭರಣ

ಈ ಗುಹೆಯ ಹಿಂದೆ ಆಸಕ್ತಿದಾಯಕ ಕಥೆಯೂ ಇದೆ. ಮದುವೆಯ ಸಂದರ್ಭದಲ್ಲಿ ಇಲ್ಲಿನ ಜನರು ಗುಹೆಯ ಸಮೀಪಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿ ಹೋಗುತ್ತಿದ್ದರು. ಪ್ರಾರ್ಥನೆ ಮಾಡಿದ ಮರು ದಿನ ಇಲ್ಲಿ ಮದುಮಕ್ಕಳ ಶೃಂಗಾರಕ್ಕೆ ಬೇಕಾದ ಆಭರಣಗಳು ಇರುತ್ತಿದ್ದವು. ಮದುವೆ ಮುಗಿದ ಬಳಿಕ ಎಲ್ಲಾ ಆಭರಣವನ್ನು ಮತ್ತೆ ಅಲ್ಲಿಯೇ ಇಡಬೇಕಿತ್ತು. ಇದನ್ನು ಇಲ್ಲಿನ ಜನರು ಬಹು ಸಮಯದಿಂದ ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಆದರೆ ಒಮ್ಮೆ ಆಭರಣ ಪಡೆದುಕೊಂಡವರು ಹಿಂತಿರುಗಿಸುವ ವೇಳೆ ಮೂಗುತ್ತಿಯನ್ನು ತಮ್ಮಲ್ಲೇ ಇರಿಸಿಕೊಂಡಿದ್ದರು. ಆ ಬಳಿಕ ಇಲ್ಲಿ ಎಷ್ಟೇ ಪ್ರಾರ್ಥಿಸಿದರೂ ಯಾರಿಗೂ ಆಭರಣ ಸಿಗಲಿಲ್ಲ ಎಂಬ ಮಾತುಗಳು ಈಗಾಲೂ ಚಾಲ್ತಿಯಲ್ಲಿವೆ.

ಈ ಗುಹೆಯನ್ನು ಸ್ಥಳೀಯರು ಪಾಂಡವರ ಗುಹೆ ಎಂದು ಹೇಳಿಕೊಳ್ಳುತ್ತಿದ್ದರು. ಸಂಶೋಧನೆ ಬಳಿಕ ಇದೊಂದು ಬಹಳ ಅಪರೂಪದ ಸಮಾಧಿ ಎಂಬುದು ತಿಳಿದುಬಂದಿದೆ. ಈ ಭಾಗದಲ್ಲಿ ಇನ್ನಷ್ಟೂ ಸಮಾಧಿಗಳು ಇರಬಹುದು.
-ಪ್ರೊ. ಟಿ. ಮುರುಗೇಶಿ, ಅಧ್ಯಯನಕಾರರು.

ಗುಹೆಯ ಕುರಿತು ಹಲವು ಆಸಕ್ತಿಗಳಿದ್ದವು. ಹಲವು ಕಥೆಗಳಿದ್ದವು. ಈ ಹಿನ್ನೆಲೆಯಲ್ಲಿ ಇದರ ರಹಸ್ಯ ತಿಳಿಯಲು ಅಧ್ಯಯನ ನಡೆಸುವಂತೆ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಮುರುಗೇಶಿಯವರಿಗೆ ಮನವಿ ಮಾಡಿದ್ದೆವು. ಅವರು ಸುಮಾರು 20 ದಿನದ ಹಿಂದೆ ವಿದ್ಯಾರ್ಥಿಗಳೊಂದಿಗೆ ಇಲ್ಲಿಗೆ ಬಂದು ಅಧ್ಯಯನ ನಡೆಸಿದ್ದರು.
-ನಿಶ್ಚಿತ್ ಗೋಳಿತ್ತಡಿ, ಇಂಜಿನಿಯರ್

LEAVE A REPLY

Please enter your comment!
Please enter your name here