ಕೆಯ್ಯೂರು ಗ್ರಾಮ ಪಂಚಾಯತು ನೂತನ ಕಛೇರಿ ಕಟ್ಟಡ ಉದ್ಘಾಟನೆ

0

  • ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಸೇವೆ ಅಧಿಕಾರಿಗಳದ್ದಾಗಲಿ: ಸಂಜೀವ ಮಠಂದೂರು


ಪುತ್ತೂರು: ಗ್ರಾಮ ಪಂಚಾಯತುಗೆ ನೂತನ ಕಛೇರಿ ಕಟ್ಟಡ ನಿರ್ಮಿಸುವುದು ಮುಖ್ಯವಲ್ಲ ಆ ಕಟ್ಟಡದೊಳಗೆ ಕೆಲಸ ನಿರ್ವಹಿಸುವ ಅಧಿಕಾರಿಗಳು ಜನರಿಗೆ ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಸೇವೆ ನೀಡುವವರು ಆಗಬೇಕಾಗಿದೆ. ಗ್ರಾಮದ ಬಡವರ, ದೀನದಲಿತರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಗಳು ಕಛೇರಿಯಲ್ಲಿರಬೇಕು, ಪಂಚಾಯತ್‌ನ ಪಿಡಿಓ, ಕಾರ್ಯದರ್ಶಿ ಮತ್ತು ಗ್ರಾಮಕರಣಿಕರೇ ಗ್ರಾಮದ ಜನರಿಗೆ ಉನ್ನತ ಅಧಿಕಾರಿಗಳಾಗಿದ್ದಾರೆ ಆದ್ದರಿಂದ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಈ ಅಧಿಕಾರಿಗಳಲ್ಲಿರಬೇಕು ಆಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಕೆಯ್ಯೂರು ಗ್ರಾಮ ಪಂಚಾಯತುನ ನೂತನ ಕಛೇರಿ ಕಟ್ಟಡ, ಗ್ರಾಮ ಲೆಕ್ಕಿಗರ ಕಛೇರಿ ಮತ್ತು ಎನ್.ಆರ್.ಎಲ್.ಎಂ ಸಂಜೀವಿನಿ ಘಟಕದ ಕಛೇರಿಯನ್ನು ಎ.29ರಂದು ಉದ್ಘಾಟಿಸಿ ಮಾತನಾಡಿದರು. ದೇಶಕ್ಕೆ ಅಂಟಿದ ಕೋರೋನ ಮಹಾಮಾರಿ ಜನರ ಆರೋಗ್ಯವನ್ನು ಹಾಳು ಮಾಡಿದ್ದು ಅಲ್ಲದೆ ಆರ್ಥಿಕ ವ್ಯವಸ್ಥೆಗೂ ಬಲುದೊಡ್ಡ ಪೆಟ್ಟು ನೀಡಿದೆ ಎಂದ ಶಾಸಕರು, ಸ್ವಚ್ಛ ಭಾರತ್ ಶ್ರೇಷ್ಠ ಭಾರತ್ ಎಂಬ ಪರಿಕಲ್ಪನೆಯಡಿಯಲ್ಲಿ ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು. ಸ್ವಚ್ಛತೆ ಎಂಬುದು ಪ್ರತಿಯೊಬ್ಬ ಮತದಾರನ ಮನೆಯಿಂದ ಆರಂಭವಾಗಬೇಕು ಆ ಬಳಿಕ ವಾರ್ಡ್, ಗ್ರಾಮದಲ್ಲಿ ಶುರುವಾಗಬೇಕು, ದೇಶದ ಗೌರವ ಹೆಚ್ಚಾಗಬೇಕಾದರೆ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಲಧಾರೆ ಯೋಜನೆಯ ಮೂಲಕ ಕುಡಿಯುವ ನೀರಿನ ವ್ಯವಸ್ಥೆ

ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವಲ್ಲಿ ಸರಕಾರ ಎಲ್ಲಾ ತರದ ಪ್ರಯತ್ನಗಳನ್ನು ಮಾಡುತ್ತಿದೆ.ಈಗಾಗಲೇ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಪಂಚಾಯತ್‌ಗೆ ಸುಮಾರು 1 ಕೋಟಿ 65ಲಕ್ಷ ರೂ.ಅನುದಾನ ನೀಡುವ ಪ್ರಯತ್ನ ನಡೆದಿದೆ ಇದಲ್ಲದೆ ನದಿಯ ನೀರನ್ನು ಬಳಸಿಕೊಂಡು ಪ್ರತಿ ಗ್ರಾಮಕ್ಕೆ ಕುಡಿಯುವ ನೀರು ಕೊಡುವ ಉದ್ದೇಶದಿಂದ ಸುಮಾರು 375 ಕೋಟಿ ರೂ.ವೆಚ್ಚದ ಜಲಧಾರೆ ಯೋಜನೆ ಆರಂಭಗೊಂಡಿದೆ.ಈ ಯೋಜನೆಯನ್ವಯ ಬಲ್ನಾಡು ಮತ್ತು ಪುಣಚದಲ್ಲಿ ಟ್ಯಾಂಕ್ ನಿರ್ಮಾಣಗೊಂಡು ಅಲ್ಲಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ಆಗಲಿದೆ. ಈಗಾಗಲೇ ಟೆಂಡರ್ ಹಂತದಲ್ಲಿದ್ದು ಮುಂದಿನ ತಿಂಗಳೊಳಗೆ ಟೆಂಡತ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಸಂಜೀವನ ಮಠಂದೂರು ಹೇಳಿದರು.

ರಸ್ತೆಗಳು ಮೇಲ್ದರ್ಜೆಗೆ

ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ನಡೆಯುತ್ತಿದೆ. ಒಟ್ಟು 1700 ಕಿ.ಮೀ ರಸ್ತೆಗಳಲ್ಲಿ ಕಳೆದ ವರ್ಷ ಸುಮಾರು 260 ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸಕ್ಕೆ ಅನುಮೋದನೆ ಆಗಿದೆ. ಇದರಲ್ಲಿ ಮಾಡಾವು ಸಿದ್ದಮೂಲೆ ರಸ್ತೆಯನ್ನು ಸುಮಾರು 20ಲಕ್ಷ ರೂ.ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸುವ ಕೆಲಸ ಆಗಲಿದೆ ಎಂದರು. ಇದಲ್ಲದೆ ಮಂದಿರ, ದೇವಸ್ಥಾನಗಳ ಅಭಿವೃದ್ಧಿಗೆ ಈಗಾಗಲೇ ಸುಮಾರು8 ಕೋಟಿ ರೂ.ಅನುದಾನ ನೀಡಲಾಗಿದೆ ಅದಲ್ಲದೆ ಮಸೀದಿ, ಚರ್ಚ್‌ಗಳ ಅಭಿವೃದ್ಧಿಗೆ ರೂ.3ಕೋಟಿ ಅನುದಾನ ಕೊಡುವ ವ್ಯವಸ್ಥೆ ಆಗಿದೆ ಎಂದು ಶಾಸಕರು ಹೇಳಿದರು. ಗ್ರಾಮಬಂಧು ಯೋಜನೆಯಡಿ ಗ್ರಾಮದ ಕಾಲುಸಂಕಗಳ ರಚನೆ ಕಾಮಗಾರಿ ಆಗಲಿದ್ದು ಇದಕ್ಕೆ ಈಗಾಗಲೇ 3.5 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ ಎಂದರು. ಸರಕಾರದ ಅಮೃತ ಯೋಜನೆಯಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಕೆಲಸಗಳು ನಡೆಯಲಿದೆ. ಯಾವುದೇ ಒಂದು ಗ್ರಾಮ ಅಭಿವೃದ್ಧಿಯಾಗಬೇಕಾದರೆ ಆ ಗ್ರಾಮದ ಗ್ರಾಮಸ್ಥರ ಸಹಕಾರ ಅತೀ ಮುಖ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಮಂಗಳೂರು ಕೆ.ಎಂ.ಎಫ್ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಮಾತನಾಡಿ, ಯಾವುದೇ ಒಂದು ಗ್ರಾಮ ಅಭಿವೃದ್ಧಿಯಾಗಬೇಕಾದರೆ ಆ ಗ್ರಾಮದ ಜನರ ಸಹಕಾರ ಅತೀ ಮುಖ್ಯ. ಗ್ರಾಮಸ್ಥರ ಅಧಿಕಾರಿಗಳಿಗೆ ಉತ್ತಮ ಸಹಕಾರ ನೀಡಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೆಯ್ಯೂರು ಗ್ರಾಮವು ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದುತ್ತಿರುವ ಗ್ರಾಮವಾಗಿದೆ ಎಂದರು. ಕೆಯ್ಯೂರು ಕೆದಂಬಾಡಿ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರು ಮಾತನಾಡಿ, ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯತ್ ಮತ್ತು ಸಹಕಾರಿ ಸಂಘಗಳು ಜಂಟಿಯಾಗಿ ಕೆಲಸ ಮಾಡಿದರೆ ಗ್ರಾಮದ ಅಭಿವೃದ್ಧಿ ಇನ್ನಷ್ಟು ಸಾಧ್ಯ ಎಂದರು. ಕೆಯ್ಯೂರು ಗ್ರಾಮ ಪಂಚಾಯತ್ ನೂತನ ಪಂಚಾಯತ್ ಆದರೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ, ಗ್ರಾಮದ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಿ ಶುಭ ಹಾರೈಸಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ಸಹಾಯಕ ನಿರ್ದೇಶಕಿ ಶೈಲಜಾರವರು ಮಾತನಾಡಿ, ನರೇಗಾ ಯೋಜನೆಯಡಿ ಪಂಚಾಯತ್ ಕಟ್ಟಡ ನಿರ್ಮಾಣ ಆಗಿರುವುದು ಖುಷಿ ತಂದಿದೆ. ನರೇಗಾದಲ್ಲಿ ಬಹಳಷ್ಟು ಪ್ರಯೋಜನಗಳಿದ್ದು ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿ ಶುಭ ಹಾರೈಸಿದರು. ಪಂಚಾಯತು ಉಪಾಧ್ಯಕ್ಷೆ ಗಿರಿಜಾ ಕಣಿಯಾರು ಮಾತನಾಡಿ, ಕೆಯ್ಯೂರು ಗ್ರಾಮದ ಅಭಿವೃದ್ಧಿ ಮತ್ತು ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕೇಳಿಕೊಂಡು ಶುಭ ಹಾರೈಸಿದರು.

ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ ಸಭಾಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಸುರೇಂದ್ರ ರೈ ಇಳಂತಾಜೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗ್ರಾಪಂ ಸಿಬ್ಬಂದಿ ಮಾಲತಿ, ಸದಸ್ಯರುಗಳಾದ ಮೀನಾಕ್ಷಿ ವಿ.ರೈ ಮತ್ತು ಸುಭಾಷಿಣಿ ಪ್ರಾರ್ಥಿಸಿದರು. ಗ್ರಾಪಂ ಸದಸ್ಯರುಗಳಾದ ಶರತ್ ಕುಮಾರ್ ಮಾಡಾವು, ತಾರಾನಾಥ ಕಂಪ, ಬಟ್ಯಪ್ಪ ರೈ, ಜಯಂತ ಪೂಜಾರಿ ಕೆಂಗುಡೇಲು,ವಿಜಯ ಕುಮಾರ್ ಸಣಂಗಳ, ಶೇಷಪ್ಪ ಡಿ, ಅಬ್ದುಲ್ ಖಾದರ್ ಮೇರ್ಲ, ಸುಮಿತ್ರ ಪಲ್ಲತ್ತಡ್ಕ, ಅಮಿತಾ ಎಚ್.ರೈ, ಮಮತಾ ರೈ, ನೆಬಿಸಾ, ಗ್ರಾಪಂ ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಧರ್ಮಣ್ಣ, ಮಾಲತಿ, ಜ್ಯೋತಿ , ರಫೀಕ್ ತಿಂಗಳಾಡಿ ಸಹಕರಿಸಿದ್ದರು. ಗ್ರಾಮ ಸಹಾಯಕ ನಾರಾಯಣ ಪಾಟಾಳಿ ವಂದಿಸಿದರು. ಸದಾಶಿವ ಭಟ್ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ

ಗ್ರಾಪಂ ಕಟ್ಟಡವನ್ನು ಸುಂದರವಾಗಿ ನಿರ್ಮಿಸಿಕೊಟ್ಟಿರುವ ಗುತ್ತಿಗೆದಾರ ಸಮೃದ್ಧಿ ಕನ್ಸ್‌ಸ್ಟ್ರಕ್ಷನ್‌ನ ಲೋಕೇಶ್ ರೈ ಅಮೈ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀನ ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಸಹಾಯಕ ವಿನೋದ್ ಕುಮಾರ್‌ರವರಿಗೆ ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಸಕರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

ಗ್ರಾಮಕ್ಕೆ ಸಹಕಾರಿ ಸಂಘ ಬೇಕು
ಕೆಯ್ಯೂರು ಗ್ರಾಮಕ್ಕೆ ಪ್ರತ್ಯೇಕ ಸಹಕಾರಿ ಸಂಘದ ಅವಶ್ಯಕತೆ ಇದೆ ಈ ಬಗ್ಗೆ ಶಾಸಕರು ಸಹಕಾರ ನೀಡಬೇಕು ಎಂದು ಎಸ್.ಬಿ.ಜಯರಾಮ ರೈ ಬಳಜ್ಜರವರು ಶಾಸಕರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕರು ಈ ಬಗ್ಗೆ ಸಹಕಾರಿ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸಿ ಪ್ರಯತ್ನ ಪಡುತ್ತೇನೆ ಎಂದರು. ಇದಲ್ಲದೆ ಕೆಯ್ಯೂರು ಗ್ರಾಮ ಪಂಚಾಯತ್ ಕಟ್ಟಡಕ್ಕೆ ಅನುದಾನ ನೀಡುವ ಬಗ್ಗೆ ಗ್ರಾಪಂ ಅಧ್ಯಕ್ಷರಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ನೂತನ ಕಛೇರಿಗೆ ಪೀಠೋಪಕರಣದ ಅವಶ್ಯಕತೆ ಇದೆ ಮತ್ತು ಕಛೇರಿ ಮೇಲ್ಛಾವಣಿಗೆ ಶೀಟ್ ಅಳವಡಿಕೆಯ ಅವಶ್ಯಕತೆ ಇರುತ್ತದೆ. ಆದ್ದರಿಂದ ಅಂದಾಜು ರೂ.10ಲಕ್ಷ ಅನುದಾನ ಮಂಜೂರು ಮಾಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.

` ಪಂಚಾಯತು ಕಟ್ಟಡವು ನರೇಗಾ ಯೋಜನೆಯಡಿ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ಗ್ರಾಮಸ್ಥರಿಗೆ, ಅಧಿಕಾರಿ ವರ್ಗದವರಿಗೆ, ಶಾಸಕ, ಸಂಸದ ರಾಜಕೀಯ ನಾಯಕರುಗಳಿಗೆ, ಗುತ್ತಿಗೆದಾರರಿಗೆ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.’ ಜಯಂತಿ ಎಸ್.ಭಂಡಾರಿ, ಅಧ್ಯಕ್ಷೆ ಕೆಯ್ಯೂರು ಗ್ರಾಪಂ

LEAVE A REPLY

Please enter your comment!
Please enter your name here