ಕಡಬ: ಪರಿಶಿಷ್ಠರ ಸಂವಿಧಾನಿಕ ಹಕ್ಕು ಕಸಿದುಕೊಳ್ಳುವವರ ವಿರುದ್ಧ ಹೋರಾಟ: ಶಶಿಧರ ಬೊಟ್ಟಡ್ಕ

0

ಕಡಬ: ಸುಳ್ಳು ದಾಖಲೆ ಸೃಷ್ಠಿಸಿ ಪ,ಜಾತಿಯ ಪ್ರಮಾಣ ಪತ್ರ ಪಡೆದು ಪರಿಶಿಷ್ಠರ ಸಂವಿಧಾನಿಕ ಹಕ್ಕನ್ನು ಕಸಿದುಕೊಂಡ ಮೀನುಗಾರ ಮೊಗೇರ ಮತ್ತು ಇತರ ಜಾತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅಗ್ರಹಿಸಿ ರಾಜ್ಯವ್ಯಾಪಿ ಹೋರಾಟ ಮಾಡಲು ನಿರ್ಧರಿಸಿದ್ದು ತಾಲೂಕು ಕೇಂದ್ರವಾದ ಕಡಬದಲ್ಲೂ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ದಲಿತ ಮುಖಂಡ ಕಡಬ ತಾಲೂಕು ಮೊಗೇರ ಹೋರಾಟ ಸಮಿತಿಯ ಅಧ್ಯಕ್ಷ ಶಶಿಧರ ಬೊಟ್ಟಡ್ಕ ಹೇಳಿದರು.

ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾರಾವಾರ ಜಿಲ್ಲೆಯ ಹಿಂದುಳಿದ ಪ್ರವರ್ಗ 1ರಲ್ಲಿ ಬರುವ ಮೀನುಗಾರ ಮೊಗೇರ ಜಾತಿಯ ಜನರು ಸುಳ್ಳು ದಾಖಲೆ ಸೃಷ್ಠಿಸಿ ಶಾಲಾ ದಾಖಲೆಗಳನ್ನು ತಿದ್ದುಪಡಿ ಮಾಡಿ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ಪಡೆದು ನೈಜ ಪರಿಶಿಷ್ಠರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡಿದ್ದಾರೆ. ದ.ಕ, ಉಡುಪಿ ಜಿಲ್ಲೆ ಹಾಗೂ ಗಡಿನಾಡು ಭಾಗಗಳಲ್ಲಿ ವಾಸ ಮಡುವ ಪರಿಶಿಷ್ಠ ಜಾತಿಯಲ್ಲಿ ಬರುವ ಮೊಗೇರ ಜಾತಿಯ ಸಂವಿಧಾನಿಕ ಮೀಸಲಾತಿಯನ್ನು ಕಬಳಿಸಲು ನಡೆಸಿರುವ ಹುನ್ನಾರದ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರಗಿಸುವಂತೆ ಅಗ್ರಹಿಸಿ ಮೊಗೇರ ಸಂಘ ಹಾಗೂ ದಲಿತ ಸಂಘಗಳು ಹೋರಾಟ ನಡೆಸಲು ನಿರ್ಧರಿಸಿವೆ ಎಂದು ಹೇಳಿದರು.

ಶತಮಾನಗಳಿಂದ ಅಸ್ಪ್ರಶ್ಯತೆ, ಅಸಮಾನತೆಯಿಂದ ಬೆಂದಿರುವ ನಾವು ಈ ನೆಲದ ಮೂಲ ನಿವಾಸಿಗಳು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕ ಮುಂದುವರಿಯುವ ಉದ್ದೇಶದಿಂದಾಗಿ ಸಂವಿಧಾನದಲ್ಲಿ ನಮಗೆ ಮೀಸಲಾತಿ ಹಕ್ಕನ್ನು ಕಲ್ಪಿಸಿಕೊಡಲಾಗಿದೆ. ಸರಕಾರದ ಗಜೆಟಿಯರ್ ಆಫ್ ಇಂಡಿಯಾದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ.ಜಾತಿ ಪಟ್ಟಿಯಲ್ಲಿ ಮೊಗೇರ ಅಥಾವ ಬೆಸ್ತ ಜಾತಿಯ ಬಗ್ಗೆ ಉಲ್ಲೇಖವಿಲ್ಲ. ಇದರಲ್ಲಿ ಅಸ್ಪ್ರಶ್ಯ ಜನರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದನ್ನು ಸ್ಪಷ್ಟಪಡಿಸಲಾಗಿದೆ. ಮೊಗೇರ ಜಾತಿಯ ಇನ್ನೊಂದು ಸಮಾನಾಂತರ ಜಾತಿಯ ಸೂಚಕ ಶಬ್ದವನ್ನು ಬಳಸಿ ಮೀಸಲಾತಿ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಕ್ಷೇತ್ರ ನಿರ್ಭಂಧನೆಯನ್ನು ವಿಧಿಸಲಾಗಿತ್ತು. ಆದ್ದರಿಂದ 1956 ರಿಂದ 76 ರ ವರಗೆ ಪರಿಶಿಷ್ಠರು ಮಾತ್ರ ಮೊಗೇರ ಜಾತಿ ಪ್ರಮಣ ಪತ್ರ ಪಡೆಯುತ್ತಿದ್ದರು. ಆದರೆ ಕ್ಷೇತ್ರ ನಿರ್ಬಂಧವನ್ನು ಸರಕಾರ ರದ್ದುಗೊಳಿಸದ ಬಳಿಕ ಕಾರವಾರದ ಬೆಸ್ತ ಮೊಗೇರರು ದಾಖಲೆಗಳನ್ನು ತಿದ್ದುಪಡಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರಕಾರದ ಎಲ್ಲಾ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಇದು ನಿಲ್ಲಬೇಕು ನಮ್ಮ ಸಾಂವಿಂಧಾನಿಕ ಹಕ್ಕು ಇನ್ನೊಬ್ಬರ ಪಾಲಾಗಬಾರದು ಎನ್ನುವ ಹಕ್ಕೊತ್ತಾಯವನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ, ಸರಕಾರದ ಹಾಗೂ ನ್ಯಾಯಾಲಯದ ಆದೇಶ ನಮ್ಮ ಪರವಾಗಿವೆ. ನಮ್ಮ ಸಚಿವರು ಕೂಡಾ ನಮ್ಮ ಮನವಿಗೆ ಪೂರಕ ಸ್ಪಂದನ ನೀಡಿದ್ದಾರೆ ಆದರೂ ರಾಜಕೀಯ ವಲಯದಲ್ಲಿ ಪ್ರಭಾವಿಗಳಾಗಿರುವ ಮೀನುಗಾರ ಮೊಗೇರರು ಸರಕಾರದ ದಾರಿ ತಪ್ಪಿಸುವ ಸಾಧ್ಯತೆ ಇದೆ ಎನ್ನುವ ಅನುಮಾನ ಮೂಡಿದೆ. ಈ ಎಲ್ಲಾ ಕಾರಣಕ್ಕೆ ಹೋರಾಟವನ್ನು ತೀವೃಗೊಳಿಸಲಾಗಿದೆ. ಮೀನುಗಾರ ಮೊಗೇರರು 1977 ರಿಂದ ಈಚೆಗೆ ಮೋಸದಿಂದ ಪಡೆದುಕೊಂಡಿರುವ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಸರಕಾರದಿಂದ ಪಡೆದ ಎಲ್ಲಾ ಸೌಲಭ್ಯಗಳನ್ನು ವಾಪಾಸ್ಸು ಪಡೆಯಬೇಕು, ಅವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಅಗ್ರಹಿಸಿದ ಶಶಿಧ ಬೊಟ್ಟಡ್ಕ ಈ ನಿಟ್ಟಿನಲ್ಲಿ ಮೇ 10 ರಂದು ಜಿಲ್ಲೆಯ ಪ್ರತೀ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ಹಕ್ಕೊತ್ತಾ ಸಲ್ಲಿಸಲಾಗುವುದು, ಮೇ 23 ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಡಬ ತಾಲೂಕು ಮೊಗೇರ ಹೋರಾಟ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಕೇಪುಳು, ಸದಸ್ಯರಾದ ವಸಂತ ಕುಬಲಾಡಿ, ಸತೀಶ್ ಕೈಕಂಬ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here