ಕೇಪು: ಪರಸ್ಪರ ಹಲ್ಲೆ ಆರೋಪ- ಇತ್ತಂಡದವರ ವಿರುದ್ಧ ಪ್ರಕರಣ ದಾಖಲು

0

ವಿಟ್ಲ: ಕೇಪು ಗ್ರಾಮದ ಮೈರ ಎಂಬಲ್ಲಿ ನಡೆದ ಪರಸ್ಪರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡದವರು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ ಕುಂಞಪಾದೆ ನಿವಾಸಿ ಗಿರೀಶ್ (33 ವ.) ಅವರು ನೀಡಿದ ದೂರಿನಂತೆ ಆರೋಪಿಗಳಾದ ಸಾದೀಕ್, ಜಾಬೀರ್, ಅಶ್ರಫ್, ಜುಬೈರ್ ಹಾಗೂ ಇತರ ೪ ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸ ಮುಗಿಸಿ ತನ್ನ ಆಟೋ ರಿಕ್ಷಾ ದಲ್ಲಿ ನಾನು ಮೈರ ಕಡೆಗೆ ತೆರಳುತ್ತಿದ್ದಾಗ ಕೇಪು ಗ್ರಾಮದ ಕರವೀರ ಬಸ್ ನಿಲ್ದಾಣದ ಬಳಿ ಎರಡು ಕಾರುಗಳು ನಿಂತಿದ್ದು, ನನ್ನ ಪರಿಚಯದ ರಕ್ಷಿತ್ ಕುಮಾರ್ ಎಂಬವರಿಗೆ ಹಲ್ಲೆ ಮಾಡುತ್ತಿದ್ದರು. ಇದನ್ನು ಕಂಡು ನಾನು ಬಸ್ ನಿಲ್ದಾಣದ ಬಳಿ ಹೋಗಿ ಹಲ್ಲೆ ಮಾಡುತ್ತಿರುವುದನ್ನು ತಡೆಯಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಲೆಗೆ ಹೊಡೆದು, ನಂತರ ಅಲ್ಲಿದ್ದ ಜಾಬೀರ್ ಎಂಬಾತನು ತನ್ನ ಕೈಯಲ್ಲಿದ್ದ ತಲವಾರಿನಿಂದ ರಕ್ಷಿತ್ ಕುಮಾರ್ ನ ತಲೆಗೆ, ಅಶ್ರಫ್ ಎಂಬಾತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ರಕ್ಷಿತ್‌ನ ತಲೆಯ ಹಿಂಬದಿಗೆ ಮತ್ತು ಜುಬೈರ್ ನು ತನ್ನ ಕೈಯಲ್ಲಿದ್ದ ತಲವಾರಿನಿಂದ ರಕ್ಷಿತ್ ಕುಮಾರ್‌ನಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಗಿರೀಶ್ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ನಿವಾಸಿ ಖಾದರ್ ರವರ ಪುತ್ರ ಮಹಮ್ಮದ್ ಶರೀಫ್(೩೪ ವ.) ರವರು ನೀಡಿದ ದೂರಿನಂತೆ ಗಣೇಶ್, ಕಿರಣ್ ಹಾಗೂ ಇತರ ಮೂವರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾನು ನನ್ನ ಲಾರಿಯಲ್ಲಿ ಕಾಸರಗೋಡಿನಲ್ಲಿ ಗ್ರಾನೈಟ್ ಕೆಲಸ ಮುಗಿಸಿಕೊಂಡು ನಂತರದಲ್ಲಿ ಪ್ಲೈವುಡ್ ಲೋಡ್ ಮಾಡಿಕೊಂಡು ಬೆಂಗಳೂರು ಕಡೆಗೆ ಹೋಗುವಾಗ ಬಂಟ್ವಾಳ ತಾಲೂಕು ಕೇಪು ಗ್ರಾಮದ ಕುದ್ದುಪದವು ಜಂಕ್ಷನ್ ತಲುಪಿ ಲಾರಿ ಹಾರ್ನ್ ಮಾಡಿದಾಗ ಅಲ್ಲೇ ಇದ್ದ ಗಣೇಶ, ಕಿರಣ್ ಸಹಿತ ಐವರಿದ್ದ ತಂಡ ಕುದ್ದುಪದವುನಿಂದ ಸ್ವಲ್ಪ ಮುಂದೆ ಲಾರಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಮಹಮ್ಮದ್ ಶರೀಫ್ ರವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇತ್ತಂಡಗಳವರ ವಿರುದ್ಧ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here