ಮೇ 31:ರಾಜ್ಯಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಸೇವಾ ನಿವೃತ್ತಿ

0

ಬೆಟ್ಟಂಪಾಡಿ: ರಾಷ್ಟ್ರೀಯ ಕ್ರೀಡಾ ತರಬೇತುದಾರ ಹಾಗೂ ತೀರ್ಪುಗಾರ, ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ರಾಜ್ಯಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡರವರು ಮೇ 31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

 

ಬೆಟ್ಟಂಪಾಡಿಯ ಕೋರ್ಮಂಡ ಪದ್ಮನಾಭ ರೈ ಮತ್ತು ಸುಶೀಲಾ ಪಿ. ರೈ ದಂಪತಿಯ ಪುತ್ರನಾಗಿ 1962 ರಲ್ಲಿ ಜನಿಸಿದ ದಯಾನಂದ ರೈಯವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಾರ, ಉಬರಡ್ಕ ಮತ್ತು ಬೆಟ್ಟಂಪಾಡಿ ಸರಕಾರಿ ಶಾಲೆಗಳಲ್ಲಿ ಪಡೆದು ಬೆಟ್ಟಂಪಾಡಿಯ ನವೋದಯ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ, ಪುತ್ತೂರು ಸಂತಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮೈಸೂರು ವಿವಿಯಲ್ಲಿ ಬಿ.ಪಿ.ಎಡ್ ಶಿಕ್ಷಣ ಪೂರೈಸಿ, ಆಗಸ್ಟ್ 11, 1987 ರಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ಆರಂಭಿಸಿದರು. 1999 ರಲ್ಲಿ ತಾನು ಕಲಿತ ಶಾಲೆಯಾದ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಗೆ ವರ್ಗಾವಣೆಗೊಂಡು ಒಟ್ಟು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಸಾಧನೆಗಳು: ಅತ್ಲೆಟಿಕ್ಸ್‌ನಲ್ಲಿ ರಾಷ್ಟ್ರ ಮಟ್ಟದ ತೀರ್ಪುಗಾರರಾಗಿ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸ್ಟಾರ್ಟರ್ (ಓಟದ ಆರಂಭಿಕನಾಗಿ) ಆಗಿ ಕಾರ್ಯ ನಿರ್ವಹಣೆ, 1994-95ರಲ್ಲಿ ಬಿಹಾರದಲ್ಲಿ ನಡೆದ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್‌ನಲ್ಲಿ ಕರ್ನಾಟಕ ತಂಡದ ತರಬೇತುದಾರನಾಗಿ ಆಯ್ಕೆ, 2002-03 ರಲ್ಲಿ ನಡೆದ ರಾಷ್ಟ್ರಮಟ್ಟದ ಅತ್ಲೆಟಿಕ್ಸ್‌ನಲ್ಲಿ ಕರ್ನಾಟಕ ತಂಡದ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಣೆ, ಬಾಸ್ಕೆಟ್‌ಬಾಲ್‌ನಲ್ಲಿ ರಾಜ್ಯಮಟ್ಟದ ತೀರ್ಪುಗಾರರಾಗಿ ಗುರುತಿಸಲ್ಪಟ್ಟಿದ್ದ ರೈಯವರು ಮೈಸೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜ್ ಸಾಫ್ಟ್‌ಬಾಲ್ ಪಂದ್ಯಾಟದಲ್ಲಿ ಚಿನ್ನದ ಪದಕ ಹಾಗೂ ಕರ್ನಾಟಕ ರಾಜ್ಯ ಮೈಸೂರು ದಸರಾ ಖೋ-ಖೋ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದ ಸಾಧಕರಾಗಿದ್ದಾರೆ. ಅಲ್ಲದೇ ಸ್ಕೌಟ್ ಶಿಕ್ಷಕ ತರಬೇತಿ, ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ಯೋಗ ತರಬೇತಿ, ಸುದರ್ಶನ ಕ್ರಿಯಾ ಯೋಗ ತರಬೇತಿ, ಯೋಗ ಪ್ರಾಣ ವಿದ್ಯಾ ಇದರಲ್ಲಿ ೪ ಹಂತದ ತರಬೇತಿ, ಯಕ್ಷಗಾನ ನಾಟ್ಯ ತರಬೇತಿ, ತುಳು ಧಾರಾವಾಹಿಯಲ್ಲಿ ನಟನೆ, ಹಲವಾರು ನಾಟಕಗಳಿಗೆ ನಿರ್ದೇಶನ, 300 ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯ ಮಾಡಿರುವ ಇವರು ಓರ್ವ ಉತ್ತಮ ಕಲಾವಿದರೂ ಆಗಿದ್ದಾರೆ. ಇವರಿಂದ ತರಬೇತಿ ಪಡೆದಿರುವ ಮಂಗಳೂರು ಸಂತ ಅಲೋಶಿಯಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಾಸ್ಕೆಟ್‌ಬಾಲ್, ಹಾಕಿ, ಫುಟ್‌ಬಾಲ್, ಕ್ರಿಕೆಟ್, ಖೋ-ಖೋ, ಬ್ಯಾಡ್ಮಿಂಟನ್, ಅತ್ಲೆಟಿಕ್ಸ್, ಟೇಬಲ್‌ಟೆನ್ನಿಸ್, ಚೆಸ್, ಈಜು ಸ್ಪರ್ಧೆಗಳಲ್ಲಿ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪದಕಗಳನ್ನು ಪಡೆದಿದ್ದಾರೆ. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖಾ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳ್ಳಿಪದಕ, ರಾಜ್ಯಮಟ್ಟದಲ್ಲಿ 47 ಪದಕಗಳು, ಅಂತರ್ ಜಿಲ್ಲಾ ಸಮಗ್ರ ಪ್ರಶಸ್ತಿ (ದ.ಕ, ಕೊಡಗು, ಉಡುಪಿ), ಸಾ.ಶಿ ಇಲಾಖಾ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 3 ಬಾರಿ ಸಮಗ್ರ ಪ್ರಶಸ್ತಿ, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 24 ಬಾರಿ ಸಮಗ್ರ ಪ್ರಶಸ್ತಿ, ಸುಮಾರು ೪೦ ಕ್ಕೂ ಮಿಕ್ಕಿ ವೈಯಕ್ತಿಕ ಚಾಂಪಿಯನ್‌ಶಿಪ್ ಹಾಗೂ ಹಲವಾರು ವೈಯಕ್ತಿಕ ದಾಖಲೆಗಳನ್ನು ಮಾಡುವಲ್ಲಿ ಇವರ ತರಬೇತಿ ಕಾರಣವಾಗಿದೆ.

ಶಾಲಾಭಿವೃದ್ಧಿ: ಕ್ರೀಡಾ ತರಬೇತಿ ಜೊತೆಗೆ ಶಾಲೆಯ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಉತ್ತಮ ಗುಣಮಟ್ಟದ ಕ್ರೀಡಾಂಗಣ ಪೆವಿಲಿಯನ್ ನಿರ್ಮಿಸಿ ಅದರ ನಿರ್ವಹಣೆ, ಕುಡಿಯುವ ನೀರು, ರಸ್ತೆ ಡಾಮರೀಕರಣ, ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಇವರ ನೇತೃತ್ವದಲ್ಲಿ ನಡೆದಿರುತ್ತವೆ.

ಸಂಘ ಸಂಸ್ಥೆಗಳು: ಪುತ್ತೂರು ತಾಲೂಕು ದೈ.ಶಿ.ಶಿ. ಸಂಘದ ಅಧ್ಯಕ್ಷರಾಗಿ, ದ.ಕ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಯಾಗಿ, ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ, ಲಯನ್ಸ್ ಕ್ಲಬ್ ಪುತ್ತೂರು -ಪಾಣಾಜೆ ಇದರ ಉಪಾಧ್ಯಕ್ಷರಾಗಿ, ಬೆಟ್ಟಂಪಾಡಿ ವಿವೇಕ ಯುವಕ ಮಂಡಲದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

ಪ್ರಶಸ್ತಿಗಳು: ಸಾರ್ವಜನಿಕ ಶಿಕ್ಷಣ ಇಲಾಖಾ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಸಾ.ಶಿ ಇಲಾಖಾ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಪುತ್ತೂರು ತಾಲೂಕು ಸಾ.ಶಿ. ಇಲಾಖಾ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಅಮೆಚೂರು ಅತ್ಲೆಟಿಕ್ಸ್ ಅಸೋಸಿಯೇಶನ್ ನೀಡಿದ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳು ಇವರ ಸೇವೆಯನ್ನು ಗುರುತಿಸಿ ನೀಡಲಾಗಿದೆ.

ಸಾಂಸಾರಿಕ ಜೀವನ: ಪತ್ನಿ ಚಿತ್ರಾ ಡಿ. ರೈ, ಪುತ್ರಿ ದೇರಳಕಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ `ಪೇಷೆಂಟ್ ಕೇರ್ ಕ್ವಾಲಿಟಿ’ ವಿಭಾಗದ ಸಹಾಯಕ ಮ್ಯಾನೇಜರ್ ಆಗಿರುವ ಪೂಜಾ ರೈ, ಅಳಿಯ ನಿಟ್ಟೆ ಯುನಿವರ್ಸಿಟಿಯ ರೆಸಿಡೆಂಟ್ ಇಂಜಿನಿಯರ್ ಆಗಿರುವ ಅರ್ಜುನ್ ಪೂಂಜಾ ರವರ ಜೊತೆ ಸುಖೀ ಸಂಸಾರಿಯಾಗಿರುವ ಇವರು ಪ್ರಸ್ತುತ ಪರ್ಪುಂಜದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here