ಕುಂಬ್ರ: ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳು ಪದಗ್ರಹಣ ಸಮಾರಂಭ:  ಮಹಿಳೆಯರು ಸ್ವಾವಲಂಭಿ ಜೀವನ ನಡೆಸಲು ಯೋಜನೆ ಸಹಕಾರಿಯಾಗಿದೆ: ತ್ರಿವೇಣಿ ಪಲ್ಲತ್ತಾರು

0

ಪುತ್ತೂರು: ಸಮಾಜದಲ್ಲಿ ಮಹಿಳೆಯರಿಗೂ ಸ್ವಾವಲಂಭಿ ಜೀವನ ನಡೆಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಾರಿ ಮಾಡಿಕೊಟ್ಟಿದೆ. ಕೋಟ್ಯಾಂತರ ಜನರಿಗೆ ಯೋಜನೆ ಜೀವನ ನೀಡಿದೆ. ಆರೋಗ್ಯ ಮತ್ತು ಆರ್ಥಿಕ ಸುಧಾರಣೆಗೆ ಯೋಜನೆ ಸಹಕಾರಿಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಕೂಡ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.


ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ಮಾರ್ಗದರ್ಶನದಲ್ಲಿ ಪ್ರಗತಿಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಕುಂಬ್ರ, ಕುಂಬ್ರ ಬಿ, ಒಳಮೊಗ್ರು, ತ್ಯಾಗರಾಜನಗರ, ಕೆದಂಬಾಡಿ ಮತ್ತು ಆರ್ಯಾಪು (ಸಂಪ್ಯ) ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜೂ.೦೫ ರಂದು ಕುಂಬ್ರ ರೈತ ಸಭಾಭವನದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆಯಿಂದ ಕೋಟ್ಯಾಂತರ ಮಂದಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಸ್ವಾವಲಂಭಿ ಜೀವನ ನಡೆಸುತ್ತಿದ್ದಾರೆ ಎಂದ ಅವರು, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉತ್ತಮ ರೀತಿಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಒಕ್ಕೂಟವನ್ನು ಬಲಪಡಿಸುವ ಜೊತೆಯಲ್ಲಿ ತಮ್ಮ ಅಭಿವೃದ್ಧಿಯನ್ನು ಕೂಡ ಮಾಡಿಕೊಳ್ಳಬೇಕು ಎಂದು ತ್ರಿವೇಣಿ ಪಲ್ಲತ್ತಾರು ಹೇಳಿ ಶುಭ ಹಾರೈಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಜನಜಾಗೃತಿ ವೇದಿಕೆ ಕುಂಬ್ರ ವಲಯ ಅಧ್ಯಕ್ಷ, ಕುಂಬ್ರ ಸಿಎ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಪ್ರಕಾಶ್ಚಂದ್ರ ರೈ ಕೈಕಾರರವರು ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳು ಗ್ರಾಮದ ಜನರ ಅಭಿವೃದ್ಧಿಯ ಪರ ಕೆಲಸ ಮಾಡುತ್ತಿವೆ. ಜನರಿಗೆ ಸ್ವಾವಲಂಭಿ ಜೀವನ ನಡೆಸಲು ಸಹಕಾರಿಯಾಗುವ ರೀತಿಯಲ್ಲಿ ಎಲ್ಲಾ ವಿಧದಲ್ಲೂ ಸಹಾಯವನ್ನು ಮಾಡುತ್ತಿವೆ ಎಂದ ಅವರು, ಜನರು ಕೂಡ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಉತ್ತಮ ರೀತಿಯಲ್ಲಿ ಜೀವನ ನಡೆಸಬೇಕು ಮತ್ತು ಪಡೆದ ಸಾಲವನ್ನು ವ್ಯವಸ್ಥಿತ ರೀತಿಯಲ್ಲಿ ಮರುಪಾವತಿ ಮಾಡುವ ಮೂಲಕ ಉತ್ತಮ ವ್ಯಕ್ತಿಗಳಾಗಿ, ಸತ್ಯ,ಧರ್ಮ,ನಿಷ್ಠೆ,ಪ್ರಾಮಾಣಿಕ, ಸಂಸ್ಕಾರ, ಸಂಸ್ಕೃತಿಯುತ ಜೀವನ ನಡೆಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿದ್ದ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ಯೋಜನಾಧಿಕಾರಿ ಆನಂದರವರು ಮಾತನಾಡಿ, ಒಕ್ಕೂಟದ ಬಲ ಬರಬೇಕು ಒಕ್ಕೂಟದ ಪದಾಧಿಕಾರಿಗಳಿಗೆ ಶಕ್ತಿ ಬರಬೇಕು ಎಂಬ ನಿಟ್ಟಿನಲ್ಲಿ ಪದಗ್ರಹಣ ಮಾಡಲಾಗುತ್ತಿದೆ. ನಾವೆಲ್ಲರೂ ಶಕ್ತಿವಂತರಾಗಿ ಒಕ್ಕೂಟದ ಮೂಲಕ ನಮ್ಮೆಲ್ಲರ ಅಭಿವೃದ್ಧಿಗೆ ಶ್ರಮ ಪಡಬೇಕು. ಕೇವಲ ಅವಕಾಶಗಳಿಗೆ ಕಾಯದ ವ್ಯಕ್ತಿಗಳಾದೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿ ಮಾಡುವವರು ನಾವಾಗಬೇಕು ಆಗಲೇ ನಮ್ಮ ಅಭಿವೃದ್ಧಿ ಸಾಧ್ಯ, ನೂತನ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ಹೇಳಿ ಶುಭ ಹಾರೈಸಿದರು. ಯೋಜನೆಯ ದ.ಕ ಜಿಲ್ಲೆ ೨ ಪುತ್ತೂರು ಇದರ ಎಮ್.ಐ.ಎಸ್ ಯೋಜನಾಧಿಕಾರಿ ಗೋಪಾಲ ಆಚಾರ್ಯರವರು ಮಾತನಾಡಿ, ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಕ್ಕೂಟಗಳು ಅತ್ಯಂತ ಉತ್ತಮವಾಗಿ ನಡೆಯುತ್ತಿವೆ. ಇತರ ಜಿಲ್ಲೆಗಳಿಗೆ ನಮ್ಮ ಒಕ್ಕೂಟಗಳ ಮಾದರಿಗಳಾಗಿವೆ. ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಒಗ್ಗಟ್ಟಾಗಿ ಒಟ್ಟು ಸೇರಿ ಕೆಲಸ ಮಾಡಿದಾಗ ಒಕ್ಕೂಟಕ್ಕೆ ಯಶಸ್ಸು ಸಿಗುತ್ತದೆ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಒಕ್ಕೂಟವನ್ನು ಬಲಪಡಿಸುವ ಎಂದು ಹೇಳಿ ಶುಭ ಹಾರೈಸಿದರು. ಕುಂಬ್ರ ಸಿ.ಎ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಮಾತನಾಡಿ ಉಳಿತಾಯದೊಂದಿಗೆ ಆರ್ಥಿಕವಾಗಿ ಜನರನ್ನು ಗಟ್ಟಿಗೊಳಿಸುವ ಕೆಲಸವನ್ನು ಯೋಜನೆ ಮಾಡುತ್ತಿದೆ. ಜನರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆಯೊಂದಿಗೆ ಶಿಸ್ತಿನ ಜೀವನ ಪಾಠವನ್ನು ಯೋಜನೆ ಹೇಳಿಕೊಟ್ಟಿದೆ ಮುಖ್ಯವಾಗಿ ಮಹಿಳೆಯರು ಸ್ವಾವಲಂಭಿ ಜೀವನ ನಡೆಸಲು ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.ಒಕ್ಕೂಟದ ಕುಂಬ್ರ ವಲಯಾಧ್ಯಕ್ಷ ರಾಧಾಕೃಷ್ಣ ರೈ ಮಾತನಾಡಿ, ಜಾತಿ,ಧರ್ಮ,ಮತ ಬೇಧವಿಲ್ಲದೆ ರಾಜಕೀಯ ರಹಿತವಾಗಿ ಯೋಜನೆ ಕೆಲಸ ಮಾಡುತ್ತಿದೆ ಇದರಿಂದಾಗಿ ಎಲ್ಲರ ಬೆಳೆವಣಿಗೆ ಸಾಧ್ಯವಾಗಿದೆ. ಖಾವಂದರ ಕನಸು ಇದೇ ಆಗಿರುವುದರಿಂದ ಗ್ರಾಮದ ಅಭಿವೃದ್ಧಿಯಲ್ಲಿ ಯೋಜನೆಯ ಕೆಲಸ ಎಲ್ಲಕ್ಕಿಂತ ದೊಡ್ಡದಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಕೆದಂಬಾಡಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಪೂಜಾರಿ ಹಾಗೂ ಆರ್ಯಾಪು ಒಕ್ಕೂಟದ ನೂತನ ಅಧ್ಯಕ್ಷೆ ಶಶಿಪ್ರಭಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ವರ್ಗಾವಣೆಗೊಂಡ ಸೇವಾ ಪ್ರತಿನಿಧಿಗಳಿಗೆ ಸನ್ಮಾನ
ವರ್ಗಾವಣೆಗೊಂಡ ಸೇವಾ ಪ್ರತಿನಿಧಿಗಳಾದ ತ್ರಿವೇಣಿ ಪಲ್ಲತ್ತಾರು, ಆನಂದ ರೈ ಮಠ ಮತ್ತು ಶಶಿಕಲಾರವರಿಗೆ ಈ ಸಂದರ್ಭದಲ್ಲಿ ಆಯಾ ಒಕ್ಕೂಟದ ಪದಾಧಿಕಾರಿಗಳ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲು, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಿತು.

ಪರಿಸರ ದಿನಾಚರಣೆ
ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಒಕ್ಕೂಟದ ಪದಾಧಿಕಾರಿಗಳಿಗೆ ಸಾಂಕೇತಿಕವಾಗಿ ಗಿಡಗಳನ್ನು ವಿತರಿಸುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ವೇದಿಕೆಯಲ್ಲಿ ಆರ್ಯಾಪು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ರಾಮಕೃಷ್ಣ, ತ್ಯಾಗರಾಜ ಒಕ್ಕೂಟದ ಶಕುಂತಳಾ, ಒಳಮೊಗ್ರು ಒಕ್ಕೂಟದ ನೂತನ ಅಧ್ಯಕ್ಷ ಗೋವಿಂದ ನಾಯ್ಕ, ತ್ಯಾಗರಾಜನಗರ ಒಕ್ಕೂಟದ ನೂತನ ಅಧ್ಯಕ್ಷ ಸೀತಾರಾಮ ಗೌಡ, ಕೆದಂಬಾಡಿ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ ರೈ, ಕುಂಬ್ರ ಬಿ ಒಕ್ಕೂಟದ ಅಧ್ಯಕ್ಷೆ ಲಲಿತಾ, ಕುಂಬ್ರ ಒಕ್ಕೂಟದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ ಉಪಸ್ಥಿತರಿದ್ದರು. ಕುಂಬ್ರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶಶಿಕಲಾ ವರದಿ ವಾಚಿಸಿದರು. ಚಂದ್ರ ಇದ್ಪಾಡಿ ವಂದಿಸಿದರು. ಕುಂಬ್ರ ವಲಯ ಮೇಲ್ವಿಚಾರಕಿ ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿಗಳಾದ ನಳಿನಾಕ್ಷಿ, ಆನಂದ ರೈ, ಅಕ್ಷತಾ, ಚೇತನಾ, ವಿಶಾಲಾಕ್ಷಿ, ರಜನಿ ಸಹಕರಿಸಿದ್ದರು.

ಒಟ್ಟು 6 ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ನಡೆಯಿತು. 6 ಒಕ್ಕೂಟಗಳು 280ಸಂಘಗಳಿದ್ದು ಒಟ್ಟು 1850 ಮಂದಿ ಸದಸ್ಯರಿದ್ದಾರೆ.


LEAVE A REPLY

Please enter your comment!
Please enter your name here