ಕುದ್ಮಾರು: ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಶಿಕ್ಷಕ ಸೀತಾರಾಮರವರಿಗೆ ಬೀಳ್ಕೊಡುಗೆ

0

  • ಶಿಕ್ಷಕ ವ್ಯಕ್ತಿ ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವ ಹುದ್ದೆ- ಸತೀಶ್ ಕುಮಾರ್ ಕೆಡೆಂಜಿ
  • ಅತ್ಯಂತ ಬದ್ಧತೆಯಿಂದ ಚಟುವಟಿಕೆಗಳಿಂದ ಕುದ್ಮಾರು ಶಾಲೆ ಪ್ರಸಿದ್ಧಗೊಂಡಿದೆ- ಲೋಹಿತಾಕ್ಷ ಕೆಡೆಂಜಿಕಟ್ಟ
  • ಒಳ್ಳೆಯ ಕೆಲಸ ಮಾಡಿದಾಗ ಕೆಟ್ಟ ಕೆಲಸಗಳು ಮರೆಯಾಗುತ್ತದೆ- ಪ್ರವೀಣ್ ಕುಮಾರ್ ಕೆಡೆಂಜಿಗುತ್ತು
  • ಶಿಕ್ಷಕರು ಸಮಾಜದ ಕಣ್ಣುಗಳು – ಜೂಲಿಯಾನ ಡಿ’ಸೋಜಾ
  • ಕುದ್ಮಾರಿನ ಜನತೆಯ ಪ್ರೀತಿ, ವಿಶ್ವಾಸ ಶಾಶ್ವತವಾಗಿ ಉಳಿಯಲಿದೆ- ಸೀತಾರಾಮ ಕೆ.ಜಿ

ಕಾಣಿಯೂರು: ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವ ಹಾಗೂ ಪ್ರಾಮಾಣಿಕವಾಗಿರುವ ಹುದ್ದೆ ಎಂದರೆ ಅದು ಶಿಕ್ಷಕ ವೃತ್ತಿ. ಯಾವುದೇ ಅಪಪ್ರಚಾರ, ಅವ್ಯವಹಾರಗಳಿಗೆ ಆಸ್ಪದ ಕೊಡದ ಇಲಾಖೆಯಿದ್ದರೆ ಅದು ಶಿಕ್ಷಣ ಇಲಾಖೆ. ಶಿಕ್ಷಕ ಸೀತಾರಾಮರವರು ವೃತ್ತಿಯಲ್ಲಿ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಕುದ್ಮಾರು ಸ.ಉ.ಹಿ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಹೇಳಿದರು.

ಅವರು ಕುದ್ಮಾರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸೀತಾರಾಮ ಕೆ.ಜಿ ಇವರಿಗೆ ಅಭಿನಂದನೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕುದ್ಮಾರು ಶಾಲೆಯಲ್ಲಿ ಅನೇಕ ವರ್ಷಗಳಿಂದ ಬೇರೆ ಬೇರೆ ಶಿಕ್ಷಕರು ಸೇವೆ ಸಲ್ಲಿಸಿ ಪ್ರತಿಯೊಬ್ಬರು ಕೂಡ ಅವರದ್ದೇ ಆದ ಸೇವೆಯನ್ನು ಸಲ್ಲಿಸಿ ಗುರುತಿಸುವ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ ಎಂದವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಹಿತಾಕ್ಷ ಕೆಡೆಂಜಿಕಟ್ಟ ಮಾತನಾಡಿ, ಖಾಸಗಿ ಶಾಲೆಗಳಿಗೆ ಏನೂ ಕಡಿಮೆ ಇಲ್ಲ ಎಂಬಂತೆ ಅತ್ಯಂತ ಬದ್ಧತೆಯಿಂದ ಚಟುವಟಿಕೆಗಳಿಂದ ಕುದ್ಮಾರು ಶಾಲೆಯು ಪ್ರಸಿದ್ಧಗೊಂಡಿದೆ ಎಂದರು. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮಾತನಾಡಿ, ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಬಗ್ಗೆ ಚಿಂತನೆ ಮಾಡುವ ಶಿಕ್ಷಕರ ಪರಿಶ್ರಮದಿಂದ ಕುದ್ಮಾರು ಶಾಲೆ ಉನ್ನತ್ತ ಮಟ್ಟಕ್ಕೇರಿದೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಮಾತ್ರ ಕೆಟ್ಟ ಕೆಲಸಗಳು ಮರೆಯಾಗುತ್ತದೆ. ಆದುದರಿಂದ ಒಳ್ಳೆಯ ಕೆಲಸಗಳನ್ನು ಮಾಡುವ ಸೌಭಾಗ್ಯ ದೇವರು ಕರುಣಿಸಲಿ ಎಂದರು. ನಿವೃತ್ತ ಮುಖ್ಯಗುರುಗಳಾದ ಜೂಲಿಯಾನ ಡಿ’ಸೋಜಾ ಮಾತನಾಡಿ, ಸೀತಾರಾಮ ಕೆ.ಜಿ ಅವರ ಕಾರ್ಯವೈಖರಿಗಳ ಬಗ್ಗೆ ತಿಳಿಸುತ್ತಾ ಶಿಕ್ಷಕರು ಸಮಾಜದ ಕಣ್ಣುಗಳು. ತನ್ಮೂಲಕ ವಿವಿಧ ಕ್ಷೇತ್ರಗಳಿಗೂ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವವರು ಇಂತಹ ಶಿಕ್ಷಕ ವೃಂದವನ್ನು ಹೊಂದಿರುವುದು ಶಾಲೆಯ ಭಾಗ್ಯವೇ ಸರಿ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿದ ಸೀತಾರಾಮರವರು ಮಾತನಾಡಿ, ಕುದ್ಮಾರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ದೊರೆತ ಪ್ರೀತಿ, ವಿಶ್ವಾಸ ಹಾಗೂ ಸ್ಪಂದನೆಯನ್ನು ಎಂದಿಗೂ ಮರೆಯಲಾಗದು. ಕುದ್ಮಾರಿನ ಜನತೆಯ ಹೃದಯವಂತಿಕೆ ಶಾಶ್ವತವಾಗಿ ಉಳಿಯಲಿದೆ. ಸಹಕರಿಸಿರುವ ಪ್ರತಿಯೊಬ್ಬರಿಗೂ ಧನ್ಯವಾದವನ್ನು ಸಲ್ಲಿಸುವುದರ ಜೊತೆಗೆ ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಶ್ರಮಿಸುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದು ಹೇಳಿದರು. ಶಾಲಾ ಮುಖ್ಯಗುರು ಕುಶಾಲಪ್ಪ ಗೌಡ ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಪರಂಪರಾಗತವಾಗಿ ಈ ಶಾಲೆಯ ಪೋಷಕರು ಊರವರು, ಹಿರಿಯರು ಒಗ್ಗಟ್ಟಿನಿಂದ ಪ್ರತಿಯೊಂದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಈ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ ಗೌಡ, ಉಪಾಧ್ಯಕ್ಷರಾದ ನವ್ಯ ಅನ್ಯಾಡಿ, ಕುದ್ಮಾರು ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕರುಣಾಕರ್ ಪೂಜಾರಿ ಪಟ್ಟೆ, ಶಾಂತಿಮೊಗರು ಶ್ರಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಶೂರಪ್ಪ ಪಟ್ಟೆತ್ತಾನ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸೀತಾರಾಮ, ಮಾಧವ, ಧನಲಕ್ಷ್ಮೀ, ಕುಸುಮಾ, ರಾಧಾ, ಸತ್ಯಲತಾ, ಕವಿತಾರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಸುರೇಶ್ ಕುಮಾರ್ ವಂದಿಸಿದರು. ಶಿಕ್ಷಕರಾದ ಸುಜಾತ ಹಾಗೂ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ವೀರ ಡಿ’ಸೋಜ , ಶ್ರೀಲತಾ, ವೀಣಾ, ಸಂತೋಷ್ ಎನ್ ಟಿ, ಧನಲಕ್ಷ್ಮಿ ನಾಯಕ್ ಸಹಕರಿಸಿದರು.

ಸನ್ಮಾನ: ಕುದ್ಮಾರು ಶಾಲೆಯಲ್ಲಿ ಶಿಕ್ಷಕರಾಗಿ, ಪ್ರಭಾರ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ, ಇದೀಗ ಪದೋನ್ನತಿ ಹೊಂದಿ ಮುಖ್ಯಗುರುಗಳಾಗಿ ಪಳ್ಳತ್ತಾರು ಸ.ಹಿ.ಪ್ರಾ.ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಸೀತಾರಾಮ ಕೆ ಜಿ ಇವರನ್ನು ಸ್ಮರಣಿಕೆ, ಫಲಪುಷ್ಪ, ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಸೀತಾರಾಮರವರು ಗೋದ್ರೇಜ್ ಕಪಾಟನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಕುದ್ಮಾರು ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಸೀತಾರಾಮ ಗೌಡ ಕೂವೆತ್ತೋಡಿ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಅಲ್ಲದೆ ಎಸ್.ಡಿ.ಎಂ.ಸಿ ಮಾಜಿ ಸದಸ್ಯರುಗಳನ್ನು ಸ್ಮರಣಿಕೆ ನೀಡುವುದರ ಮೂಲಕ ಗುರುತಿಸಲಾಯಿತು.

 

LEAVE A REPLY

Please enter your comment!
Please enter your name here