ತುಳುನಾಡಿನ ವಿಶಿಷ್ಟ ಆಚರಣೆಯ ಆಟಿಕಳಂಜ

0

ಸತೀಶ್ ಇರ್ದೆ, ಕನ್ನಡ ಉಪನ್ಯಾಸಕರು ಅಂಬಿಕಾ ವಿದ್ಯಾಲಯ ಪುತ್ತೂರು

ಆಟಿ ತಿಂಗಳು ಮಳೆ ಜೋರಾಗಿ ಬರುವ ಕಾಲ. ತುಳುನಾಡಿನಲ್ಲಿ ಈ ತಿಂಗಳಲ್ಲಿ ವಿಶಿಷ್ಟವಾದ ಆಚರಣೆ ಸಂಪ್ರದಾಯಗಳು ಹಿಂದಿನಿಂದಲೇ ಆಚರಿಸಿಕೊಂಡು ಬಂದಿದೆ. ಸುರಿಯುವ ಮಳೆಯ ಆಟಿ ತಿಂಗಳೆಂದರೆ ತುಳುನಾಡ ಜನತೆಗೆ ಮನೆಯಿಂದ ಹೊರಬಾರಲಾರದಂತಹ ಕಾಲ ಎಂಬುವುದು ವಾಡಿಕೆ. ಈ ಸಮಯದಲ್ಲಿ ಆಟಿಕಳಂಜ ಕುಣಿತ ಒಂದು ವಿಶೇಷ ಕುಣಿತ.

ಆಟಿ ತಿಂಗಳೆಂದರೆ ಆಷಾಢ ಮಾಸ ಈ ತಿಂಗಳು ತುತ್ತು ಅನ್ನಕ್ಕೂ ತಾತ್ವಾರದ ಸಮಯ ಅಷ್ಟು ಕಷ್ಟದ ಕಾಲ ಎಂಬರ್ಥ. ಇದರ ಜೊತೆಗೆ ರೋಗರುಜಿನಗಳ ಭಯ ಬೇರೆ, ಹೀಗಾಗಿ ಜನ ಹೆದರುವ ಕಾಲ ಎನ್ನುತ್ತಾರೆ ಹಿರಿಯರು. ಅದಕ್ಕಾಗಿ ಈ ಮಾಸದಲ್ಲಿ ಬೇರೆ ಬೇರೆ ಬಗೆಯ ಆಚರಣೆಗಳು ಇರುತ್ತವೆ.ಒಂದು ಕಡೆ ಧೋ… ಧೋ.. ಎಂದು ಸುರಿಯುವ ಮಳೆ, ಇನ್ನೊಂದು ಕಡೆ ಬಿಸಿಲು, ಇಂಥ ಸಮಯದಲ್ಲಿ ಸಹಜವಾಗಿ ರೋಗಗಳು ಬಾಧಿಸುತ್ತವೆ. ಆದ್ದರಿಂದ ಊರಿಗೆ ಬಂದಿರುವ ಮಾರಿಯನ್ನು ಓಡಿಸಲು ಹಾಗೂ ರೋಗರುಜಿನಗಳನ್ನು ಹೋಗಲಾಡಿಸಲು ಆಟಿ ಕಳಂಜ ಮನೆಮನೆಗೆ ಭೇಟಿ ನೀಡುತ್ತದೆ.

ಕಳಂಜ ಅಂದರೆ ಕಳೆದ ವ್ಯಕ್ತಿ ಎಂದರ್ಥ. ಮನೆಮನೆಗೆ ಬಂದು ರೋಗರುಜಿನಗಳನ್ನು ಓಡಿಸುವುದು ಇವನ ಕೆಲಸ. ಮನೆಯಂಗಳದಲ್ಲಿ ಕುಣಿದು ಮನೆಯೊಡತಿ ನೀಡುವ ಎಣ್ಣೆ, ಉಪ್ಪು, ಹುಣಸೆಹುಳಿ, ಮೆಣಸು, ತೆoಗಿನಕಾಯಿ ಹೀಗೆ 9 ಬಗೆಯ ವಸ್ತುಗಳನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳಂಜ ಕಳೆಯುತ್ತಾನೆ ಎಂಬ ಬಲವಾದ ನಂಬಿಕೆ ತುಳುನಾಡಿನ ಜನರಲ್ಲಿ ಇದೆ.

ಈ ಸಮಯದಲ್ಲಿ ಧವಸ ಧಾನ್ಯ ಗಳು ಮುಗಿಯುವ ಕಾರಣ ಸಸ್ಯಮೂಲವೇ ಆಹಾರವಾಗುತ್ತದೆ.ಇದೇ ಸಂದರ್ಭದಲ್ಲಿ ಕಾಲಿಡುವ ಶೀತ, ಕೆಮ್ಮು ಹಾಗೂ ಜ್ವರಬಾಧೆ, ಸೊಳ್ಳೆ ಕಾಟ ಜನತೆಯನ್ನು ಕಣ್ಗೆಡಿಸುತ್ತದೆ. ಇದನ್ನೆಲ್ಲಾ ನಿವಾರಿಸಲು ಆಟಿ ಕಳಂಜ ಬರುತ್ತಾನೆ.

ಆಟಿ ಕಲಂಜಕ್ಕೆ ಕಿನ್ನಿ ಎಂಬ ವೇಷವೂ ಸಾಥ್ ನೀಡುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ವೇಷ ಹಾಕುತ್ತಾರೆ. ಇವರು ತೆಂಗಿನ ಸಿರಿ, ಸುಣ್ಣ ಬಣ್ಣಗಳಿಂದ ಆಲಂಕೃತಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಂಬ ವಾದ್ಯದ ಹಿಮ್ಮೆಳದೊಂದಿಗೆ ಆಟಿಕಳಂಜ ಮನೆಯ ಅಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ. ಹಿಂಮೇಳದವರು ಪಾಡ್ಡನ ಹೇಳುತ್ತಾ ಕಳಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ಹೋಗಿ ಫಲವಸ್ತುವನ್ನು ಕೊಂಡೊಯ್ಯು ವ ಪದ್ಧತಿ ಇದೆ. ಇದರಿಂದ ಕೃಷಿಗೆ ತಟ್ಟಿದ ರೋಗಗಳು ನಿವಾರಣೆ ಆಗುತ್ತದೆ ಅಲ್ಲದೆ ಕಳಂಜ ನರ್ತನ ಮಾಡಿ ಮರಳಿದ ಬಳಿಕ ಮನೆಗೆ ತಟ್ಟಿದ ರೋಗಗಳು ಹೋಗುತ್ತವೆ ಎಂಬ ಬಲವಾದ ನಂಬಿಕೆ ನಮ್ಮ ತುಳುನಾಡಿನ ಜನರಲ್ಲಿದೆ.

ಇಂತಹ ಅದ್ಭುತವಾದ ಸಂಪ್ರದಾಯ ತಲೆತಲಾಂತರದಿಂದ ಬೆಳೆದು ಬಂದಿದ್ದು ಇಂದಿಗೂ ಆಚರಿಸಿಕೊಂಡು ಬರುತ್ತಿರುವುದು ಸಂತಸದ ವಿಚಾರವಾಗಿದೆ.

ಸತೀಶ್ ಇರ್ದೆ, ಕನ್ನಡ ಉಪನ್ಯಾಸಕರು ಅಂಬಿಕಾ ವಿದ್ಯಾಲಯ ಪುತ್ತೂರು

LEAVE A REPLY

Please enter your comment!
Please enter your name here