ಇಂದು(ಜು.31) ವಿವೇಕಾನಂದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಶ್ರೀಧರ ಎಚ್.ಜಿ ಸೇವಾ ನಿವೃತ್ತಿ

0

ಪುತ್ತೂರು: ಜುಲೈ31; ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ಅವರು ಇಂದು ವೃತ್ತಿಯಿಂದ ನಿವೃತ್ತಿಗೊಳ್ಳಲಿದ್ದಾರೆ. 1987ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ವಿಭಾಗ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಕಾಲೇಜಿನ ಐಕ್ಯೂಎಸಿ ಸಂಯೋಜಕರಾಗಿ ಕೆಲಸವನ್ನು ನಿರ್ವಹಿಸಿದ ಇವರು ನ್ಯಾಕ್ ಸಮಿತಿಯ ಮೂರನೆಯ ಭೇಟಿಯಲ್ಲಿ ಕಾಲೇಜಿಗೆ ‘ಎ’ ಗ್ರೇಡ್ ಬರುವಲ್ಲಿ ವಿಶೇಷವಾಗಿ ಶ್ರಮಿಸಿದ್ದಾರೆ. ಜೊತೆಗೆ ಕಾಲೇಜು ಸ್ವಾಯತ್ತ ಸ್ಥಾನಮಾನವನ್ನು ಪಡೆದ ನಂತರ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಡಾ. ಶ್ರೀಧರ್ ಎಚ್.ಜಿ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಂಡಿಗೆ ಹಳ್ಳ ಎಂಬ ಊರಿನವರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪ್ರಥಮ ರ್ಯಾಂ ಕ್ ಮತ್ತು ಚಿನ್ನದ ಪದಕದೊಂದಿಗೆ ಉತ್ತೀರ್ಣರಾಗಿದ್ದಾರೆ.
ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಇವರ ಮಾರ್ಗದರ್ಶನದಲ್ಲಿ ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ’ (ಕ್ರಿ.ಶ.450ರಿಂದ 1350) ಎಂಬ ವಿಷಯವನ್ನು ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಇತ್ಯಾದಿ ಕನ್ನಡಪರ ಸಂಘಟನೆಗಳಲ್ಲಿ ಕಾರ್ಯದರ್ಶಿಗಳಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಅನುಭವಿಗಳು. 2022ರ ಸೆಪ್ಟಂಬರ್‌ನಲ್ಲಿ ನಡೆದ ಪುತ್ತೂರು ತಾಲೂಕು 21ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಅವಕಾಶ ದೊರೆತದ್ದು ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸೇವೆಗೆ ಸಂದ ಗೌರವ.

ಇವರ ಪ್ರಕಟಿತ ಕೃತಿಗಳು :
ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ, ಪ್ರೊ. ಎಂ. ಮರಿಯಪ್ಪ ಭಟ್ಟ – ಜೀವನ ಸಾಧನೆ, ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಯುದ್ಧವರ್ಣನೆಗಳು, ವಿದ್ವತ್ತೆಗೆ ರೂಪಕ ಕಡವ ಶಂಭುಶರ್ಮ, ಕರಾವಳಿಯ ರಾಜಕೀಯ ಮುತ್ಸದ್ಧಿ ಉರಿಮಜಲು ಕೆ. ರಾಮಭಟ್, ಗೀತಾಸಾರದ ಕವಿ ಬಡೆಕ್ಕಿಲ ವೆಂಕಟರಮಣ ಭಟ್ಟ, ಶಾಸ್ತ್ರ ಸಂಕಲ್ಪ (ಸಂಶೋಧನಾ ಲೇಖನಗಳ ಸಂಕಲನ), ನವೋದಯ ಗಣ್ಯ ಸಾಹಿತಿ ಮಚ್ಚಿಮಲೆ ಶಂಕರನಾರಾಯಣ ರಾಯರು, ರಸದಾಳಿ (ಸಂಶೋಧನಾ ಲೇಖನಗಳ ಸಂಕಲನ), ನಾಥಪಂಥ (ದೇಸಿ ದರ್ಶನ ಮಾಲೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು), ‘ಶಿಖಂಡಿ’ (ಬಿಡುಗಡೆಯ ಕಥನ) ಇದು ನಾಟಕ ಕೃತಿ. ‘ಪ್ರಸ್ಥಾನ: ಬದುಕು ಮುಳುಗಿದ ಕಥನ 2021 (ರಾಜ್ಯಮಟ್ಟದ ಚಡಗ ಕಾದಂಬರಿ ಪ್ರಶಸ್ತಿ ಪುರಸ್ಕೃತ ಕೃತಿ) ಚಪಡ :ಇದು ಅಕ್ಷರದ ಪಯಣ 2021 (ರಾಜ್ಯಮಟ್ಟದ ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ) ಇವು ಇವರ ರಚನೆಯ ಕಾದಂಬರಿಗಳು.

ಡಾ. ಶ್ರೀಧರರು ರಚಿಸಿದ ಐವತ್ತಕ್ಕಿಂತಲೂ ಹೆಚ್ಚು ಸಂಶೋಧನಾ ಲೇಖನಗಳು ಪ್ರಕಟವಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ಪ್ರತಿಷ್ಟಿತ ಗೋಷ್ಟಿಗಳಲ್ಲಿ ಭಾಗವಹಿಸಿದ ಇವರು ಸುಮಾರು ಎಂಬತ್ತಕ್ಕಿಂತಲೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದು, ಮಾತ್ರವಲ್ಲದೆ ಸುಮಾರು ಹದಿನಾರಕ್ಕಿಂತಲೂ ಹೆಚ್ಚು ಸಂಪಾದಿತ ಕೃತಿಗಳು ಇವರ ಲೇಖನಿಯಿಂದ ಮೂಡಿಬಂದಿರುವುದು ಇವರ ಹೆಗ್ಗಳಿಕೆ. ಸಹಸಂಪಾದಕರಾಗಿಯೂ ಕೆಲಸ ಮಾಡಿದ ಇವರು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳ ಪಠ್ಯಪುಸ್ತಕಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದು ಶ್ಲಾಘನೀಯ.

‘ಸಹೃದಯ ಪ್ರಾಧ್ಯಾಪಕ ಪ್ರಶಸ್ತಿ’, ‘ಸಾಧಕ ಗೌರವ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’, ‘ಎಕ್ಸೆಲ್ ಅಕ್ಷರ ಗೌರವ ಪುರಸ್ಕಾರ’, ‘ಚಡಗ ರಾಜ್ಯ ಮಟ್ಟದ ಪ್ರಶಸ್ತಿ’ ‘ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ’, ಇವೆಲ್ಲಾ ಪ್ರಶಸ್ತಿಗಳು ಸಾಹಿತ್ಯದ ವಿವಿಧ ಮಜಲುಗಳಲ್ಲಿ ಡಾ.ಶ್ರೀಧರ್ ಮಾಡಿದ ಶ್ರದ್ಧೆ ಮತ್ತು ಪ್ರಾಮಾಣಿಕ ಸೇವೆಗೆ ಪ್ರತಿಯಾಗಿ ಜನತೆ ನೀಡಿದ ಪುರಸ್ಕಾರ.

ಕಾಲೇಜಿನಲ್ಲಿ ಸುಮಾರು ಮೂವತ್ತಾರು ವರ್ಷಗಳ ಕಾಲ‌ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿಗೊಳ್ಳುತ್ತಿರುವ ಡಾ. ಶ್ರೀಧರ ಎಚ್.ಜಿ ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here