ಸರಕಾರಿ ಶಾಲಾ ಅಂಗಳದಲ್ಲೇ ನಡೆಯಿತು ತುಳುನಾಡ ಕೆಡ್ಡಸ ಆಚರಣೆ – ಪಾಪೆಮಜಲು ಪ್ರೌಢಶಾಲೆಯಲ್ಲೊಂದು ವಿಭಿನ್ನ ಪ್ರಯೋಗ

0

ಪುತ್ತೂರು: ತುಳುನಾಡಿನ ಹಲವು ಹಬ್ಬಗಳಲ್ಲಿ ಒಂದಾಗಿರುವ ಭೂಮಿ ದೇವಿಯ ಆರಾಧನೆಯ ಕೆಡ್ಡಸ ಪರ್ಬೊವನ್ನು ಅರಿಯಡ್ಕ ಗ್ರಾಮದ ಪಾಪೆಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ತುಳುವಿಭಾಗದ ವತಿಯಿಂದ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಳಿದು ಹೋಗುತ್ತಿರುವ ತುಳು ಸಂಸ್ಕೃತಿಯ ವಿಶೇಷತೆಯನ್ನು ಸ್ವತಃ ಆಚರಣೆ ಮಾಡುವ ಮೂಲಕ ಮಕ್ಕಳಿಗೆ ತಿಳಿ ಹೇಳುವ ಪ್ರಯತ್ನ ನಡೆದಿರುವುದು ಶ್ಲಾಘನೀಯ. ಸೆಗಣಿ ಸಾರಿಸಿದ ಶಾಲಾ ಅಂಗಳದಲ್ಲಿ ತುಳಸಿಕಟ್ಟೆ ನಿರ್ಮಿಸಿ ಅದರ ಪಕ್ಕ ಕೆಡ್ಡಸ ಹಬ್ಬಕ್ಕೆ ಬೇಕಾದ ಎಲ್ಲಾ ಬಗೆಯ ವಸ್ತುಗಳನ್ನಿಟ್ಟು ಕ್ರಮಬದ್ಧವಾಗಿ ಆಚರಣೆ ಮಾಡುವ ಮಾದರಿ ಕಾರ್ಯಕ್ರಮವಾಗಿ ಮೂಡಿಬಂತು.

ಕೆಡ್ಡಸ ಆಚರಣೆ
ಕೆಡ್ಡಸವನ್ನು ಮೂರು ದಿನಗಳ ಕಾಲ ತುಳುನಾಡಲ್ಲಿ ಆಚರಣೆ ಮಾಡಲಾಗುತ್ತದೆ. ಈ ಮೂರು ದಿನಗಳ ಆಚರಣೆಯ ಬಗ್ಗೆ ಶಾಲಾ ವಿದ್ಯಾರ್ಥಿಗಳಾದ 8 ನೇ ತರಗತಿಯ ರಮ್ಯಶ್ರೀ, ಭವ್ಯಶ್ರೀ ಮತ್ತು 9 ನೇ ತರಗತಿಯ ಮಿಥನ್ ರೈ ವಿವರಿಸಿದರು. ಅದರಂತೆ ಮೊದಲಿಗೆ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ತಿಲಕ್ ರೈ ಕುತ್ಯಾಡಿಯವರು ಭೂಮಿಗೆ ಬೂದಿಯಲ್ಲಿ ಗೆರೆಹಾಕುವ ಕ್ರಮ ಮಾಡಿದರು. ಶಿಕ್ಷಕಿ ಹರಿಣಾಕ್ಷಿ ದೀಪ ಬೆಳಗಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ರವರು ತಡ್ಪೆ ಇಟ್ಟು ಅದರ ಮೇಲೆ ಬಾಳೆ ಎಲೆ ಹಾಕಿ ನನ್ಯರಿ ಬಡಿಸುವ ಕ್ರಮ ಮಾಡುವ ಮೂಲಕ ಭೂಮಿಗೆ ದೇವಿಗೆ ವಂದಿಸಿದರು. ಭೂಮಿಗೆ ಮಾವಿನ ಎಲೆ, ಸರೋಳಿ ಎಲೆ ಇಟ್ಟು ಎಣ್ಣೆ ಬಿಡುವ ಕ್ರಮವನ್ನು ತುಳು ಶಿಕ್ಷಕಿ ಕುಸುಮ ನೆರವೇರಿಸಿದರು. ಶಿಕ್ಷಕಿ ಶಾಲೆಟ್ ಜೇನ್ ರೆಬೆಲ್ಲೋರವರು ಭೂಮಿ ತಾಯಿಗೆ ಸೀರೆ ಅರ್ಪಣೆ ಮಾಡಿದರು. ಶಾಲಾ ಮುಖ್ಯಗುರು ಮೋನಪ್ಪ ಪೂಜಾರಿಯವರು ಕನ್ನಡಿ ಇತರ ವಸ್ತುಗಳನ್ನು ಇಟ್ಟು ನಮಸ್ಕರಿಸಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಮುಖ್ಯಗುರು ಗಿರಿಶಂಕರ ಸುಲಾಯರವರು ತೆಂಗಿನ ಹಾಲು ಮತ್ತು ಅರಶಿನ ನೀರನ್ನು ಭೂಮಿಗೆ ಅರ್ಪಣೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಒಳಿತನ್ನು ಹಾರೈಸಿದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಅಮ್ಮಣ್ಣ ರೈಯವರು ಅಡಿಕೆ ಗರಿಯ ಸಿಂಬೆ (ಚೆರಿಯೆ) ಇಟ್ಟು ಅದರ ಮೇಲೆ ಮಣ್ಣಿನ ಪಾತ್ರೆಯಲ್ಲಿ ನೀರು ಇಟ್ಟು ಪ್ರಾರ್ಥಿಸಿದರು. ಮೂರು ದಿನಗಳ ಕೆಡ್ಡಸದ ಆಚರಣೆಯನ್ನು ತುಳು ಸಂಸ್ಕೃತಿಯ ಪ್ರಕಾರವೇ ಆಚರಿಸಲಾಯಿತು.

ಸಭಾ ಕಾರ್ಯಕ್ರಮ
ದೇಸಿ ಸಂಸ್ಕೃತಿಯ ಒಂದು ಅರ್ಥಪೂರ್ಣ ಕಾರ್ಯಕ್ರಮ: ಲೋಕೇಶ್ ಸಿ
ಅಂಗಳದಲ್ಲಿ ಕೆಡ್ಡಸ ಆಚರಣೆಯ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ರವರು ಅಡಿಕೆ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಬಹಳ ಖುಷಿ ತಂದಿದೆ. ನಮ್ಮ ದೇಸಿ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಪಾಪೆಮಜಲು ಶಾಲೆಯವರು ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಚರಿಸುವಂತೆ ಮಾಡಬೇಕಾದ ಅಗತ್ಯತೆ ಇದೆ ಎಂದ ಅವರು ಇಂದಿನ ಮಕ್ಕಳು ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಬೇಕು ಎಂದು ಹೇಳಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿವೃತ್ತ ಮುಖ್ಯಗುರು ಗಿರಿಶಂಕರ ಸುಲಾಯರವರು ಮಾತನಾಡಿ, ಭೂಮಿ ತಾಯಿ ಎಲ್ಲರನ್ನು ಪೊರೆಯುವ ತಾಯಿಯಾದರೆ ನಮ್ಮನ್ನು ಹೆತ್ತು ಹೊತ್ತು ಸಾಕಿದ ತಾಯಿ ಕೂಡ ನಮ್ಮನ್ನು ಪೊರೆಯುವ ತಾಯಿಯಾಗಿದ್ದಾಳೆ. ಭೂಮಿ ಮತ್ತು ತಾಯಿಗೆ ಯಾವತ್ತೂ ತಲೆಬಾಗಿ ನಮಸ್ಕರಿಸುವ ಪರಿಪಾಠವನ್ನು ನಾವು ಬೆಳೆಸಿಕೊಳ್ಳಬೇಕು. ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಅದೆಷ್ಟೋ ಕಪಿಚೇಷ್ಠೆ ಇದ್ದರೂ ಹತ್ತನೆ ತರಗತಿಗೆ ಮುಟ್ಟುವಾಗ ಅದನ್ನೆಲ್ಲ ಬಿಟ್ಟು ಉತ್ತಮ ವ್ಯಕ್ತಿಗಳಾಗಿ ಹೆಜ್ಜೆ ಇಡಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಸಭಾಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ತಿಲಕ್ ರೈ ಕುತ್ಯಾಡಿಯವರು ಮಾತನಾಡಿ, ಶಾಲಾ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಎಲ್ಲಾ ಶಿಕ್ಷಕರು ಉತ್ತಮ ಸಹಕಾರ ನೀಡಿದ್ದಾರೆ. ತುಳು ಸಂಸ್ಕೃತಿ, ಆಚಾರ ವಿಚಾರಗಳನ್ನು ಮಕ್ಕಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಈ ಕೆಡ್ಡಸ ಹಬ್ಬವನ್ನು ಹಮ್ಮಿಕೊಂಡಿದ್ದೇವೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಅಮ್ಮಣ್ಣ ರೈ ಪಾಪೆಮಜಲು, ಪತ್ರಕರ್ತ ಸಿಶೇ ಕಜೆಮಾರ್, ಶಿಕ್ಷಣ ಇಲಾಖಾ ಸಂಯೋಜಕ ಹರಿಪ್ರಸಾದ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಮೋನಪ್ಪ ಪೂಜಾರಿ ಸ್ವಾಗತಿಸಿದರು. ತುಳು ಶಿಕ್ಷಕಿ ಕುಸುಮ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣ ರೈ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ಶಿಕ್ಷಕಿ ಪವಿತ್ರ ಉಡುಪರವರ ನಿರ್ದೇಶನದಲ್ಲಿ ಸಭಾ ಕಾರ್ಯಕ್ರಮದ ಮೊದಲು ಮತ್ತು ಬಳಿಕ ವಿದ್ಯಾರ್ಥಿಗಳಿಂದ ತುಳು ಗೀತೆಗೆ ನೃತ್ಯ ಕಾರ್ಯಕ್ರಮ ನಡೆಯಿತು. ಶಿಕ್ಷಕಿಯರಾದ ಶಾಲೆಟ್ ಜೇನ್ ರೆಬೆಲ್ಲೋ, ಹರಿಣಾಕ್ಷಿ, ಚಂದ್ರಲೇಖಾ, ಹರಿಪ್ರಸಾದ್ ಸಹಕರಿಸಿದ್ದರು.

LEAVE A REPLY

Please enter your comment!
Please enter your name here