ಎಪಿಎಂಸಿ ರೈಲ್ವೇ ಅಂಡರ್ ಪಾಸ್‌ಗೆ ಸಂಸದರ, ಶಾಸಕರ ಸೂಚನೆಯಂತೆ ಅಂತಿಮ ನಕ್ಷೆಗೆ ಸಹಿ – ಸಾಮಾನ್ಯ ಸಭೆಯಲ್ಲಿ ನಿರ್ಣಯ

0

ಪುತ್ತೂರು: ಎಪಿಎಂಸಿ ರೈಲ್ವೇ ಅಂಡರ್ ಪಾಸ್‌ಗೆ ಸಂಬಂಧಿಸಿ ಎಪಿಎಂಸಿ ರಸ್ತೆಯ ಈಗಿರುವ ರೈಲ್ವೇಗೇಟ್ ಬಳಿ ಹಳಿಗಳ ಬದಲಾವಣೆಯ ತಾಂತ್ರಿಕ ವ್ಯವಸ್ಥೆಗಳ ಸಮಸ್ಯೆ ಮತ್ತು ಆ ಭಾಗದ ಮಣ್ಣು ಸಡಿಲ ಇರುವ ಹಿನ್ನೆಲೆಯಲ್ಲಿ ರೈಲ್ವೇ ಅಂಡರ್ ಪಾಸ್ ಸ್ಥಳ ಬದಲಾವಣೆ ಮಾಡಲಾಗಿದ್ದು, ಹೊಸ ಸ್ಥಳದಲ್ಲಿ ರೈಲ್ವೇ ಇಂಜಿನಿಯರ್ ಮಾಡಿರುವ ನಕ್ಷೆ ಅಪಘಾತವಲಯವಾಗಿದ್ದರಿಂದ ಬದಲಾಗಿ ಸಂಸದರು ಮತ್ತು ಶಾಸಕರ ಸೂಚನೆಯಂತೆ ಲೋಕೋಪಯೋಗಿ ಇಲಾಖೆ, ನಗರಸಭೆ ಮತ್ತು ರೈಲ್ವೇ ಇಲಾಖೆಯ ಇಂಜಿನಿಯರ್‌ಗಳು ಜಂಟಿಯಾಗಿ ಮಾಡಿರುವ ಮೂರು ನಕ್ಷೆಗಳ ಪೈಕಿ ಚತುಷ್ಪತ ರಸ್ತೆಯನ್ನು ಹೊಂದಿರುವ 3 ಸಂಖ್ಯೆ ನಕ್ಷೆಯನ್ನು ಅಂತಿಮಗೊಳಿಸಿ ಮೈಸೂರು ರೈಲ್ವೇ ವಿಭಾಗೀಯ ಹಿರಿಯ ಇಂಜಿನಿಯರ್‌ಗೆ ಕೊಡುವುದಾಗಿ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.

 


ಎಪಿಎಂಸಿ ಸಾಮಾನ್ಯ ಸಭೆಯು ಮಾ.೫ರಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರ ಅಧ್ಯಕ್ಷತೆಯಲ್ಲಿ ಮಾ.೫ರಂದು ನಡೆಯಿತು. ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ಮಾತನಾಡಿ ಮೂರು ನಕ್ಷೆಯಲ್ಲಿ ಸಂಖ್ಯೆ ೩ರ ನಕ್ಷೆ ಚತುಷ್ಪತ ರಸ್ತೆಯಾಗಿದ್ದು, ಇಲ್ಲಿ ಒತ್ತುವರಿ ಕೂಡಾ ಕಡಿಮೆ ಇದೆ. ಹಾಗಾಗಿ ಅದನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ರೈಲ್ವೇ ಇಂಜಿನಿಯರ್ ಕೊಟ್ಟ ನಕ್ಷೆ ಅಪಘಾತಕ್ಕೆ ಎಡೆ ಮಾಡಿಕೊಟ್ಟಂತೆ ಇತ್ತು. ಅದನ್ನು ಬದಲಾಯಿಸಿ ವಾಹನ ಸವಾರರಿಗೆ ತೊಂದರೆ ಆಗದಂತೆ ಹೊಸ ನಕ್ಷೆಯನ್ನು ಅಂತಿಮಗೊಳಿಸಲಾಗಿದೆ. ಇಲ್ಲಿ ಹೆಬ್ಬಾರಬೈಲು ಭಾಗದಲ್ಲಿ ಖಾಸಗಿ ಜಮೀನಿನ ಸ್ವಲ್ಪ ಭಾಗ ಒತ್ತುವರಿಯಾಗಲಿದೆ. ಉಳಿದಂತೆ ಎಲ್ಲವು ರೈಲ್ವೇ ಸುಪರ್ದಿಯಲ್ಲಿನ ಸ್ಥಳದಲ್ಲೇ ಕಾಮಗಾರಿ ನಡೆಯಲಿದೆ. ಒಟ್ಟು ನಕ್ಷೆಯನ್ನು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಕಳುಹಿಸಿಕೊಡುವಂತೆ ರೈಲ್ವೇ ಮೈಸೂರು ವಿಭಾಗಿಯ ಇಂಜಿನಿಯರ್ ತಿಳಿಸಿದಂತೆ ನಾವು ಸಂಸದರು ಮತ್ತು ಶಾಸಕರ ಒಪ್ಪಿಗೆ ಇದೆ ಎಂದು ನಿರ್ಣಯ ಮಾಡಬೇಕಾಗಿದೆ. ಮುಂದಿನ ತಿಂಗಳು ರೈಲ್ವೇ ಕಾಮಗಾರಿ ಆರಂಭಗೊಳ್ಳಲಿದೆ. ಈ ನಕ್ಷೆಯ ಪ್ರಕಾರ ಕೇವಲ ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಸಲಿದ್ದಾರೆ. ಮಳೆಗಾಲ ಆರಂಭ ಆಗುವ ಮುಂದೆ ಅವರಿಗೆ ಕಾಮಗಾರಿ ಆರಂಭಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಕೃಷಿಕರ ಕೋವಿ ಠೇವಣಿ ವಿಚಾರ- ಕೋರ್ಟ್‌ನಿಂದ ಶೀಘ್ರ ತೀರ್ಪು:
ಚುನಾವಣೆ ಸಂದರ್ಭ ಕೃಷಿಕರು ತಮ್ಮ ಕೋವಿಯನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಟ್ಟ ಸಂದರ್ಭವನ್ನೇ ದುರುಪಯೋಗಪಡಿಸಿಕೊಡು ಕೃಷಿಕರ ಮನೆಯಿಂದ ಕಳ್ಳತನ ನಡೆದಿರುವ ಪ್ರಕರಣಗಳು ನಡೆದಿರುವ ದಾಖಲೆಗಳಿವೆ. ಅದೇ ರೀತಿ ಕಾಡು ಪ್ರಾಣಿಗಳಿಂದ ಕೃಷಿಕರ ಬೆಳೆ ಹಾನಿ ರಕ್ಷಣೆಗೆ ಸಂಬಂಧಿಸಿದಂತೆ ಕೋವಿ ಅತ್ಯಂತ ಅಗತ್ಯವಾಗಿದ್ದು, ಮುಂದಿನ ಚುನಾವಣೆ ಸಂದರ್ಭ ಕೃಷಿಕರ ಕೋವಿಯನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸದಂತೆ ಸೂಚನೆ ನೀಡಲು ಕೋರ್ಟ್‌ಗೆ ಅಪಿದಾವತ್ ಸಲ್ಲಿಸಿದ ವಿಚಾರ ಯಾವ ಹಂತದಲ್ಲಿದೆ ಎಂದು ಎಪಿಎಂಸಿ ಸದಸ್ಯ ಕೃಷ್ಣ ಕುಮಾರ್ ರೈ ಪ್ರಶ್ನಿಸಿದರು. ಉತ್ತರಿಸಿದ ಅಧ್ಯಕ್ಷರು ನ್ಯಾಯವಾದಿ ಅರುಣ್‌ಶ್ಯಾಮ್ ಅವರು ಈ ಕುರಿತು ವಾದ ಮಂಡನೆ ಮಾಡುತ್ತಿದ್ದಾರೆ. ಇನ್ನೆನ್ನು ೧೫ ದಿವಸದಲ್ಲಿ ನ್ಯಾಯಾಲಯದಿಂದ ಅಂತಿಮ ತೀರ್ಪು ಬರಲಿದೆ ಎಂದು ಉತ್ತರಿಸಿದರು.

ಮುಂದಿನ ತಿಂಗಳು ಕರ್ನಾಟಕ ದರ್ಶನ:
ಎಪಿಎಂಸಿ ಸದಸ್ಯರಿಗೆ ಕರ್ನಾಟಕ ದರ್ಶನ ಕಾರ್ಯಕ್ರಮಕ್ಕೆ ಅವಕಾಶವಿದ್ದು, ಅದನ್ನು ಉಪಯೋಗಿಸುವ ನಿಟ್ಟಿನಲ್ಲಿ ಮಾ. 25 ಮತ್ತು ಎ.10ರ ಒಳಗೆ ಕರ್ನಾಟಕ ದರ್ಶನಕ್ಕೆ ಹೋಗುವುದಾಗಿ ಸಭೆಯಲ್ಲಿ ಅಧ್ಯಕ್ಷರು ಮಾಹಿತಿ ನೀಡಿದರು. ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್, ಸದಸ್ಯರಾದ ತ್ರಿವೇಣಿ ಕರುಣಾಕರ ಪೆರ್‍ವೋಡಿ, ಮೇದಪ್ಪ, ಕುಶಾಲಪ್ಪ, ಕೊರಗ್ಗಪ್ಪ, ಕೃಷ್ಣಕುಮಾರ್ ರೈ, ಬಾಲಕೃಷ್ಣ ಬಾಣಜಾಲು, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ತೀರ್ಥಾನಂದ ದುಗ್ಗಲ, ಬೂಡಿಯಾರ್ ರಾಧಾಕೃಷ್ಣ ರೈ, ನಾಮ ನಿರ್ದೇಶಿತ ಸದಸ್ಯರಾದ ಮೋಹನಾಂಗಿ, ಬಾಬು, ಬಾಲಕೃಷ್ಣ ಜೋಯಿಸ ಉಪಸ್ಥಿತರಿದ್ದರು. ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಸಭಾನಡಾವಳಿ ನಡೆಸಿದರು.

LEAVE A REPLY

Please enter your comment!
Please enter your name here