ಆಚಾರ್ಯ ಮಧ್ವರು ತಪವಗೈದ ಪುಣ್ಯ ಕ್ಷೇತ್ರದಲ್ಲಿ ಜಾತ್ರೋತ್ಸವದ ಸಂಭ್ರಮ

0

  • ಮಾ.17-19: ಕೊಡಿಪಾಡಿ ಶ್ರೀಜನಾರ್ದನ ದೇವಸ್ಥಾನದಲ್ಲಿ ವರ್ಷಾವಧಿಉತ್ಸವ- ಮಾ.16 ಹೊರೆಕಾಣಿಕೆ ಸಮರ್ಪಣೆ

 

ಆಚಾರ್ಯ ಮಧ್ವರು ಚಾತುರ್ಮಾಸ್ಯ ವೃತಾಚರಣೆ ಸಂದರ್ಭ ತಪಗೈದ ಪರಮ ಪುಣ್ಯ ಪಾವನ ಕ್ಷೇತ್ರ ಕೊಡಿಪಾಡಿ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ. ಪುತ್ತೂರು ಪೇಟೆಯ ಮಂಜಲ್ಪಡ್ಪುವಿನಿಂದ ಸುಮಾರು ಮೂರು ಕಿಲೋ ಮೀಟರ್ ದೂರ ಕ್ರಮಿಸಿದರೆ ಸಿಗುವ ಶ್ರೀ ಜನಾರ್ದನ ದೇವಸ್ಥಾನವು ಈ ಹಿಂದೆ ವಿಟ್ಲ ಅರಸು ಮನೆತನದ ಆಳ್ವಿಕೆಗೆ ಒಳಪಟ್ಟು ಅವರ ಆಳ್ವಿಕೆಯ ದೇವಸ್ಥಾನದಲ್ಲೊಂದಾಗಿತ್ತು. ಈ ದೇವಸ್ಥಾನದಲ್ಲಿ ಆರಾಧಿಸಲ್ಪಡುವ

ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿಯು ಜನಾರ್ದನ ಎಂಬ ಋಷಿಯಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದು, ಈ ದೇವಸ್ಥಾನಕ್ಕೆ ಸರಿ ಸುಮಾರು 3500 ವರ್ಷಗಳ ಇತಿಹಾಸವಿರುವ ಕುರಿತು ಹಿರಿಯ ಸಂಶೋಧಕ ದಿ.ಗುರುರಾಜ ಭಟ್‌ರವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿಂದೆ ಕೊಡಿಪಾಡಿ ಜನಾರ್ದನ ಕ್ಷೇತ್ರವು ಪುತ್ತೂರಿಗೆ ಸೀಮೆಯ ದೇವಾಲಯ ಆಗಿತ್ತು. ಸುಮಾರು ೮೦೦ ವರ್ಷಗಳ ಹಿಂದೆ ಆಚಾರ್ಯ ಮಧ್ವರು ಶ್ರೀ ಕ್ಷೇತ್ರಕ್ಕೆ ಚಾತುರ್ಮಾಸ್ಯ ವ್ರತ ಆಚರಿಸಲು ಬಂದಿದ್ದು, ಆಚಾರ್ಯರು ತಪವಾಚರಿಸಿದ್ದ ಶಿಲೆಯನ್ನು ನಾವು ಇಂದಿಗೂ ದೇವಳದಲ್ಲಿ ಕಾಣಬಹುದು. ಪ್ರತೀ ವರ್ಷ ಸಿಂಹ ಮಾಸದ ಅಮಾವಾಸ್ಯೆಯಂದು ಆಚಾರ್ಯ ಮಧ್ವರು ಕಾಶಿಯಲ್ಲಿ ಗಂಗಾಸ್ನಾನ ಮಾಡುತ್ತಿದ್ದು ಕೊಡಿಪಾಡಿಯಲ್ಲಿ ಚಾತುರ್ಮಾಸ ವೃತ ಕೈಗೊಂಡ ಸಂದರ್ಭದಲ್ಲಿ ಕಾಶಿಯಲ್ಲಿ ಗಂಗಾಸ್ನಾನಗೈಯಲು ಸಾಧ್ಯವಾಗಲಿಲ್ಲ. ಆಗ ಗಂಗಾಮಾತೆ ಅವರ ಕನಸಿನಲ್ಲಿ ಕಾಣಿಸಿಕೊಂಡು, ಶ್ರೀ ಜನಾರ್ದನ ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ಕೆರೆಯ ಸಮೀಪವಿರುವ ಕುಂಡಿಗೆಯಲ್ಲಿ ಸಿಂಹಮಾಸದ ಅಮಾವಾಸ್ಯೆಯ ದಿನ ತಾನು ಹರಿದು ಬರುತ್ತೇನೆ, ಅದರಲ್ಲಿ ಸ್ನಾನ ಮಾಡಿ ಪವಿತ್ರನಾಗು ಎಂದು ಅಭಯವಿತ್ತಳು ಎಂಬ ಪ್ರತೀತಿ ಇದೆ. ಅದರಂತೆ ಪ್ರತೀ ವರ್ಷ ಅಮಾವಾಸ್ಯೆಯ ದಿನ ಇಲ್ಲಿ ತೀರ್ಥಸ್ನಾನ ನಡೆಯುತ್ತಿದ್ದು ಸಾವಿರಾರು ಜನರು ತೀರ್ಥಸ್ನಾನ ಮಾಡಿ ಕೃತಾರ್ಥರಾಗುತ್ತಿದ್ದಾರೆ. ಇಲ್ಲಿಯ ಕೆರೆಯ ನೀರಿಗೆ ಮೂಡೆ ಅಕ್ಕಿ ಸಮರ್ಪಿಸುವುದರಿಂದ ಹಲವು ನಮೂನೆಯ ಚರ್ಮವ್ಯಾಧಿಗಳು, ಕೆಡು, ಆಣಿ ಮೊದಲಾದವುಗಳು ಗುಣಮುಖವಾಗುತ್ತವೆ. ಈ ತೀರ್ಥ ಇಂದು ಕೊಡಿಪಾಡಿ ತೀರ್ಥ ಎಂದು ಪ್ರಸಿದ್ಧಿ ಹೊಂದಿದೆ. ಇಂದಿಗೂ ಊರ-ಪರವೂರ ಭಕ್ತಾದಿಗಳು ಬಂದು ತೀರ್ಥ ಸ್ನಾನಗೈಯುತ್ತಿರುವುದು ಇವೆಲ್ಲದಕ್ಕೆ ಸಾಕ್ಷಿಯಾಗಿದೆ. ದೇವಸ್ಥಾನದಲ್ಲಿ ಪ್ರಧಾನ ಆರಾಧ್ಯ ದೇವರು ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿಯ ಜೊತೆಗೆ ಶ್ರೀ ಮಹಾಗಣಪತಿ, ಶ್ರೀ ಪಾರ್ಥಸಾರಥಿ, ಶ್ರೀ ಶಾಸ್ತಾವು ದೇವರ ಗುಡಿ ಇದ್ದು, ಶ್ರೀ ಶಾಸ್ತಾವು ದೇವರು ವಿಗ್ರಹ ರೂಪದಲ್ಲಿ ಆರಾಧಿಸಲ್ಪಡುವ ಅಪರೂಪದ ದೇವಸ್ಥಾನವಾಗಿದೆ. ಜೊತೆಗೆ ನಾಗದೇವರು ಹಾಗೂ ಹುಲಿ ಭೂತದ ಸಾನಿಧ್ಯವಿದೆ. ದೇವಸ್ಥಾನದ ಪೂರ್ವಭಾಗದಲ್ಲಿ ಸ್ವಲ್ಪ ದೂರದಲ್ಲಿ ರಕ್ತೇಶ್ವರಿ ಹಾಗೂ ಗುಳಿಗ ದೈವದ ಸಾನಿಧ್ಯವಿದೆ. ಬಹಳ ಹಿಂದೆ ದೇವಾಲಯದ ಮುಂದಿನ ಅಂಗಣದಲ್ಲಿ ಉತ್ಸವ ನಡೆಯುತ್ತಿದ್ದಾಗ ಹಿಂಭಾಗದ ಅಂಗಣದಲ್ಲಿ ಹುಲಿ ಘರ್ಜಿಸುತ್ತಿತ್ತು ಎಂದು ಹಿರಿಯರು ಹೇಳಿರುವುದನ್ನು ಗ್ರಾಮಸ್ಥರು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ದೇವಳದಲ್ಲಿ ಧ್ವಜಾರೋಹಣಗೊಂಡು ರಥೋತ್ಸವ ಸಹಿತ 5ದಿನಗಳ ಜಾತ್ರೆ ನಡೆಯುತ್ತಿತ್ತು. ಪ್ರಸ್ತುತ ದೇವಾಲಯದಲ್ಲಿ ಮಾ.೧೭ರಿಂದ ಮಾ.೧೯ರ ವರೆಗೆ ಜಾತ್ರಾ ಮಹೋತ್ಸವವು ನಡೆಯಲಿದೆ.

ಜಾತ್ರೋತ್ಸವ ವಿವರ:
ಮಾ.16ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ, ಸಾಯಂಕಾಲ ಹೊರಕಾಣಿಕೆ ಸಮರ್ಪಣೆ, ರಾತ್ರಿ ಶ್ರೀ ಜನಾರ್ದನ ದೇವರಿಗೆ ಹಾಗೂ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ನಡೆಯಲಿದೆ. ಮಾ.17ರಂದು ಬೆಳಗ್ಗೆ ಗಣಪತಿ ಹೋಮ, ಸೀಯಾಳಾಭಿಷೇಕ, ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ ನಂತರ ಬಲಿ ಹೊರಟು, ಶ್ರೀ ದೇವರ ಭೂತ ಬಲಿ ಉತ್ಸವ, ಶ್ರೀ ದೇವರ ಉತ್ಸವ, ಪಲ್ಲಕಿ ಉತ್ಸವ, ನೃತ್ಯಬಲಿ, ಕಟ್ಟೆಪೂಜೆ ನಡೆಯಲಿದೆ. ಮಾ.18 ರಂದು ಬೆಳಗ್ಗೆ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ವಿವಿಧ ಭಜನಾ ತಂಡಗಳಿಂದ ನೃತ್ಯ ಭಜನೆ ನಡೆಯಲಿದೆ. ರಾತ್ರಿ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಬಳಿಕ ಕಾರ್ತಿಕ ಪೂಜೆ, ದೈವದ ಭಂಡಾರ ತೆಗೆಯುವುದು, ಪ್ರಸಾದ ವಿತರಣೆ ನಡೆಯಲಿದೆ. ಮಾ.19ರಂದು ಬೆಳಿಗ್ಗೆ ಹುಲಿಭೂತ ದೈವದ ನೇಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ ನಡೆಯಲಿದೆ. ಸಾಯಂಕಾಲ ರಕ್ತೇಶ್ವರಿ ದೈವಕ್ಕೆ ತಂಬಿಲ, ರಾತ್ರಿ ಶ್ರೀ ದೇವರಿಗೆ ಕಾರ್ತಿಕ ಪೂಜೆ ನಡೆಯಲಿದೆ.

ಭರದಿಂದ ಸಾಗುತ್ತಿರುವ ಅಭಿವೃದ್ಧಿ ಕಾರ್ಯ
ಶ್ರೀ ದೇವಳದಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ಧ್ವಜಸ್ಥಂಭ ಹಾಗೂ ಬ್ರಹ್ಮರಥದ ಕೆಲಸ ಕಾರ್ಯಗಳು ಈಗಾಗಲೇ ಪ್ರಾರಂಭಗೊಂಡಿದ್ದು ಇದರ ಪ್ರಥಮ ಹಂತವಾಗಿ ಧ್ವಜಸ್ಥಂಭದ ಮರವನ್ನು ದೇವಳಕ್ಕೆ ತಂದು ತೈಲಾಧಿವಾಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬ್ರಹ್ಮರಥದ ನಿರ್ಮಾಣ ಕಾರ್ಯ ನಡೆಯಲಿದೆ.

LEAVE A REPLY

Please enter your comment!
Please enter your name here