ಉಪ್ಪಿನಂಗಡಿ: ಹಿಜಾಬ್ ತೆಗೆದು ತರಗತಿಗೆ ಬರಲು ನಿರಾಕರಣೆ – ತರಗತಿಯಿಂದ ಹೊರಗುಳಿದ ವಿದ್ಯಾರ್ಥಿಗಳು

0

ಉಪ್ಪಿನಂಗಡಿ: ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ದಾಯಗೊಳಿಸಿ ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ಹೊರತಾಗಿಯೂ ತಮಗೆ ಹಿಜಾಬ್ ಧರಿಸಲು ಅವಕಾಶ ಕಲ್ಲಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿನಿಯರು ಹಾಗೂ ಅವರಿಗೆ ಬೆಂಬಲವಾಗಿದ್ದ ಕೆಲವು ವಿದ್ಯಾರ್ಥಿಗಳು ತರಗತಿಯಿಂದ ಹೊರಗಿದ್ದು ಪ್ರತಿಭಟಿಸಿದ ಘಟನೆ ಮಾ.16ರಂದು ಉಪ್ಪಿನಂಗಡಿ ಸರಕಾರಿ ಪ್ರಧಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ ಕಾಲೇಜು ಆರಂಭವಾಗುತ್ತಿದ್ದಂತೆಯೇ ತರಗತಿಯೊಳಗೆ ಹಿಜಾಬ್ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಕಾಲೇಜಿನ ಪ್ರಾಂಶುಪಾಲರು ನ್ಯಾಯಾಲಯದ ಆದೇಶದ ಪಾಲನೆಯಾಗಬೇಕಾಗಿರುವುದರಿಂದ ಹಿಜಾಬ್ ರಹಿತ ಸಮವಸ್ತ್ರದೊಂದಿಗೆ ಮಾತ್ರ ತರಗತಿಯಲ್ಲಿರಬೇಕೆಂದು ಸೂಚಿಸಿದರು. ಆದರೆ ಈ ಮಾತಿಗೆ ಒಪ್ಪಿ ತರಗತಿಗೆ ಬಾರಲು ನಿರಾಕರಿಸಿದ ವಿದ್ಯಾರ್ಥಿನಿಯರು ನಮಗೆ ಹಿಜಾಬ್ ಧರಿಸಿಯೇ ತರಗತಿಯಲ್ಲಿರಲು ಅವಕಾಶ ಕಲ್ಪಿಸಬೇಕೆಂದು ಅಗ್ರಹಿಸಿದರು. ಕಾಲೇಜಿನ ಪ್ರವೇಶ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಅವರಿಗೆ ಬೆಂಬಲವಾಗಿ ಕೆಲ ವಿದ್ಯಾರ್ಥಿಗಳೂ ತರಗತಿ ಬಹಿಷ್ಕರಿಸಿ ಹೊರನಡೆದರು.

ವರಸೆ ಬದಲಾಯಿಸಿದ ವಿದ್ಯಾರ್ಥಿನಿಯರು: ಈ ಹಿಂದೆ ಹಿಜಾಬ್‌ಗಾಗಿ ನಡೆದ ಪ್ರತಿಭಟನೆಯ ವೇಳೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ತೀರ್ಪು ಬರುವ ವರೆಗೆ ಸಮವಸ್ತ್ರದ ಶಾಲನ್ನು ತಲೆಗೆ ಹಿಜಾಬ್ ರೀತಿಯಲ್ಲಿ ಧರಿಸಲು ಅವಕಾಶ ಕಲ್ಪಿಸಬೇಕೆಂದು ವಿನಂತಿಸಿದ್ದರು. ಕಾಲೇಜು ಆಡಳಿತ ಮಂಡಳಿ ಈ ಮನವಿಯನ್ನು ಪುರಸ್ಕರಿಸಿತ್ತು. ಆದರೆ ನ್ಯಾಯಾಲಯದ ತೀರ್ಪು ಬಂದ ಬಳಿಕವೂ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಅಗ್ರಹಿಸಿದ ವಿದ್ಯಾರ್ಥಿನಿಯರ ಗುಂಪು ಈ ಹಿಂದೆ ಕಾಲೇಜು ಆಡಳಿತ ಮಂಡಳಿ ಅವಕಾಶ ಕಲ್ಪಿಸಿದಂತೆ ಇಂದೂ ಅವಕಾಶ ಕಲ್ಪಿಸಬೇಕೆಂದು ಅಗ್ರಹಿಸಿತು. ನ್ಯಾಯಾಲಯದ ತೀರ್ಪು ಬಂದ ಬಳಿಕ ಎಲ್ಲರೂ ತೀರ್ಪನ್ನು ಗೌರವಿಸಬೇಕೆಂದು ಪ್ರಾಂಶುಪಾಲರು ಪರಿಪರಿಯಾಗಿ ವಿನಂತಿಸಿದ್ದರೂ ವಿದ್ಯಾರ್ಥಿನಿಯರು ಸ್ಪಂದಿಸಲಿಲ್ಲ. ಹಿಜಾಬ್ ತೆಗೆದು ತರಗತಿಯೊಳಗೆ ಬರಲು ಒಪ್ಪಲಿಲ್ಲ.

ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗುತ್ತಿರುವ ಸೌಮ್ಯ ನಡೆ!: ಬಾಹ್ಯ ಶಕ್ತಿಗಳ ಕುಮ್ಮಕ್ಕಿನೊಂದಿಗೆ ಕಾಲೇಜಿನಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಗುಂಪನ್ನು ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸದೇ ಸೌಮ್ಯ ಶೈಲಿಯಲ್ಲಿಯೇ ನಿಭಾಯಿಸುತ್ತಿರುವುದು ಕಾಲೇಜಿನ ಉಳಿದ ವಿದ್ಯಾರ್ಥಿಗಳ ಅಸಹನೆಗೆ ಕಾರಣವಾಗಿದೆ. ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸುವ ಇಂತಹ ವಿದ್ಯಾರ್ಥಿಗಳ ಮೇಲೆ ಆಡಳಿತ ವ್ಯವಸ್ಥೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳಿಂದ ಕೇಳಿ ಬಂತು.

ಬಾಕ್ಸ್:
ತರಗತಿಯೊಳಗೆ ಸೇರಿಕೊಂಡ ಹಿಜಾಬ್‌ಧಾರಿಣಿಯರು: ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಪ್ರಾಂಶುಪಾಲರು ಆದೇಶ ನೀಡಿದ ಹೊರತಾಗಿಯೂ, ಸುಮಾರು ೧೧:೩೦ ಸಮಯದಲ್ಲಿ ಕಾಲೇಜಿನ ಫ್ರೀ ಟೈಂನಲ್ಲಿ ಕೆಲ ಹಿಜಾಬ್‌ಧಾರಿಣಿಯರು ತರಗತಿಯೊಳಗೆ ಸೇರಿಕೊಂಡರು. ಬಳಿಕ ತರಗತಿ ಆರಂಭವಾಗುವಾಗ ಅವರನ್ನು ಹೊರಗೆ ಹೋಗಲು ತಿಳಿಸಿದರೂ ಅವರು ಉಪನ್ಯಾಸಕರ ಸೂಚನೆಗೆ ಬೆಲೆ ಕೊಡದೇ ತರಗತಿಯೊಳಗೆ ಕುಳಿತುಕೊಂಡಿದ್ದರು. ಮನವೊಲಿಕೆಗೂ ಹಿಜಾಬ್‌ಧಾರಿಣಿಯರು ಬಗ್ಗದಿದ್ದಾಗ ನ್ಯಾಯಾಲಯದ ತೀರ್ಪಿನಂತೆ ನಾವು ನಡೆಯುತ್ತೇವೆ ಎಂದ ಉಪನ್ಯಾಸಕರು ಅವರು ಕುಳಿತುಕೊಂಡಿದ್ದ ತರಗತಿಗೆ ಪಾಠ ಮಾಡಲಿಲ್ಲ. ಕೊನೆಗೇ ಪ್ರಾಂಶುಪಾಲರು ಬಂದು ಹಿಜಾಬ್ ಧರಿಸಿದವರನ್ನು ತರಗತಿಯಿಂದ ಹೊರಗೆ ಹೋಗಲು ಪರಿಪರಿಯಾಗಿ ಹೇಳಿದರೂ ಕೂಡಾ ವಿದ್ಯಾರ್ಥಿನಿಯರು ಮಾತ್ರ ಅದಕ್ಕೆ ಕಿವಿಕೊಡದೇ ತರಗತಿಯಲ್ಲೇ ಕುಳಿತುಕೊಂಡಿದ್ದರು. ಹಲವು ಸಮಯದ ಸೂಚನೆ, ಮನವಿಯ ಬಳಿಕ ಕೊನೆಗೂ ಎರಡೂವರೆಯ ಸುಮಾರಿಗೆ ಹಿಜಾಬ್‌ಧಾರಿಣಿ ವಿದ್ಯಾರ್ಥಿನಿಯರು ತರಗತಿಯಿಂದ ಹೊರನಡೆದರು.

LEAVE A REPLY

Please enter your comment!
Please enter your name here