ನಾ. ಕಾರಂತ ಪೆರಾಜೆಯವರ ಲೇಖನಗಳು ಬೆಂಗಳೂರು ವಿವಿ ಪಠ್ಯಕ್ಕೆ ಸೇರ್ಪಡೆ

0

 

ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಸಹ ಸಂಪಾದಕ, ಅಂಕಣಗಾರ, ನಾ. ಕಾರಂತ ಪೆರಾಜೆಯವರ ಎರಡು ಕೃಷಿ ಸಂಬಂಧಿ ಲೇಖನಗಳು ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಈ ಲೇಖನಗಳು ಉದಯವಾಣಿಯ ‘ನೆಲದ ನಾಡಿ’ ಅಂಕಣ ಹಾಗೂ ‘ತರಂಗ’ದಲ್ಲಿ ಪ್ರಕಟವಾದಂತಹುಗಳು.

ಬಿ.ಎಚ್.ಎಂ.ಪ್ರಥಮ ಸೆಮಿಸ್ಟರ್ – ಭಾಷಾ ಕನ್ನಡ ಪಠ್ಯದಲ್ಲಿ ‘ಆಹಾರ ಸಂರಕ್ಷಣೆಯಿಂದ ಬದುಕಿಗೆ ಭದ್ರತೆ’ (ಉದಯವಾಣಿ) ಎನ್ನುವ ಲೇಖನ. ನಮ್ಮ ಹಿರಿಯರ ಆಹಾರ ಸಂರಕ್ಷಣಾ ವಿಧಾನದ ಸುತ್ತ ಹೆಣೆದ ಬರಹವಿದು. ಹಲಸು, ಮಾವು, ಬಾಳೆಹಣ್ಣು, ಭತ್ತ.. ಮೊದಲಾದವುಗಳ ಸಂರಕ್ಷಣೆ, ಅವುಗಳ ಮೌಲ್ಯವರ್ಧನೆಗಳು ಹಳ್ಳಿ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಾದ ಕಾಲಘಟ್ಟವನ್ನು ಕಾರಂತರು ಲೇಖನದಲ್ಲಿ ವಿವರಿಸಿದ್ದರು. ಒಂದು ಕಾಲಘಟ್ಟದಲ್ಲಿ ಬದುಕನ್ನು ಆಧರಿಸಿದ ಹಲಸು, ಹಲಸಿನ ಹಣ್ಣು, ಹಲಸಿನ ಕಾಯಿಯ ಉಪ್ಪುಸೊಳೆ, ಪಲ್ಯ, ವಿವಿಧ ಖಾದ್ಯಗಳ ಪರಿಚಯ; ಕಾಡುಮಾವಿನ ಮಾಂಬಳ ತಯಾರಿ, ಹಲಸಿನ ಹಣ್ಣಿನ ಬೆರಟ್ಟಿ, ಹಸಿಮೆಣಸಿನ ಮಜ್ಜಿಗೆ ಮೆಣಸು, ಬಾಳೆಹಣ್ಣಿನ ಸುಕೇಳಿ, ಪುನರ್ಪುಳಿ ಮಂದಸಾರ ಹಾಗೂ ಸಿಪ್ಪೆಯ ಬಳಕೆ, ಅಕ್ಕಿ ಮುಡಿಯ ಬಳಕೆ.. ಇವೆಲ್ಲಾ ಅಲಿಖಿತ ಹಳ್ಳಿ ತಂತ್ರಜ್ಞಾನದಲ್ಲಿ ಕಾಪಾಡಲ್ಪಟ್ಟವುಗಳು. ಯಾವುದೇ ಕೃತಕ ಸಂರಕ್ಷಕಗಳನ್ನು ಬಳಸದ ಹಳ್ಳಿ ಜ್ಞಾನ.

ಬಿ.ಬಿ.ಎ ಪ್ರಥಮ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ‘ಹತ್ತು ಪೈಸೆಗೆ ಒಂದು ಲೀಟರ್ ನೀರು’ (ತರಂಗ) ಲೇಖನ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಶುದ್ಧ ಗಂಗಾ’ ಯೋಜನೆಯಡಿ ರೂಪುಗೊಂಡ ಅಭಿಯಾನ. ಹಳ್ಳಿ ಜನರಿಗೆ ಕುಡಿಯಲು ಶುದ್ಧ ನೀರನ್ನು ಒದಗಿಸುವ ಈ ಯೋಜನೆಯು ಯಶಸ್ಸಾಗಿದೆ. ಇದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕನಸು. ಮುಖ್ಯವಾಗಿ ಹೆಚ್ಚು ನೀರಿನ ಸಮಸ್ಯೆಯಿರುವ ಉತ್ತರ ಕರ್ನಾಟಕ ಭಾಗದಲ್ಲಿ ತುಂಬು ಜನಸ್ವೀಕೃತಿಗೊಂಡ ಯೋಜನೆ. ನೀರಿನ ಹಂಚಿಕೆಗೆ ಕ್ರಮಬದ್ಧವಾದ ಆಡಳಿತ ವ್ಯವಸ್ಥೆಯನ್ನೂ ಮಾಡಿದ್ದಾರೆ. ಆರೋಗ್ಯ ಕಾಳಜಿಯ ಗ್ರಾಮೀಣರಿಗೆ ‘ಶುದ್ಧ ಗಂಗಾ’ ವರದಾನವಾಗಿದೆ.

ನಾ. ಕಾರಂತ ಪೆರಾಜೆಯವರು ಈ ಹಿಂದೆ ಬರೆದಿದ್ದ ಪದ್ಮಶ್ರೀ ಹರೇಕಳ ಹಾಜಬ್ಬರ ಬಗೆಗಿನ ‘ಅಕ್ಷರ ಯೋಗಿಯ ನೋಡಲ್ಲಿ’ ಲೇಖನವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್‌ನ ಕನ್ನಡ ಪಠ್ಯದಲ್ಲಿ ಸೇರಿತ್ತು.

ಮೇಲಿನ ಲೇಖನಗಳು ‘ನೆಲದ ನಾಡಿ’ ಪುಸ್ತಕದಲ್ಲಿ ಪ್ರಕಟವಾಗಿದ್ದುವು. ಬೆಂಗಳೂರು ವಿವಿಯವರು ಪುಸ್ತಕದಿಂದ ಲೇಖನಗಳನ್ನು ಆಯ್ದುಕೊಂಡಿದ್ದಾರೆ. ನಾ. ಕಾರಂತರು ಕೃಷಿ, ಯಕ್ಷಗಾನದ ಕುರಿತಾದ ಪುಸ್ತಕ ರಚಯಿತರು. ಉದಯವಾಣಿ, ಹೊಸದಿಗಂತ, ಪ್ರಜಾವಾಣಿ ಹಾಗೂ ಸುದ್ದಿ ಬಿಡುಗಡೆಗಳಲ್ಲಿ ಅಂಕಣಕಾರರಾಗಿದ್ದರು.’ಪುತ್ತೂರು ತಾಲೂಕು ಹದಿನೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೋವಿಡ್ ಕಾಲಘಟ್ಟದ ಧನಾತ್ಮಕ ಯಶೋಗಾಥೆಗಳ ಸಂಕಲನ ‘ಮುಸ್ಸಂಜೆಯ ಹೊಂಗಿರಣ’ ಹಾಗೂ ಹಲಸಿನ ಜಗದಗಲದ ಹಿನ್ನೋಟ ‘ಅನ್ನದ ಮರ’ ಅವರ ಈಚೆಗಿನ ಪ್ರಕಟಣೆಗಳು.

LEAVE A REPLY

Please enter your comment!
Please enter your name here