ಎ.2 ಉಪ್ಪಿನಂಗಡಿಯಲ್ಲಿ 36ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳ

0

  • ‘ಉಬಾರ್ ಕಂಬುಲ’ದ ಇತಿಹಾಸ, ವಿಶೇಷತೆಯ ಮಾಹಿತಿ ನೀಡಿದ ಅಶೋಕ್ ರೈ

ಪುತ್ತೂರು: ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈಯವರ ಸಾರಥ್ಯದಲ್ಲಿ ಉಪ್ಪಿನಂಗಡಿಯ ಕೂಟೇಲು ನೇತ್ರಾವತಿ ನದಿ ಕಿನಾರೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗದಲ್ಲಿ ೩೬ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳ ಎಪ್ರಿಲ್ 2 ರಂದು ನಡೆಯಲಿದೆ.

‘ಸುದ್ದಿ ನೇರ ಸಂವಾದ’ದಲ್ಲಿ ಮಾಹಿತಿ ನೀಡಿದ ಅಶೋಕ್ ರೈ; ಐತಿಹಾಸಿಕವಾಗಿ ನಡೆಯಲಿರುವ ಉಪ್ಪಿನಂಗಡಿಯ 36ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳದ ಇತಿಹಾಸ ಏನು, ಗತ್ತು ಗೈರತ್ತು ಏನು, ಕಂಬಳದ ವಿಶೇಷತೆ ಏನು ಎಂಬಿತ್ಯಾದಿ ವಿಚಾರಗಳ ಕುರಿತು ಸುದ್ದಿ ಕೇಬಲ್ ಚಾನೆಲ್, ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ ಮತ್ತು ಸುದ್ದಿ ಫೇಸ್‌ಬುಕ್ ಪೇಜ್‌ನಲ್ಲಿ ಮಾ.೩೧ರಂದು ಸಂಜೆ ನಡೆದ ವಿಶೇಷ ಮಾತುಕತೆ-ನೇರ ಸಂವಾದದಲ್ಲಿ ಮಾತನಾಡಿದ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈಯವರು ಕಂಬಳ ಕೂಟದ ಮಾಹಿತಿ ನೀಡಿದರು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳದ ಇತಿಹಾಸ, ಬೆಳೆದುಬಂದ ಹಾದಿ, ಕಂಬಳವನ್ನು ಮುನ್ನಡೆಸಿಕೊಂಡು ಬಂದ ಹಿರಿಯರ ಶ್ರಮ, ಕಂಬಳ ಆಯೋಜನೆಯ ಹಿಂದಿರುವ ಪರಿಶ್ರಮ, ಖರ್ಚುವೆಚ್ಚಗಳು, ಸಂಪನ್ಮೂಲ ಕ್ರೋಢೀಕರಣ, ಕಂಬಳ ನಿಷೇಧಗೊಂಡ ಸಂದರ್ಭದಲ್ಲಿ ಕಂಬಳ ಕೋಣಗಳ ಮಾಲಕರು ಅನುಭವಿಸಿದ ಬವಣೆ, ಬೇಗುದಿ, ಕಂಬಳ ನಿಷೇಧದ ವಿರುದ್ಧ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ಹೋರಾಟದ ಹಾದಿ, ಆಗಿರುವ ಪ್ರಯತ್ನ, ಕಂಬಳಕ್ಕೆ ವಿಶೇಷ ಅನುದಾನ ಒದಗಿಸುವ ನಿಟ್ಟಿನಲ್ಲಿ ಆಗಿರುವ ಪ್ರಯತ್ನ, ಮುಂದಿನ ಬೆಳವಣಿಗೆಗಳು ಇತ್ಯಾದಿಗಳ ಬಗ್ಗೆ ಅತಿಥಿಗಳು ಮುಕ್ತವಾಗಿ ಮಾತನಾಡಿದರು. ನಾಡಿನ ವಿವಿಧೆಡೆಗಳಿಂದ ವೀಕ್ಷಕರು ಕರೆಮಾಡಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಂಡರು. ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ ಮತ್ತು ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲುರವರು ನೇರಸಂವಾದದಲ್ಲಿ ಭಾಗವಹಿಸಿದ್ದರು. ಸುದ್ದಿ ಚಾನೆಲ್‌ನ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಎ.2ರಂದು ಬೆಳಿಗ್ಗೆ 10.31ರಿಂದ ಉಪ್ಪಿನಂಗಡಿ ಕೂಟೇಲು(ಹಳೆಗೇಟು)ನೇತ್ರಾವತಿ ನದಿ ಕಿನಾರೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗದಲ್ಲಿ 36ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳ ನಡೆಯಲಿದೆ. ಬೆಳಿಗ್ಗೆ 9.31ಕ್ಕೆ ಉದ್ಘಾಟನೆ ನೆರವೇರಲಿದ್ದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಉದ್ಘಾಟಿಸಲಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೬ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಕೇಂದ್ರದ ಮಾಜಿ ಸಚಿವರೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಡಿ.ವಿ.ಸದಾನಂದ ಗೌಡರವರು ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸನ್ಮಾನ ನೆರವೇರಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಮಾಜಿ ಸಚಿವ ಜನಾರ್ದನ ರೆಡ್ಡಿ ಸಹಿತ ಹಲವರು ಭಾಗವಹಿಸಲಿದ್ದಾರೆ. ಗುಜರಾತ್‌ನ ಬರೋಡ ತುಳು ಸಂಘದ ಅಧ್ಯಕ್ಷರೂ ಆಗಿರುವ ಉದ್ಯಮಿ ಶಶಿಧರ ಶೆಟ್ಟಿಯವರಿಗೆ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ನಡೆಯಲಿದೆ ಎಂದು ವಿವರ ನೀಡಿದ ಅಶೋಕ್ ರೈಯವರು ಎ.೩ರಂದು ಬೆಳಿಗ್ಗೆ ೧೦.೩೦ಕ್ಕೆ ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ ಮತ್ತು ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲುರವರು ನೇರಸಂವಾದದಲ್ಲಿ ಭಾಗವಹಿಸಿದ್ದರು.

ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳವು ಸುದ್ದಿ ಯೂಟ್ಯೂಬ್ ಚಾನೆಲ್ ಮತ್ತು ಸುದ್ದಿ ಫೇಸ್‌ಬುಕ್ ಪೇಜ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.

LEAVE A REPLY

Please enter your comment!
Please enter your name here