ಉಪ್ಪಿನಂಗಡಿ: ವಾಟ್ಸಾಪ್‌ನಲ್ಲಿ ಮತೀಯ ವೈಷಮ್ಯ ಮೂಡಿಸುವ ಸಂದೇಶ – ದೂರು ನೀಡಿ ವಾರ ಕಳೆದರೂ ಆರೋಪಿಯ ಪತ್ತೆ ಇಲ್ಲ

0

ಉಪ್ಪಿನಂಗಡಿ : ’ಹಿಂದೂ ವ್ಯಾಪಾರಿಗಳಾದ ನಾವು ಮುಸ್ಲೀಂ ಸಮುದಾಯದವರಿಗೆ ಯಾವುದೇ ವಸ್ತುವನ್ನು ಮಾರಾಟ ಮಾಡುವುದಿಲ್ಲ’ವೆಂಬ ಮತೀಯ ವೈಷಮ್ಯವನ್ನು ಮೂಡಿಸುವ ವಾಟ್ಸಪ್ ಸಂದೇಶವನ್ನು ಹರಿಯ ಬಿಟ್ಟ ದುಷ್ಕರ್ಮಿಯನ್ನು ಪತ್ತೆ ಹಚ್ಚಲು ಸಂತ್ರಸ್ತ ವರ್ತಕರು ಪೊಲೀಸರಿಗೆ ದೂರು ನೀಡಿ ವಾರ ಕಳೆದರೂ ಪೊಲೀಸ್ ಇಲಾಖೆಯಿಂದ ಯಾವುದೇ ಪ್ರಗತಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ.

 

ಹಲವು ಅಹಿತಕರ ಘಟನೆಯಿಂದ ನಲುಗಿ ಮತ್ತೆ ಸಹಜ ಸ್ಥಿತಿಯತ್ತ ಬರುತ್ತಿದ್ದ ಉಪ್ಪಿನಂಗಡಿಯನ್ನು ಬೆಚ್ಚಿ ಬೀಳಿಸಿದ ಕೃತ್ಯವೊಂದು ಮಾ. 24 ರಂದು ಅನಾವರಣಗೊಂಡಿದ್ದು, ಇದರಲ್ಲಿ ಮತೀಯ ದ್ವೇಷ ಮೂಡಿಸುವ ಹುನ್ನಾರದಿಂದ 32 ಹಿಂದೂ ಸಮುದಾಯದ ವ್ಯಾಪಾರ ಮಳಿಗೆಯ ಹೆಸರನ್ನು ದಾಖಲಿಸಿಕೊಂಡು, ‘ಹಿಂದೂ ವರ್ತಕರ ಒಕ್ಕೂಟ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಕರ್ನಾಟಕದ ಐತಿಹಾಸದಲ್ಲೇ ಅತ್ಯಂತ ದೃಢ ಹಾಗೂ ಧೈರ್ಯ ಶಾಲಿ ನಿರ್ಣಯ ಕೈಗೊಂಡಿದ್ದೇವೆ’ ಎಂದೂ, ‘ನಮ್ಮ ಅಂಗಡಿಯಿಂದ ಯಾವುದೇ ಸಾಮಾಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ. ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ’ ಎಂದು ಬರೆಯಲ್ಪಟ್ಟು ವಾಟ್ಸಪ್‌ಗಳಲ್ಲಿ ಹರಿಯಬಿಡಲಾಗಿತ್ತು.

ವಾಟ್ಸಪ್ ಸಂದೇಶದಲ್ಲಿ ಮತೀಯ ದ್ವೇಷದ ಭಾವನೆಯನ್ನು ಮೂಡಿಸುವ, ಸಮುದಾಯದೊಳಗೆ ಸಂಘರ್ಷ ಮೂಡಿಸಿ ಸಾಮಾಜಿಕ ಅಶಾಂತಿಯನ್ನುಂಟು ಮಾಡುವ ಷಡ್ಯಂತ್ರದ ನೆಲೆಯಲ್ಲಿ ಈ ವಾಟ್ಸಪ್ ಮೆಸೇಜ್ ಸೃಷ್ಠಿಸಿದ ಬಗ್ಗೆ ನೊಂದ ವರ್ತಕರು ಪುತ್ತೂರು ಡಿವೈಎಸ್ಪಿ ಯವರಿಗೆ ದೂರು ಸಲ್ಲಿಸಿ ಸುಳ್ಳು ಸುದ್ದಿಯನ್ನು ಸೃಷ್ಠಿಸಿದಾತನನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಲು ಅಗ್ರಹಿಸಿದ್ದರು.

ಸೈಬರ್ ಕ್ರೈಮ್ ವಿಭಾಗವಿದೆ… ಆರೋಪಿಯ ಪತ್ತೆ ಇಲ್ಲ… : ಜಿಲ್ಲೆಯಲ್ಲಿ ಸೈಬರ್ ಕ್ರೈಮ್ ವಿಭಾಗವಿದೆ. ಇದರ ಸಹಾಯದಿಂದ ಸುಳ್ಳು ಸುದ್ದಿಯನ್ನು ಹರಿಯಬಿಟ್ಟವನನ್ನು ಶೀಘ್ರಾತಿ ಶೀಘ್ರ ಪತ್ತೆ ಹಚ್ಚಿ ಬಂಧಿಸಲಾಗುವುದೆಂಬ ಜನರ ನಿರೀಕ್ಷೆಯು ಘಟನೆ ಸಂಭವಿಸಿ ವಾರ ಕಳೆದರೂ ಪೊಲೀಸರಿಂದ ಯಾವುದೇ ಸಾಧನೆ ಪ್ರಕಟವಾಗದಿರುವುದರಿಂದ ಹುಸಿಯಾಗಿದೆ. ಪ್ರಕರಣದ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ‘ಅಂಡರ್ ಇನ್‌ವೆಸ್ಟಿಗೇಷನ್’ ಎಂಬ ಉತ್ತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಂದ ಹಿಡಿದು ಎಸೈ ವರೆಗೆ ಕೇಳಲ್ಪಡುತ್ತಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ.

ದೈವಕ್ಕೆ ಮೊರೆ ಹೋಗಿದ್ದೇವೆ…. : ಪ್ರಕರಣದಿಂದ ಸಂತ್ರಸ್ತರಾದ ವರ್ತಕರು ವಾರ ಕಳೆದರೂ, ಸುಳ್ಳು ಸುದ್ದಿಯನ್ನು ಹಬ್ಬಿಸಿದಾತನನ್ನು ಬಂಧಿಸಲಾಗದ ಪೊಲೀಸ್ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಸಂಶಯಗೊಂಡು, ಪೊಲೀಸ್ ಇಲಾಖೆಯಿಂದ ನ್ಯಾಯ ದೊರಕುವ ನಿರೀಕ್ಷೆ ಕ್ಷೀಣವಾಗುತ್ತಿದೆ. ಈ ಕಾರಣಕ್ಕೆ ನಂಬಿದ ದೈವವಾದರೂ ನಮ್ಮನ್ನು ಕಾಪಾಡಬಹುದೆಂದು ದೈವಕ್ಕೆ ಮೊರೆ ಹೋಗಿದ್ದೇವೆ. ನೋಡೋಣ… ನಂಬಿದ ದೈವವೇ ದಾರಿ ತೋರಿಸಬೇಕಾಗಿದೆ ಎಂದು ವರ್ತಕರೊಬ್ಬರು ನಿರಾಶಾಭಾವದಿಂದ ನೊಂದು ನುಡಿದಿದ್ದಾರೆ.

LEAVE A REPLY

Please enter your comment!
Please enter your name here