ಪುತ್ತೂರು ಜಾತ್ರೆ ಎಲ್ಲರಿಗೂ ಸಂಭ್ರಮ ಶಿಸ್ತನ್ನೂ ತೋರಿಸುವ ಕೆಲಸವಾಗಬೇಕು

0

  • ಜಾತ್ರಾ ಸಿದ್ಧತೆ ಕುರಿತು ಇಲಾಖಾಧಿಕಾರಿಗಳ ಸಭೆಯಲ್ಲಿ ಶಾಸಕರ ಸೂಚನೆ
  • ಒಂದೇ ಕಡೆ ಕಂಟ್ರೋಲ್ ರೂಮ್ ಇರಲಿ-ಎ.ಸಿ.ಗಿರೀಶ್ ನಂದನ್ 
  • ಬ್ರಹ್ಮಕಲಶದಷ್ಟೆ ದೊಡ್ಡ ವ್ಯವಸ್ಥೆ ಬೇಕು – ಕೇಶವಪ್ರಸಾದ್ ಮುಳಿಯ
  • ಸ್ವಚ್ಛತೆಗೆ ಆದ್ಯತೆ -ಕೆ.ಜೀವಂಧರ್ ಜೈನ್

ಪುತ್ತೂರು:ಪ್ರತಿ ವರ್ಷ ಜಾತ್ರೆ ಆಗುತ್ತದೆ.ಅದೊಂದು ಸಂಭ್ರಮ.ಆದರೆ ಜಾತ್ರೆಯಲ್ಲಿಯೂ ಒಂದು ಶಿಸ್ತು ಇದೆ ಎಂದು ತೋರಿಸುವ ಕೆಲಸ ಇಲ್ಲಿ ಆಗಬೇಕು.ಈ ನಿಟ್ಟಿನಲ್ಲಿ ಇಲಾಖೆಗಳಿಗಿರುವ ಜವಾಬ್ದಾರಿಯನ್ನು ಜಾತ್ರೆ ಮುಗಿಯುವ ತನಕ ಶಿರಸಾ ಪಾಲಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ಆರಂಭಗೊಳ್ಳುವ ವರ್ಷಾವಧಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ಧತೆಗಳ ಕುರಿತು ದೇವಳದ ಸಭಾಭವನದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಮೆಸ್ಕಾಂ, ಪೊಲೀಸ್, ಸಂಚಾರ ಪೊಲೀಸ್, ಅಗ್ನಿಶಾಮಕ, ನಗರಸಭೆ, ಆರೋಗ್ಯ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ಜಾತ್ರೆಯ ಸಿದ್ಧತೆಗೆ ಸಂಬಂಧಿಸಿ ಮಾಹಿತಿ ಪಡೆದ ಶಾಸಕರು, ಕೋವಿಡ್‌ನಿಂದಾಗಿ ಕಳೆದ ವರ್ಷದ ಪರಿಸ್ಥಿತಿ ಸರಿ ಇರಲಿಲ್ಲ. ಈ ವರ್ಷ ಕೋವಿಡ್ ಇಲ್ಲ. ಹಾಗಾಗಿ ಪುತ್ತೂರು ಜಾತ್ರೆಗೆ ಅತೀ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ 1 ಲಕ್ಷ ಜನ ಒಂದು ಕಡೆ ಸೇರಿದರೆ ಅಲ್ಲಿ ಏನು ವ್ಯವಸ್ಥೆಗಳಾಗಬೇಕು ಎಂದು ನೋಡಿಕೊಂಡು ನಾವು ಕಾರ್ಯಪ್ರವೃತ್ತರಾಗಬೇಕು.ಜಾತ್ರೆಗೆ ಬರುವ ಜನಸಂಖ್ಯೆ, ವಾಹನಗಳ ಲೆಕ್ಕಾಚಾರ ಇರಬೇಕು.ಈ ಸಂದರ್ಭದಲ್ಲಿ ಅಲ್ಲಿ ಏನೇನು ಸೌಲಭ್ಯ ಇರಬೇಕೆಂಬುದು ಮುಖ್ಯ ಎಂದರು.

 

ಜಾತ್ರೆಗೆ ಬರುವವರು ದೇವರಿಗೆ ಅವರೆಲ್ಲ ಭಕ್ತರಾದರೆ ನಮಗೆ ಅತಿಥಿಗಳು.ಹಾಗಾಗಿ ಪುತ್ತೂರು ಜಾತ್ರೆಯಲ್ಲಿ ಶಿಸ್ತು ತೋರಿಸುವ ಕೆಲಸ ಆಗಬೇಕು.ಪುತ್ತೂರು ಜಾತ್ರೆಗೆ ಹೋದರೆ ಏನೂ ಸಮಸ್ಯೆ ಇಲ್ಲ ಎಂಬ ಮನೋಭಾವ ಇರಬೇಕು.ಈ ನಿಟ್ಟಿನಲ್ಲಿ ಯಾವ ಯಾವ ಇಲಾಖೆಗೆ ಏನೇನು ಜವಾಬ್ದಾರಿ ಇದೆಯೋ ಆ ಜವಾಬ್ದಾರಿಯನ್ನು ಜಾತ್ರೆ ಮುಗಿಯುವ ತನಕ ಶಿರಸಾ ಪಾಲಿಸಬೇಕು ಎಂದು ಹೇಳಿದ ಶಾಸಕರು, ಯಾವುದೇ ಅಹಿತಕರ ಘಟನೆ ಆಗದಂತೆ ಮುಂಜಾಗ್ರತೆ ಕ್ರಮ ವಹಿಸಿ ಎಂದರಲ್ಲದೆ ದೇವಸ್ಥಾನ, ನಗರಸಭೆಯಿಂದ ಇತರ ಇಲಾಖೆಗಳಿಗೆ ಪೂರ್ಣ ಸಹಕಾರ ನೀಡಲಾಗುವುದು.ಭದ್ರತಾ ದೃಷ್ಟಿಯಿಂದ ಎಲ್ಲೆಲ್ಲಿ ಸಿಸಿ ಕ್ಯಾಮರಾ, ಮಾಹಿತಿ ಕೇಂದ್ರ ವ್ಯವಸ್ಥೆಗೆ ಗಮನ ಕೊಡಿ ಎಂದರು.

ಒಂದೇ ಕಡೆ ಕಂಟ್ರೋಲ್ ರೂಮ್ ಇರಲಿ: ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಮಾತನಾಡಿ ನಾನು ಹಾಸನದಲ್ಲಿ ಇರುವಾಗ ೧೫ ಲಕ್ಷ ಮಂದಿ ಸೇರುವ ಹಾಸನಾಂಬೆ ಜಾತ್ರೆಯಲ್ಲಿ ವಿಶೇಷ ಸೆಟ್‌ಅಪ್ ಮಾಡಿದ್ದೆ. ಅದೇ ರೀತಿ ಪುತ್ತೂರು ಜಾತ್ರೆಯಲ್ಲೂ ವಿಶೇಷ ವ್ಯವಸ್ಥೆ ಮಾಡಬೇಕು.ಉತ್ತಮ ರೀತಿಯ ಕಂಟ್ರೋಲ್ ರೂಮ್ ಸೆಟ್‌ಅಪ್ ಆಗಬೇಕು.ಸಿಸಿ ಕ್ಯಾಮರಾ, ಮಾಹಿತಿ ಕೇಂದ್ರಕ್ಕೆ ಒಂದೇ ಕಂಟ್ರೋಲ್ ರೂಮ್ ಇರಬೇಕು.ಅಗ್ನಿಶಾಮಕ ದಳದವರು ಬಹಳ ನಿಗಾ ವಹಿಸಬೇಕೆಂದರು.

ಬ್ರಹ್ಮಕಲಶದಷ್ಟೆ ದೊಡ್ಡ ವ್ಯವಸ್ಥೆ ಪುತ್ತೂರು ಜಾತ್ರೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಮಾತನಾಡಿ ದೇವರು ಪೇಟೆ ಸವಾರಿಯೊಂದಿಗೆ ಕಟ್ಟೆ ಪೂಜೆ ಸ್ವೀಕರಿಸುವುದು ಜಿಲ್ಲೆಯಲ್ಲೇ ಪುತ್ತೂರು ಜಾತ್ರೆಯಲ್ಲಿ ಮಾತ್ರ ಎಂದು ಹೇಳಬಹುದು.ಬ್ರಹ್ಮಕಲಶೋತ್ಸವದಷ್ಟೆ ಬಹಳ ದೊಡ್ಡ ವ್ಯವಸ್ಥೆ ಪುತ್ತೂರು ಜಾತ್ರೆಗೆ ಬೇಕು.ಹಾಗಾಗಿ ಈಗಾಗಲೇ ಹಲವು ಉಪಸಮಿತಿಗಳನ್ನು ಮಾಡಲಾಗಿದೆ.ಎಲ್ಲರ ಸಹಕಾರದಿಂದ ಜಾತ್ರೆ ಯಶಸ್ವಿಯಾಗಬೇಕೆಂದರು.

ಸ್ವಚ್ಛತೆಗೆ ಆದ್ಯತೆ : ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಸ್ವಚ್ಛತೆಗೆ ಸಂಬಂಧಿಸಿ ನಗರಸಭೆ ವತಿಯಿಂದ ಏನೆಲ್ಲಾ ಅಗತ್ಯ ವಿಚಾರಗಳು ಬೇಕಾಗಿದೆಯೋ ಅದನ್ನು ಮಾಡಲಾಗುವುದು.ಈಗಾಗಲೇ, ನೀರಿನ ಸಮಸ್ಯೆ ಆಗಬಾರದು ಎಂದು ಜಲಸಿರಿ ಮತ್ತು ನೀರು ಬಿಡುವವರ ಸಭೆ ನಡೆಸಲಾಗಿದೆ.ಮುಂದೆ ವರ್ತಕರ ಸಭೆ ಕರೆಯಲಾಗುವುದು.ಪ್ರತಿ ಅಂಗಡಿಯಲ್ಲೂ ಕಸದ ಬುಟ್ಟಿ ಇಟ್ಟುಕೊಳ್ಳುವಂತೆ ಸೂಚನೆ ನೀಡಲಾಗುವುದು. ರಾಜಕಾಲುವೆಯ ಹೂಳೆತ್ತುವ ಕೆಲಸ ಆರಂಭಿಸಲಾಗಿದೆ.ದಾರಿ ದೀಪಗಳ ನಿರ್ವಹಣೆ ಮಾಡಲಾಗುತ್ತಿದೆ. ಪುತ್ತೂರು ಜಾತ್ರೆಗೆ ಪರವೂರಿನಿಂದ ಬರುವವರಿದ್ದಾರೆ.ಈ ಸಂದರ್ಭದಲ್ಲಿ ಅವರಿಗೆ ಇಲ್ಲಿ ಯಾವುದೇ ಸಮಸ್ಯೆ ಬರಬಾರದು ಎಂದರು.

ಬ್ರಹ್ಮರಥೋತ್ಸವದ ರಾತ್ರಿ ವಿಶೇಷ ಬಸ್ ಸೌಲಭ್ಯ: ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದಂದು ಊರಿನ, ಪರವೂರಿನ ಲಕ್ಷಾಂತರ ಭಕ್ತರು, ಸಾರ್ವಜನಿಕರು ಗದ್ದೆಯಲ್ಲಿ ಇರುತ್ತಾರೆ.ಅವರೆಲ್ಲಾ ರಥೋತ್ಸವ ಮುಗಿದ ಬಳಿಕವೇ ಗದ್ದೆ ಬಿಟ್ಟು ಹೋಗುವುದು.ಈ ವೇಳೆ ರಾತ್ರಿ ಹೊತ್ತು ಬಸ್ ಸೌಲಭ್ಯ ಬೇಕು.ಅದಕ್ಕಾಗಿ ರಾತ್ರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡುವಂತೆ ಶಾಸಕರು ತಿಳಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಅವರು ಮಾತನಾಡಿ ಏ.೧೬ರಂದು ಕೂಡಾ ರಾತ್ರಿ ವಿಶೇಷ ಬಸ್‌ಗಳ ಅವಶ್ಯಕತೆ ಇದೆ ಎಂದರು.ಕೆಎಸ್‌ಆರ್‌ಟಿಸಿ ಅಧಿಕಾರಿ ಮುರಳೀಧರ್ ಅವರು ಮಾತನಾಡಿ, ಈ ಕುರಿತು ಎಲ್ಲಾ ಸೌಲಭ್ಯ ಒದಗಿಸಲಾಗುವುದು ಎಂದರು.

ಅರೋಗ್ಯ ಸೇವೆ ಇರಬೇಕು: ಜಾತ್ರೆಯ ಸಂದರ್ಭ ಎ.16 ಮತ್ತು 17ರಂದು ಆರೋಗ್ಯ ಇಲಾಖೆ ಪ್ರತ್ಯೇಕ ಕೌಂಟರ್ ವ್ಯವಸ್ಥೆಯ ಅಡಿಯಲ್ಲಿ ಆರೋಗ್ಯ ಸೇವೆಗೆ ಸಿದ್ದರಿರಬೇಕು.ಒಂದು ಆಂಬುಲೆನ್ಸ್ ಕೂಡಾ ಇರಬೇಕು ಎಂದು ಶಾಸಕರು ಸೂಚಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಮಾತನಾಡಿ ಆರೋಗ್ಯ ಕೇಂದ್ರದ ವ್ಯವಸ್ಥೆ ಮಾಡಲಾಗುವುದು ಎಂದರು.ಜೊತೆಗೆ ಇತರ ಇಲಾಖೆಯ ಮಾಹಿತಿ ಕೇಂದ್ರಗಳು ಸರಕಾರದ ಮತ್ತು ಇಲಾಖೆಯ ಸೌಲಭ್ಯ ತಿಳಿಸುವ ಕಾರ್ಯಕ್ರಮ ಆಗಬೇಕು ಎಂದು ಶಾಸಕರು ಹೇಳಿದರು.

ವಿದ್ಯುತ್ ಸಮಸ್ಯೆ ಬರಬಾರದು: ಜಾತ್ರಾ ಸಂದರ್ಭದಲ್ಲಿ ದೇವರ ಪೇಟೆ ಸವಾರಿ ಸಮಯದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಾರದು. ಬ್ರಹ್ಮರಥೋತ್ಸವದಂದು ದಿನಪೂರ್ತಿ ವಿದ್ಯುತ್ ಇರಬೇಕು ಎಂದು ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಅವರು ಮಾತನಾಡಿ ದೇವಳದ ಗದ್ದೆಯಲ್ಲಿ ನಾಲ್ಕು ಕಡೆಯಲ್ಲಿ ವಿದ್ಯುತ್ ಪರಿವರ್ತಕ ಇದೆ.ಇದು ಸ್ಪೆಷಲ್ ಆಗಿ ಜಾತ್ರೆಗೆಂದು ಹಿಂದೆ ಅಳವಡಿಸಿದ್ದು, ಹಾಗಾಗಿ ಯಾವುದೇ ಸಮಸ್ಯೆ ಇರುವುದಿಲ್ಲ. ಇದರ ಜೊತೆಗೆ ಹೆಚ್ಚುವರಿ ವಿದ್ಯುತ್ ಪಡೆಯುವವರು ಮುಂಚೆಯೇ ತಿಳಿಸಬೇಕು ಎಂದರು.ಹಲವು ಕಡೆ ಜಾತ್ರೆಯ ಗದ್ದೆಯಲ್ಲಿ ನೆಲದ ಮೇಲೆ ವಯರ್ ಎಳೆಯುತ್ತಾರೆ.ಇದನ್ನು ತೆರವು ಮಾಡಬೇಕು.ರಥ ಬೀದಿಗೆ ಅಡ್ಡವಾಗಿ ವಯರ್ ಕೊಂಡೊಯ್ಯಲು ಅವಕಾಶ ನೀಡಬಾರದು.ಪೈಪ್ ಒಳಗೆ ಅಳವಡಿಸುವಂತೆ ಸೂಚಿಸಬೇಕು.ಈ ನಿಟ್ಟಿನಲ್ಲಿ ಇಲೆಕ್ಟ್ರಿಕ್ ಇನ್‌ಸ್ಪೆಕ್ಟರ್ ಒಬ್ಬರು ಆಯಾ ಕಡೆಯಲ್ಲಿ ಪರಿಶೀಲನೆ ನಡೆಸುತ್ತಾರೆ ಎಂದವರು ತಿಳಿಸಿದರು.ನಿಮ್ಮ ಇಲಾಖೆಯಿಂದ ಎಲ್ಲಾ ವಿದ್ಯುತ್ ಪರಿವರ್ತಕ ಮತ್ತು ಆಯಾ ಕಡೆ ಹೆಚ್ಚುವರಿ ಪವರ್ ಮೆನ್‌ಗಳು ಜಾತ್ರಾ ಗದ್ದೆಯಲ್ಲಿ ಇರುವಂತೆ ವ್ಯವಸ್ಥೆ ಮಾಡಿ ಎಂದು ಶಾಸಕರು ಸೂಚಿಸಿದರು.

ನಿಗದಿತ ಸ್ಥಳದಲ್ಲೇ ವಾಹನ ಪಾರ್ಕಿಂಗ್: ಜಾತ್ರೆಗೆ ವಿಶೇಷ ಜನಸಾಗರ ಸೇರುತ್ತದೆ.ಈ ನಿಟ್ಟಿನಲ್ಲಿ ಎ.೧೬ ಮತ್ತು ೧೭ರಂದು ವಾಹನ ದಟ್ಟಣೆ ಜಾಸ್ತಿ.ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತದೆ.ವಾಹನ ಪಾರ್ಕಿಂಗ್‌ಗೆ ಕಳೆದ ವರ್ಷ ನಿಗದಿಪಡಿಸಲಾದ ಸ್ಥಳಗಳನ್ನು ಈ ವರ್ಷವೂ ಬಳಸಿಕೊಳ್ಳಬೇಕು.ಎಲ್ಲರೂ ಜಾತ್ರೆಗೆ ಬರುವ ನಿಟ್ಟಿನಲ್ಲಿ ಅವರ ವಾಹನಗಳನ್ನು ನಿಗದಿ ಪಡಿಸಿದ ಸ್ಥಳದಲ್ಲೇ ಪಾರ್ಕ್ ಮಾಡಬೇಕು.ಈ ಕುರಿತು ಈಗಾಗಲೇ ಕೊಂಬೆಟ್ಟು ಕ್ರೀಡಾಂಗಣ, ಕಿಲ್ಲೆ ಮೈದಾನ, ಎಪಿಎಂಸಿ, ಕೆಲವೊಂದು ಶಾಲಾ ಮೈದಾನಗಳನ್ನು ಮತ್ತು ಖಾಸಗಿ ಭೂಮಿಗಳನ್ನು ಗುರುತಿಸಿಕೊಡುವಂತೆ ಶಾಸಕರು ಸೂಚಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮ್‌ದಾಸ್ ಗೌಡ ಅವರು ಮಾತನಾಡಿ ನೆಲ್ಲಿಕಟ್ಟೆ ಸಮೀಪ ಖಾಸಗಿ ಭೂಮಿ ಇದೆ. ಅಲ್ಲಿ ವಾಹನ ಪಾರ್ಕಿಂಗ್‌ಗೆ ಮಾತುಕತೆ ನಡೆಸುವ ಎಂದರು.

ಜಾತ್ರೆಯಲ್ಲಿ ಮಫ್ತಿಯಲ್ಲಿ ಪೊಲೀಸರು: ಈ ವರ್ಷದ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು.ಈ ಕುರಿತು ಪೊಲೀಸರು ಮಫ್ತಿಯಲ್ಲಿಯೂ ಕಾರ್ಯ ನಿರ್ವಹಿಸುವ ವ್ಯವಸ್ಥೆ ಮಾಡಬೇಕು.ಪೊಲೀಸ್ ಸ್ಟ್ರೆಂತ್ ಹೆಚ್ಚು ಇರಬೇಕು.ನಿಮಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗದ್ದೆಯ ವೀಕ್ಷಣೆಗೆ ಪ್ಲಾಟ್‌ಫಾರ್ಮ್ ಹಾಕಿ ಕೊಡುವ ವ್ಯವಸ್ಥೆ ದೇವಸ್ಥಾನದಿಂದ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಡಾ.ಸುಧಾ ಎಸ್ ರಾವ್ ಅವರು ಮಹಿಳಾ ಪೊಲೀಸ್ ಸಿಬ್ಬಂದಿಗಳೂ ಆದಷ್ಟು ಹೆಚ್ಚು ಬೇಕೆಂದು ಹೇಳಿದರು. ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರು ಈ ಕುರಿತು ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ರಾಮ್‌ದಾಸ್ ಗೌಡ ಅವರು ಭದ್ರತೆ ವ್ಯವಸ್ಥೆಗೆ ಸಂಬಂಧಿಸಿ ತಮ್ಮ ಅನುಭವ ಹಂಚಿಕೊಂಡರು.

ಸುಡುಮದ್ದು ಪ್ರದರ್ಶನದಲ್ಲಿ ಭದ್ರತೆ: ಪುತ್ತೂರು ಜಾತ್ರೆಯಲ್ಲಿ ಸುಡುಮದ್ದು ವಿಶೇಷ.ಪುತ್ತೂರು ಬೆಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಸಿದ್ಧ.ಈ ನಿಟ್ಟಿನಲ್ಲಿ ಸುಡುಮದ್ದು ಪ್ರದರ್ಶನದ ಪ್ರದೇಶದ ಸುತ್ತ ಅಗ್ನಿಶಾಮಕದಳದ ಒಂದು ವಾಹನ ಅಲ್ಲಿಯೇ ಇರಬೇಕು ಎಂದು ಶಾಸಕರು ತಿಳಿಸಿದರು.

ವೀರಮಂಗಲ ಅವಭೃತ ಸ್ನಾನಘಟ್ಟದಲ್ಲಿ ಮುಂಜಾಗ್ರತಾ ಕ್ರಮ: ವೀರಮಂಗಲ ಅವಭೃತ ಸ್ನಾನಘಟ್ಟದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ದುರಂತದ ಹಿನ್ನೆಲೆಯಿಂದಾಗಿ ಮುಂಜಾಗ್ರತೆ ಕ್ರಮವಾಗಿ ಅಲ್ಲಿ ಅವಭೃತ ಸ್ನಾನಘಟ್ಟದ ನದಿ ಭಾಗದ ಮೇಲಕ್ಕೆ ಯಾರೂ ಹೋಗದಂತೆ ತಡೆಯುವುದು ಅಗತ್ಯ.ಅಲ್ಲಿ ನದಿ ನೀರಿಗೆ ಯಾರೂ ಇಳಿಯದಂತೆ ಎಚ್ಚರ ವಹಿಸುವುದಕ್ಕೆ ಪೊಲೀಸ್ ಇಲಾಖೆ ಗಮನಿಸಬೇಕು.ಇದರ ಜೊತೆಗೆ ಅಗ್ನಿ ಶಾಮಕ ದಳದವರು ಬೋಟ್ ಜೊತೆ ಅಲ್ಲಿ ಇರುವಂತೆ ಶಾಸಕರು ಸೂಚಿಸಿದರು.

ಕುಡಿಯುವ ನೀರು ಅಗತ್ಯ: ಜಾತ್ರಾ ಗದ್ದೆಯಲ್ಲಿ ಲಕ್ಷಾನುಗಟ್ಟಲೆ ಜನರು ಬರುವುದರಿಂದ ಅಲ್ಲಲ್ಲಿ ನೀರಿನ ವ್ಯವಸ್ಥೆ ಸಿಗಬೇಕು.ಈ ನಿಟ್ಟಿನಲ್ಲಿ ನೀರಿನ ಸಮಸ್ಯೆ ಬಾರದ ಹಾಗೆ ನೋಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು. ವೇದಿಕೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ಡಾ.ಸುಧಾ ಎಸ್ ರಾವ್, ವೀಣಾ ಬಿ.ಕೆ, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಡಿವೈಎಸ್ಪಿ ಡಾ.ಗಾನ ಪಿ ಕುಮಾರ್, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕ ಸುನಿಲ್, ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ್, ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಅಗ್ನಿಶಾಮಕದಳ, ಲೋಕೋಪಯೋಗಿ ಇಲಾಖೆ, ಕೆಎಸ್‌ಆರ್‌ಟಿಸಿಯ ಅಧಿಕಾರಿ ಮುರಳೀಧರ, ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಶ್ರೀಕ್ಷೇ.ಧ.ಗ್ರಾ.ಯೋ ಪ್ರತಿನಿಧಿ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ಬಲ್ನಾಡು, ದೇವಳದ ಕಚೇರಿ ಸಿಬ್ಬಂದಿ ರವೀಂದ್ರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಂಚಾರ ಪೊಲೀಸ್ ಠಾಣೆ ಎಸ್.ಐ ರಾಮ ನಾಯ್ಕ ಅವರು ಕಳೆದ ವರ್ಷ ವಾಹನ ಸಂಚಾರ ನಿಯಂತ್ರಣದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ.ಈ ಬಾರಿಯೂ ಅವರಿಂದ ಉತ್ತಮ ಕಾರ್ಯ ಆಗಬೇಕೆಂದು ಸಭೆಯಲ್ಲಿ ಭಕ್ತರಿಂದ ಪ್ರಶಂಸನೀಯ ಮಾತುಗಳು ಕೇಳಿ ಬಂದವು.ಅವರ ಕಾರ್ಯವೈಖರಿಯನ್ನು ಕಳೆದ ವರ್ಷದಂತೆ ಈ ವರ್ಷವೂ ಮುಂದುವರಿಸುವಂತೆ ಶಾಸಕರು ಸೂಚಿಸಿದರು.ಎಸ್.ಐ ರಾಮನಾಯ್ಕ್ ಅವರು ವಾಹನ ಪಾರ್ಕ್ ಮತ್ತು ವಾಹನ ಸಂಚಾರ ನಿಯಂತ್ರಣದ ಕುರಿತು ಮಾಹಿತಿ ನೀಡಿದರು.ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ದೇವಳದಿಂದ ತುಂಬಾ ದೂರದಲ್ಲೇ ವಾಹನಕ್ಕೆ ತಡೆಯೊಡ್ಡಬೇಡಿ ಎಂದರು.

 

ಸ್ವಚ್ಛತೆಗೆ ಬಹುಮಾನ
ಜಾತ್ರಾ ಗದ್ದೆಯಲ್ಲಿ ಪ್ರತಿ ಅಂಗಡಿಯವರು ಸ್ವಚ್ಛತೆ ಕಾಪಾಡಿದರೆ ಅವರಿಗೆ ಬಹುಮಾನ ಘೋಷಣೆ ಮಾಡಬೇಕೆಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಸಲಹೆ ನೀಡಿದರು.ಬಹುಮಾನದ ಜೊತೆಗೆ ಸ್ವಚ್ಛತೆ ಕಾಪಾಡದಿದ್ದರೆ ಅವರಿಗೆ ದಂಡವನ್ನೂ ನಗರಸಭೆಯಿಂದ ಹಾಕಬೇಕೆಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದರು.

 

LEAVE A REPLY

Please enter your comment!
Please enter your name here