ಭ್ರಷ್ಟಾಚಾರ ವಿರುದ್ಧದ ಸುದ್ದಿಯ ಆಂದೋಲನಕ್ಕೆ ನೆಕ್ಕಿಲಾಡಿ ಗ್ರಾ.ಪಂ ಬೆಂಬಲ-ನಿರ್ಣಯ ಅಂಗೀಕಾರ

0

  • ಗ್ರಾ.ಪಂ.ವ್ಯಾಪ್ತಿಯಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ
  • ಸಿಸಿ. ಕೆಮರಾ ಮೂಲಕ ಪ್ರತಿಯೊಂದು ಕೆಲಸಗಳನ್ನು ಗಮನಿಸುವುದು
  • ಮಧ್ಯವರ್ತಿಗಳಿಗೆ ಅವಕಾಶ ಇಲ್ಲ
  • ಕಾಮಗಾರಿಗಳಲ್ಲಿ ಅವ್ಯವಹಾರ, ಕಳಪೆ ಕಾಮಗಾರಿ ಆಗದಂತೆ ಕ್ರಮ
  •  ನಗರ ಸಭೆಯ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿಗೆ ತಡೆ ನೀಡಿ ನಿರ್ಣಯ.

ಉಪ್ಪಿನಂಗಡಿ: ಭ್ರಷ್ಟಾಚಾರದ ವಿರುದ್ಧ ಸುದ್ದಿ ಪತ್ರಿಕಾ ಬಳಗದ ನೇತೃತ್ವದಲ್ಲಿ ನಡೆಯತ್ತಿರುವ ಜನಾಂದೋಲನಕ್ಕೆ 34ನೇ ನೆಕ್ಕಿಲಾಡಿ ಗ್ರಾ.ಪಂ. ಬೆಂಬಲ ಘೋಷಿಸಿ ನಿರ್ಣಯ ಅಂಗೀಕರಿಸಿದೆ. ಮೇ. 16ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ. ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಅಧ್ಯಕ್ಷತೆ ವಹಿಸಿದ್ದರು.

 

ಕಳೆದ ಕೆಲ ಸಮಯದಿಂದ ನಿರಂತರವಾಗಿ ಆಗಾಗ್ಗೆ ವಿದ್ಯುತ್ ಕಡಿತವಾಗುತ್ತಿದ್ದು, ನೀರು ಸರಬರಾಜು ಪಂಪುಗಳು ಚಾಲೂ ಆಗದ ಸ್ಥಿತಿ ಎದುರಾಗಿದೆ. ಸಾರ್ವಜನಿಕ ಹಿತದೃಷ್ಠಿಯಿಂದ ಶಾಸ್ವತ ಪರಿಹಾರ ಕಂಡುಕೊಳ್ಳುವಂತೆ ಇಂಧನ ಸಚಿವರನ್ನು ಕೋರಿ ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ನಿರ್ಣಯ ಅಂಗೀಕರಿಸಿದೆ.

ಗ್ರಾಮ ಮಟ್ಟದಲ್ಲಿಯೇ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುದ್ದಿ ಬಿಡುಗಡೆ ಸಂಸ್ಥೆಯ ಮೂಲಕ ನಡೆಯುವ ಭ್ರಷ್ಟಾಚಾರ ವಿರುದ್ಧ ಆಂದೋಲನಕ್ಕೆ ನಮ್ಮ ಗ್ರಾಮ ಪಂಚಾಯಿತಿಯಿಂದಲೂ ಬೆಂಬಲ ನೀಡಬೇಕಾಗಿದೆ ಈ ಬಗ್ಗೆ ನಿರ್ಣಯ ಅಂಗೀಕರಿಸಬೇಕಾಗಿದೆ ಎಂದು ಅಧ್ಯಕ್ಷ ಪ್ರಶಾಂತ್ ಸಭೆಗೆ ತಿಳಿಸಿದರು. ಇದನ್ನು ಸದಸ್ಯರುಗಳು ಒಕ್ಕೊರಲಿನಿಂದ ಸ್ವಾಗತಿಸಿದರು. ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿನಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ, ಸಿಸಿ. ಕೆಮರಾ ಮೂಲಕ ಪ್ರತಿಯೊಂದು ಕೆಲಸಗಳನ್ನು ಗಮನಿಸುವುದು. ಮತ್ತು ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಇರುವುದು, ಗ್ರಾಮದ ಯಾವುದೇ ಕಾಮಗಾರಿಗಳಲ್ಲಿ ಅವ್ಯವಹಾರ, ಕಳಪೆ ಕಾಮಗಾರಿ ಆಗದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಗಮನ ಹರಿಸುವುದು ಆ ಮೂಲಕ ಸುದ್ದಿಯ ಜನಾಂದೋಲನ, ಭ್ರಷ್ಠಾಚಾರ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡುವುದಾಗಿ ನಿರ್ಣಯ ಅಂಗೀಕರಿಸಲಾಯಿತು.

ಇಂಧನ ಸಚಿವರಿಗೆ ಮನವಿ ಸಲ್ಲಿಸಲು ನಿರ್ಣಯ: ನಿರಂತರವಾಗಿ ವಿದ್ಯುತ್ ಕಡಿತ ಆಗುತ್ತಿರುವ ಕುರಿತು ವಿಷಯ ಪ್ರಸ್ತಾಪಿಸಿದ ಅಧ್ಯಕ್ಷರು ನೀರು ಸರಬರಾಜು ಪಂಪು ಚಾಲೂ ಆಗದೆ ಟ್ಯಾಂಕ್‌ನಲ್ಲಿ ನೀರು ತುಂಬುತ್ತಿಲ್ಲ, ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವುದಕ್ಕೆ ಸಮಸ್ಯೆ ಉಂಟಾಗಿದೆ, ಈ ಬಗ್ಗೆ ನಿರಂತರ ವಿದ್ಯುತ್ ಸರಬರಾಜು ಆಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಇಂಧನ ಸಚಿವರಿಗೆ ಮನವಿ ಸಲ್ಲಿಸಲು ನಿರ್ಣಯ ಅಂಗೀಕರಿಸುವುದು ಸೂಕ್ತ ಎಂದರು. ಇದಕ್ಕೆ ಸದಸ್ಯರುಗಳು ಸಮ್ಮತಿ ಸೂಚಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಪುತ್ತೂರು ನಗರ ಸಭೆ ವ್ಯಾಪ್ತಿಗೆ ನೀರು ಸರಬರಾಜು ಸಲುವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ಥಾವರದಿಂದ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ನಮ್ಮ ಗ್ರಾಮಕ್ಕೆ ಉಚಿತ ನೀರು ಸರಬರಾಜು ಮಾಡುವ ಬಗ್ಗೆ ನಗರ ಸಭೆಯನ್ನು ಕೇಳಿಕೊಳ್ಳಲಾಗಿದೆ. ಮತ್ತು ಜಲಸಿರಿ ಯೋಜನೆಯ ಸರಕಾರದ ನಿಯಮಾವಳಿಯನ್ನು ತಿಳಿಸುವಂತೆ ನಗರ ಸಭೆಗೆ ಪತ್ರ ಬರೆಯಲಾಗಿದೆ. ಆದರೆ ಯಾವುದಕ್ಕೂ ನಗರ ಸಭೆಯಿಂದ ಸ್ಪಂದನೆ ದೊರಕುತ್ತಿಲ್ಲ, ಆದ ಕಾರಣ ನಗರ ಸಭೆಯಿಂದ ಗ್ರಾಮ ಪಂಚಾಯಿತಿಗೆ ಲಿಖಿತ ಉತ್ತರ ನೀಡುವ ತನಕ ಕಾಮಗಾರಿಗೆ ತಡೆ ನೀಡುವುದು ಸೂಕ್ತ ಎಂದು ಅಧ್ಯಕ್ಷರು ಸಲಹೆ ನೀಡಿದರು. ಇದಕ್ಕೆ ಸಮ್ಮತಿಸಿದ ಸದಸ್ಯರು ಈ ಬಗ್ಗೆ ನಿರ್ಣಯ ಅಂಗೀಕರಿಸುವುದು ಸೂಕ್ತ ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.
ಸದಸ್ಯರುಗಳಾದ ವಿಜಯಕುಮಾರ್, ಹರೀಶ್ ದರ್ಬೆ, ಹರೀಶ್ ಕೆ., ಸುಜಾತ, ವೇದಾವತಿ, ತುಳಸಿ, ರತ್ನಾವತಿ, ಗೀತಾ ಚರ್ಚೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಯ್ಯ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here