ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದಲ್ಲಿ 8ನೇ ದಿನದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ

0

  • ಪ್ರಕೃತಿಗೆ ವಿರುದ್ಧವಾದ ಕ್ರಿಯೆ ಮಾಡಿದಾಗ ಅಪಾಯ ಖಂಡಿತ : ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
  • ಧಾರ್ಮಿಕ, ದೈವಿಕ ವಿಚಾರಗಳಿಗೆ ಬೆಳಕು ಕೊಟ್ಟ‌ ಕ್ಷೇತ್ರ ಮಾಣಿಲ: ಗೋಪಾಲ ವಾಂತಿಚ್ಚಾಲ್
  • ಶ್ರೀಗಳ ಪಾದಸ್ಪರ್ಶದಿಂದ ಗ್ರಾಮದಲ್ಲಿ ಹಲವಾರು‌ ಬದಲಾವಣೆಯಾಗಿದೆ: ರಾಜೇಶ್ ಕುಮಾರ್ ಬಾಳೆಕಲ್ಲು

 

ವಿಟ್ಲ: ಬಾಲಭೋಜನ ನಿತ್ಯಾನಂದ‌ಸ್ವಾಮಿಗೆ ಬಹಳಪ್ರಿಯವಾದ ಕಾರ್ಯಕ್ರಮವಾಗಿದೆ‌. ಸಮಾಜದಲ್ಲಿರುವ ಸಮಸ್ಯೆಗಳನ್ನು ಜಾಣ್ಮೆಯಿಂದ ಪರಿಹರಿಸುವ ಮನಸ್ಸು ನಮ್ಮದಾಗಬೇಕು.ಹಿಂದಿನ‌ ಆಹಾರ ಪದ್ಧತಿಗಿಂತ ಈಗಿನ ಆಹಾರ ಪದ್ಧತಿಗೆ ಬಹಳಷ್ಟು ವ್ಯತ್ಯಾಸವಿದೆ.  ಗಿಡಮರಗಳನ್ನು ಬೆಳೆಸಿ ಪರಿಸರ   ಸಂಬೃಕ್ಷಣೆ ಮಾಡುವ ಗುಣ‌ ನಮ್ಮಲ್ಲಿರಬೇಕು. ಪ್ರಕೃತಿಗೆ ವಿರುದ್ದವಾದ ಕ್ರಿಯೆ ಮಾಡಿದಾಗ ಅಪಾಯ ಖಂಡಿತ ಎಂದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.

ಅವರು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಆ.5ರಂದು ನಡೆಯಲಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಯುಕ್ತ 48ದಿನಗಳ ವರೆಗೆ ನಡಯಲಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ 8ನೇ ದಿನವಾದ ಜೂ.26ರಂದು ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಕ್ಷೇತ್ರ ಗಳಿಂದ ಸ್ವಾಮೀಜಿಗಳು ನೀಡುವ ಮಂತ್ರಾಕ್ಷತೆಯ ಫಲ ಅಪಾರವಾಗಿದೆ. ಮಂತ್ರಾಕ್ಷತೆಯ ಕಾಳು ಕೆಳಗೆ ಬೀಳದಂತೆ ಜೋಪಾನವಾಗಿಡಬೇಕು. ಮನೆಗೆ ಕೊಂಡು ಹೋಗಿ‌ ಅದನ್ನು ಜೋಪಾನವಾಗಿಟ್ಟುಕೊಳ್ಳುವುದು ಒಳ್ಳೆಯದು. ಹಿರಿಯರನ್ನು ಪ್ರೀತಿಸುವ ಗುಣ‌ ನಮ್ಮದಾಗಬೇಕು. ಭಕ್ತಿ ಭಾವವಿದ್ದರೆ ಜೀವನ ಪಾವನವಾಗುತ್ತದೆ. ಗುರುಗಳನ್ನು, ಸಂತಶ್ರೇಷ್ಠರನ್ನು ಗೌರವಿಸಬೇಕು. ಉಪಕಾರ ಸ್ಮರಣೆ ಜೀವನದಲ್ಲಿ ಅತೀ ಮುಖ್ಯ. ವೃತ್ತಿ ಮೇಲಿನ ಪ್ರೀತಿ ಹಾಗೂ ಕೃತಜ್ಞತೆ ಕೊರತೆ ನಮ್ಮನ್ನು‌ ಕಾಡುತ್ತಿದೆ. ಸಮಾಜದಲ್ಲಿ ಮತಿಭ್ರಮಣೆ ಹೆಚ್ಚಾಗುತ್ತಿದೆ. ದೇಶದ ಸಂಪತ್ತನ್ನು ಸುಡುವ ಕೆಲಸವಾಗುತ್ತಿದೆ. ಜೀವನದಲ್ಲಿ ಧರ್ಮ ಪ್ರಜ್ಞೆಯ ಅನಾವರಣ ವಾಗಬೇಕು. ಮಕ್ಕಳು ದೃತಿಗೆಡದೆ ಮನ್ನಡೆಯುವ ಮನಸ್ಸು ನಿಮ್ಮದಾಗಬೇಕು. ಮಕ್ಕಳು, ಯುವಪೀಳಿಗೆ ಮತಾಂತರ, ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗಬಾರದು. ಯಾಂತ್ರಿಕ ಬದುಕಿನ ಸೋಗಿನಲ್ಲಿ ಮಕ್ಕಳು ತಮ್ಮ ಬಾಳನ್ನು‌ ಹಾಳು‌ಮಾಡಿಕೊಳ್ಳುತ್ತಾರೆ. ಮಕ್ಕಳೇ ನಮ್ಮ ಸಂಪತ್ತಾಗಿರಬೇಕು. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. ಉದ್ಯೋಗ, ಉದ್ಯಮ ಕ್ಷೇತ್ರ ಯಶಸ್ಸಾಗಲಿ ಎಂದರು.

ಶ್ರೀ ಮಂತ್ರ ಮೂರ್ತಿ ಗುಳಿಗ ಸನ್ನಿದಿ ಉಪ್ಪೇರಿ ಇದರ ಪ್ರಧಾನ ಕರ್ಮಿ ಗೋಪಾಲ ವಾಂತಿಚ್ಚಾಲ್ ರವರು ಮಾತನಾಡಿ ಗ್ರಾಮಗಳಲ್ಲಿ‌ ಧಾರ್ಮಿಕ, ದೈವಿಕ, ವಿಚಾರಗಳಿಗೆ ಬೆಳಕು ಕೊಟ್ಟ‌ ಕ್ಷೇತ್ರ ಮಾಣಿಲ. ಗುರುವಿನ ಶಕ್ತಿ ಅಪಾರ. ಗುರುಗಳನ್ನು ಗೌರವಿಸುವ ಗುಣ ನಮ್ಮಲ್ಲಿರಬೇಕು. ಅಜ್ಞಾನ, ಅಂಧಕಾರವನ್ನು ದೂರಮಾಡುವ ಶಕ್ತಿ ಗುರುವಿಗಿದೆ. ಜೀವಿತದಲ್ಲಿ ನಾವು ಮಾಡಿದ ಪುಣ್ಯದ ಕಲಸದಿಂದ ಮೋಕ್ಷ ಪ್ರಾಪ್ತಿಯಾದೀತು. ಮಕ್ಕಳಿಗೆ ಹಿಂದೂ ಧರ್ಮದ ಬಗೆಗಿನ ಅರಿವು ಮೂಡಿಸುವ ಕೆಲಸ ತಾಯಂದಿರಿಂದಾಗಬೇಕು. ನಾವುಗಳು ಭಾರತದ ತತ್ವ ಸಿದ್ಧಂತವನ್ನು ಅರಿಯುವ ಅಗತ್ಯವಿದೆ.


ಭಾರತದ ಸಂಸ್ಕೃತಿ ಶ್ರೇಷ್ಠವಾದುದು. ಸಾಮಾಜಿಕ‌ ಜಾಲತಾಣಗಳ ಒಳಿತು ಕೆಡುಕಿನ ಬಗ್ಗೆ ತಿಳಿಹೇಳುವ ಕೆಲಸ ಈಗಿನ ಕಾಲಘಟ್ಟದಲ್ಲಿ ಆಗಬೇಕಾಗಿರುವುದು ಅನಿವಾರ್ಯವಾಗಿದೆ. ಮಾಣಿಲದ‌ ಮಣ್ಣಿನಲ್ಲಿ ಹುಟ್ಟಿದ ನಿಮ್ಮ ಶ್ರೇಷ್ಠತೆಯ ಅರಿವು ಮುಂದಿನ ನಿಮ್ಮ ಜೀವನದಲ್ಲಾಗುತ್ತದೆ. ಮನುಷ್ಯನಿಗೆ ಮನುಷ್ಯತ್ವ ಅತೀ ಮುಖ್ಯ ಎಂದರು.

ಮಾಣಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜೇಶ್ ಕುಮಾರ್ ಬಾಳೆಕಲ್ಲುವರು ಮಾತನಾಡಿ ಶ್ರೀಗಳ ಪಾದಸ್ಪರ್ಶದಿಂದ ಗ್ರಾಮದಲ್ಲಿ ಹಲವಾರು‌ ಬದಲಾವಣೆಯಾಗಿದೆ. ಸುಸಂಸ್ಕೃತ ಸಮಾಜ‌ ನಿರ್ಮಾಣದಲ್ಲಿ ಸ್ವಾಮೀಜಿಯ ಪಾತ್ರ ಅಪಾರವಾಗಿದೆ. ಕ್ಷೇತ್ರದಿಂದ ನಿರಂತರವಾಗಿ ಸಮಾಜಮುಖಿ ಕಾರ್ಯವಾಗುತ್ತಿರುವುದು ಅಭಿನಂದನೀಯ ಎಂದರು.

ನಿವೃತ್ತ   ಅದ್ಯಾಪಕ ಗೋಪಾಲ ಕೃಷ್ಣ ಭಟ್ ರೂಪಾಯಿಮೂಲೆ , ಗೀತಾನಂದ ಶೆಟ್ಟಿ‌ ಮಾಣಿಲಗುತ್ತು, ಡಾ. ಚರಣ್ ಶೆಟ್ಟಿ, ಸ್ವಾತಿ‌ಚರಣ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ಅಗಮಿಸಿ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಸ್ವಾಮೀಜಿಯವರು ಅವರನ್ನು ಶಾಲುಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾಣಿಲ ಗ್ರಾಮಪಂಚಾಯತ್ ಉಪಾಧ್ಯಕ್ಷ ರಾಜೇಶ್ ಬಾಳೆಕಲ್ಲು, ಪುಣಚ ಮಹಾಶಕ್ತಿಕೇಂದ್ರದ ಪ್ರಮುಖರಾದ ದಯಾನಂದ ಶೆಟ್ಟಿ ಉಜಿರೆಮಾರು ಮೊದಲಾದವರು ಉಪಸ್ಥಿತರಿದ್ದರು.

ಸ್ವಾತಿ ಚರಣ್ ಶೆಟ್ಟಿ ಸ್ವಾಗತಿಸಿದರು. ದೀಕ್ಷಾ ಕಾಪಿಕ್ಕಾಡ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಮಿತಿ ಸದಸ್ಯೆ ವಸಂತಿ ಯಶೋಧರ ಚೌಟ ವಂದಿಸಿದರು.

ಬೆಳಗ್ಗೆ ಗಣಪತಿ ಹವನ, ಶ್ರೀ ವಿಠೋಭ ರುಕ್ಕಯಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀ ಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆಬಳಿಕ ಸಾಮೂಹಿಕ ಕುಂಕುಮಾರ್ಚನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here