ಕಾವು: ಲಯನ್ಸ್ ಮೆಡಿಕಲ್ ಲ್ಯಾಬೋರೇಟರಿ ಲೋಕಾರ್ಪಣೆ

0

  • ಗ್ರಾಮಾಂತರ ಪ್ರದೇಶದಲ್ಲಿ ಲಯನ್ಸ್ ಬೆಳಗುತ್ತಿದೆ: ವಸಂತ ಶೆಟ್ಟಿ


ಪುತ್ತೂರು: ಲಯನ್ಸ್ ಕ್ಲಬ್ ಕೇವಲ ಪೇಟೆಗೆ ಮಾತ್ರ ಸೀಮಿತ ಅಥವಾ ನಗರ ಪ್ರದೇಶದವರು ಮಾತ್ರ ಇದರಲ್ಲಿ ಸದಸ್ಯರಾಗುತ್ತಾರೆ ಎಂಬ ಭಾವನೆ ಲಯನ್ಸ್ ಕ್ಲಬ್ ಬಗ್ಗೆ ಜನ ಸಾಮಾನ್ಯರಲ್ಲಿತ್ತು , ಆದರೆಕಳೆದ ನಾಲ್ಕು ವರ್ಷಗಳಿಂದ ಪುತ್ತೂರಿನ ಗ್ರಾಮಾಂತರ ಪ್ರದೇಶದಲ್ಲಿ ಲಯನ್ಸ್ ಸಂಸ್ಥೆಯು ಬೆಳಗುತ್ತಿದೆ ಎಂದು ಲಯನ್ಸ್ ಮಲ್ಟಿಪಲ್ ಚೆಯರ್‌ಪರ್ಸನ್ ವಸಂತಶೆಟ್ಟಿ ಹೇಳಿದರು.


ಅವರು ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧೀನದಲ್ಲಿ ಕಾವು ಚಿಕ್ಕಪೇಟೆಯ ಅಕ್ಷಯ ಕಾಂಪ್ಲೆಕ್ಸ್‌ನಲ್ಲಿಪ್ರಾರಂಭಗೊಂಡ ಲಯನ್ಸ್ ಮೆಡಿಕಲ್ ಲ್ಯಾಬೋರೇಟರಿಯನ್ನು ಲೋಕಾರ್ಪಣೆಗೈದ ಬಳಿಕ ಕಾವು ಜನಮಂಗಳ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.


ಪುತ್ತೂರು ಕಾವು ಲಯನ್ಸ್ ಕ್ಲಬ್ ಮಾದರಿ ಕ್ಲಬ್ ಆಗಿ ನಾಲ್ಕೇ ವರ್ಷದಲ್ಲಿ ಹೊರಹೊಮ್ಮಿರುವುದು ಇಲ್ಲಿನ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಸ್ಥಾಪಕಾಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿಯವರು ಸಂಸ್ಥೆಯನ್ನು ಪ್ರಾರಂಭದಲ್ಲಿ ಮುನ್ನಡೆಸಿದ್ದರ ಪರಿಣಾಮವಾಗಿ ಇಂದು ಕಾವು ಕ್ಲಬ್ ಟಾಪ್ ಟೆನ್ ಕ್ಲಬ್‌ಗಳ ಪೈಕಿ ಪ್ರಥಮ ಸ್ಥಾನವನ್ನು ಪಡೆಯುವಂತಾಗಿದೆ. ಲಯನ್ಸ್ ಸಂಸ್ಥೆಯ ವತಿಯಿಂದ ಶಾಸ್ವತ ಯೋಜನೆಯನ್ನು ಸಾರ್ವಜನಿಕರ ಸೇವೆಗೆ ನೀಡಲಿದ್ದೇವೆ. ಇಂದು ಆರಂಭಗೊಂಡ ಲ್ಯಾಬ್ ಕಾವು ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಪ್ರಯೋಜನವನ್ನು ನೀಡಲಿದೆ. ಇಲ್ಲಿನ ಕ್ಲಬ್‌ನ ಯೋಜನೆ ಎಲ್ಲರಿಗೂ ಮಾದರಿಯಾಗಲಿದೆ ಎಂದು ಹೇಳಿದರು.

ಸಾಮಾನ್ಯ ಜನರಿಗೂ ಕ್ಲಬ್‌ನಲ್ಲಿ ಅವಕಾಶ; ಕಾವು ಹೇಮನಾಥ ಶೆಟ್ಟಿ
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಗ್ರಾಮೀಣ ಪ್ರದೇಶವಾದ ಕಾವಿನಲ್ಲಿ ಕ್ಲಬ್ ಆರಂಭಿಸುವ ಮೂಲಕ ನಾವು ಗ್ರಾಮೀಣ ಭಗದ ಸಾಮಾನ್ಯ ಜನರನ್ನು ಸದಸ್ಯರನ್ನಾಗಿ ನೇಮಿಸುವ ಮೂಲಕ ಇದು ಪಟ್ಟಣದವರಿಗೆ ಸೀಮಿತವಾದ ಸಂಸ್ಥೆಯಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಸೀಮಿತ ಅವಧಿಯಲ್ಲಿ ಪುತ್ತೂರು-ಪಾಣಾಜೆ ಕ್ಲಬ್, ಆಲಂಕಾರು ದುರ್ಗಾಂಬಾ ಕ್ಲಬ್ ಸೇರಿದಂತೆ ಒಟ್ಟು ನಾಲ್ಕು ಕ್ಲಬ್‌ಗಳನ್ನು ನೂತನವಾಗಿ ಪ್ರಾರಂಭಿಸಿರುವುದು ಕಾವು ಕ್ಲಬ್‌ನ ದೊಡ್ಡ ಸಾಧನೆಯಾಗಿದೆ. ಕಾವಿನಲ್ಲಿ ಲ್ಯಾಬ್ ಆರಂಭವಾಗಿರುವುದು ಸಂತೋಷದ ವಿಚಾರವಾಗಿದೆ. ಗ್ರಾಮೀಣ ಭಾಗದ ಜನರ ಬೇಡಿಕೆಯನ್ನು ಪರಿಗಣಿಸಿ ಸಂಸ್ಥೆಯ ವತಿಯಿಂದ ಲ್ಯಾಬ್ ಆರಂಭಿಸಲಾಗಿದೆ. ಲಯನ್ಸ್ ಸಂಸ್ಥೆಯ ಸೇವೆಯು ಮುಂದಿನ ದಿನಗಳಲ್ಲಿ ಗ್ರಾಮೀಣ ಜನರಿಗೂ ತಲುಪಲಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಗ್ರಾಮಾಂತರ ಭಾಗಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡುವ ಮೂಲಕ ಲಯನ್ಸ್ ಸಂಸ್ಥೆಯನ್ನು ಬೆಳಗಿಸುವ ಕೆಲಸವನ್ನು ಲಯನ್ಸ್ ಬಂಧುಗಳು ಮಾಡಲಿದ್ದಾರೆ ಎಂದು ಹೇಳಿದರು.

ನಾಲ್ಕೇ ವರ್ಷದಲ್ಲಿ ದೊಡ್ಡ ಸಾಧನೆ; ಡಾ. ಗೀತಪ್ರಕಾಶ್
ಲಯನ್ಸ್ ಮಾಜಿ ಗವರ್ನರ್ ಡಾ. ಗೀತಪ್ರಕಾಶ್ ಮಾತನಾಡಿ ಪುತ್ತೂರು-ಕಾವು ಲಯನ್ಸ್ ಕ್ಲಬ್ ನಾಲ್ಕೇವರ್ಷದಲ್ಲಿ ದೊಡ್ಡ ಸಾಧನೆಯನ್ನೇ ಮಾಡಿದೆ. ಜನೋಪಯೋಗಿ ಮೆಡಿಕಲ್ ಲ್ಯಾಬ್ ನ್ನು ಇಲ್ಲಿ ಪ್ರಾರಂಭ ಮಾಡುವ ಮೂಲಕ ಲಯನ್ಸ್ ಸಂಸ್ಥೆಯನ್ನು ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ಪರಿಚಯಿಸಿದ್ದಾರೆ. ಇಲ್ಲಿನ ನಾಯಕತ್ವ ಶ್ರೇಷ್ಟವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪ್ರಾಂತೀಯ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರ ಮುಂದಾಲೋಚನೆಯ ಫಲ ಮತ್ತು ಗ್ರಾಮೀಣ ಜನತೆಗೆ ಸಂಸ್ಥೆಯ ಸೇವಾ ಸೌಲಭ್ಯ ಸಿಗಬೇಕು ಎಂಬ ಸಂಕಲ್ಪ ಇಲ್ಲಿನ ಕ್ಲಬ್ಬನ್ನು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ. ನಾಯಕತ್ವ ಚೆನ್ನಾಗಿದ್ದರೆ ಯಾವುದೇ ಸಂಸ್ಥೆಯು ಬೆಳೆಯುತ್ತದೆ ಎಂಬುದಕ್ಕೆ ಪುತ್ತೂರು -ಕಾವು ಕ್ಲಬ್‌ನ ಸಾಧನೆಯೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಜನತೆಗೆ ಪ್ರಯೋಜನವಾಗಲಿದೆ: ಶಿವಪ್ರಸಾದ್ ಶೆಟ್ಟಿ
ವಲಯ ಚೆಯರ್‌ಮೆನ್ ಶಿವಪ್ರಸಾದ್ ಶೆಟ್ಟಿ ಮಾತನಾಡಿ ಕಾವಿನಲ್ಲಿ ಲ್ಯಾಬ್ ಆರಂಭವಾಗಿರುವುದು ಇಲ್ಲಿನ ಜನತೆಗೆ ತುಂಬಾ ಪ್ರಯೋಜನವಾಗಲಿದೆ. ಲಯನ್ಸ್ ಸಂಶ್ಥೆಯು ಇಂಥಹ ಯೋಜನೆಗಳನ್ನು ಹಲವು ಕಡೆಗಳಲ್ಲಿ ಮಾಡಿದೆ. ಆದರೆ ಗ್ರಾಮೀಣ ಭಾಗದಲ್ಲಿ ಮೊದಲ ಬಾರಿಗೆ ಎಂಬಂತೆ ಸಾರ್ವಜನಿಕ ಪ್ರಯೋಜನಕಾರಿ ಸೇವಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಸಮಾಜಸೇವೆಯಲ್ಲಿ ಲಯನ್ಸ್ ಮುಂದೆ ಇದೆ: ಕೆ ಎಂ ಜಗದೀಶ್
ಕೂರ್ಗ್ ಲಯನ್ಸ್ ಕ್ಲಬ್‌ನ ಮಾಜಿ ರೀಜನಲ್ ಚೆಯರ್‌ಪರ್ಸನ್ ಕೆ ಎಂ ಜಗದೀಶ್ ಮಾತನಾಡಿ ಸಮಾಜಸೇವೆಯಲ್ಲಿ ಲಯನ್ಸ್ ಕ್ಲಬ್ ಉಳಿದವರಿಗಿಂದ ಮುಂದೆ ಇದ್ದೇವೆ. ಅಂತರಾಷ್ಟ್ರೀಯ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್ ವತಿಯಿಂದ ಕಾವಿನಲ್ಲಿ ಮೆಡಿಕಲ್ ಲ್ಯಾಬೋರೇಟರಿ ಪ್ರಾರಂಭ ಮಾಡುವುದರ ಜೊತೆಗೆ ಗ್ರಾಮೀಣ ಜನರ ಸೇವೆಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಲ್ಯಾಬ್ ವ್ಯವಸ್ಥೆ ಜೊತೆ ತಜ್ಞ ವೈದ್ಯರನ್ನು ಸೇವೆಗೆ ವ್ಯವಸ್ಥೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಗ್ರಾಮಸ್ಥರು ಪ್ರಯೋಜನ ಪಡೆದುಕೊಳ್ಳಿ: ಸೌಮ್ಯ ಬಾಲಸುಬ್ರಹ್ಮಣ್ಯ
ಅರಿಯಡ್ಕ ಗ್ರಾಪಂ ಅಧ್ಯಕ್ಷೆ ಸೌಮ್ಯಾಬಾಲಸುಬ್ರಹ್ಮಣ್ಯ ರವರು ಮಾತನಾಡಿ ಲಯನ್ಸ್ ವತಿಯಿಂದ ಮಾಡ್ನೂರು ಗ್ರಾಮದಲ್ಲಿ ಲ್ಯಾಬ್ ಪ್ರಾರಂಭಗೊಂಡಿರುವುದು ಗ್ರಾಮಸ್ಥರಿಗೆ ಪ್ರಯೋಜನವಾಗಲಿದೆ. ಕಡಿಮೆ ದರದಲ್ಲಿ ಇಲ್ಲಿ ಸೌಲಭ್ಯಗಳಿದೆ ಎಂದು ಹೇಳುತ್ತಿದ್ದು ಇದರಿಂದ ಗ್ರಾಮದ ಬಡ ಜನತೆ ಕನಿಷ್ಠ ದರದಲ್ಲಿ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ. ಲಯನ್ಸ್ ಸಂಸ್ಥೆಯಿಂದ ಗ್ರಾಮಕ್ಕೆ ಇನ್ನೂ ಹೆಚ್ಚಿನ ಸೇವಾ ಸೌಲಭ್ಯಗಳು ದೊರೆಯಲಿ ಎಂದು ಹೇಳಿದರು.

ಉತ್ತಮ ಕೆಲಸವಾಗಿದೆ: ಕೆ ಕೆ ಹಾಜಿ
ಮಾಡನ್ನೂರು ಜುಮಾ ಮಸೀದಿ ನಿಟಪೂರ್ವ ಅಧ್ಯಕ್ಷ ಕೆ ಕೆ ಇಬ್ರಾಹಿಂ ಹಾಜಿ ಮಾತನಾಡಿ ಲಯನ್ಸ್ ವತಿಯಿಂದ ಕಾವಿನಲ್ಲಿ ಉತ್ತಮ ಸಮಾಜಸೇವಾ ಕಾರ್ಯ ನಡೆದಿದೆ. ಜನರ ಆರೋಗ್ಯ ದೃಷ್ಟಿಯಿಂದ ಇಲ್ಲಿನ ಲ್ಯಾಬ್ ಕೆಲಸ ಮಾಡಲಿದೆ. ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ಇಂದಿನ ಸಮಾಜದಲ್ಲಿ , ಆರೋಗ್ಯ ಮತ್ತು ಅನಾರೋಗ್ಯವಿದ್ದವರು ಇಲ್ಲಿನ ಲ್ಯಾಬನ್ನು ಬಳಸಿಕೊಳ್ಳಬಹುದು. ಕ್ಲಬ್‌ನ ಅಧ್ಯಕ್ಷ ಪಾವನರಾಮ ಮತ್ತು ಪ್ರಾಂತೀಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಈ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಶಾಶ್ವತ ಯೋಜನೆಯಿಂದ ಜನತೆಗೆ ಪ್ರಯೋಜನ: ಪಾವನರಾಮ
ಪುತ್ತೂರು-ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಪಾವನರಾಮ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕ್ಲಬ್ ಇಷ್ಟೊಂದು ಸಾಧನೆಯನ್ನು ಮಾಡಿದ್ದರೆ ಅದು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಸ್ಥಾಪಕ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಮರ್ಗದರ್ಶನದಿಂದ ನಾವು ಹೆಜ್ಜೆ ಇಡುತ್ತಿದ್ದೇವೆ. ಸಂಸ್ಥೆಯ ವತಿಯಿಂದ ಶಾಶ್ವತ ಯೋಜನೆಯನ್ನು ರೂಪಿಸಲು ನಾವು ಯೋಜನೆಯನ್ನು ರೂಪಿಸಿಕೊಂಡಿದ್ದೇವೆ. ಎಲ್ಲರೂ ಒಟ್ಟಾಗಿ ನಾವು ಸಂಸ್ಥೆ ಜೊತೆ ಸೇರಿ ಕೆಲಸ ಮಾಡಿದರೆ ಇನ್ನೂ ಹೆಚ್ಚಿನ ಸಮಾಜ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದರು. ಪುತ್ತೂರು-ಕಾವು ಲಯನ್ಸ್ ಕ್ಲಬ್ ನಡೆದು ಬಂದ ಹದಿಯ ಬಗ್ಗೆ ಪಾವನರಾಮ ಅವರು ವಿವರಣೆ ನೀಡಿದರು.

ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್, ಪುತ್ತೂರು ಕಾವು ಲಯನ್ಸ್ ಕ್ಲಬ್ ಕಾರ್ಯದರ್ಶಿ ದೇವಣ್ಣ ರೈ, ಕೋಶಾಧಿಕಾರಿ ಅಮ್ಮು ರೈ ಉಪಸ್ಥಿತರಿದ್ದರು. ದಿವ್ಯನಾಥ ಶೆಟ್ಟಿ ಕಾವು ಸ್ವಾಗತಿಸಿದರು. ವಲಯ ಅಧ್ಯಕ್ಷ ರಮೇಶ್ ರೈ ಸಾಂತ್ಯ ವಂದಿಸಿದರು. ಮನ್ಮಥ ಶೆಟ್ಟಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

ಲ್ಯಾಬ್‌ನಲ್ಲಿ ಏನಿದೆ
ಕಾವಿನಲ್ಲಿ ಆರಂಭಗೊಂಡ ಮೆಡಿಕಲ್ ಲ್ಯಾಬೋರೇಟರಿಯಲ್ಲಿರಕ್ತ, ಮಲ, ಮೂತ್ರ ಪರೀಕ್ಷೆ ಹಾಗೂ ಇನ್ನಿತರ ಪರೀಕ್ಷೆಗಳೂ ಲಭ್ಯವಿದೆ. ತಜ್ಞ ವೈದ್ಯರಿಬ್ಬರು ಸದಾ ಸೇವೆಗೆ ಲಭ್ಯರಿರುತ್ತಾರೆ.

LEAVE A REPLY

Please enter your comment!
Please enter your name here