ಒಂದು ಕಡೆ ಹೊಳೆ ಬದಿಯಲ್ಲಿ ರಸ್ತೆ ಕುಸಿಯುವ ಭೀತಿ ಇನ್ನೊಂದು ಕಡೆ ರಸ್ತೆ ಬ್ಲಾಕ್ ಆಗುವ ಸ್ಥಿತಿ; ಕಾಣಿಯೂರಿಗೆ ಸಂಪರ್ಕಿಸುವ ರಸ್ತೆಯೇ ಕಡಿತಗೊಳ್ಳುವ ಆತಂಕದಲ್ಲಿ ಜನತೆ

0

ವರದಿ: ಸುಧಾಕರ ಆಚಾರ್ಯ ಕಾಣಿಯೂರು

ಕಾಣಿಯೂರು: ಕಾಣಿಯೂರು ಮಠದ ಜಂಕ್ಷನ್‌ನಿಂದ ಭಜನಾ ಮಂದಿರದ ಮೂಲಕ ಹಾದು ಹೋಗುವ ರಸ್ತೆಯಲ್ಲಿ ಸಂಪರ್ಕಿಸಬಹುದು ಎಂದಾದರೆ ಹೊಳೆ ಬದಿಯಲ್ಲಿಯೇ ಇರುವ ರಸ್ತೆ ಯಾವಾಗ ಕುಸಿಯುತ್ತದೆ ಎನ್ನುವ ಭೀತಿ.. ಕಾಣಿಯೂರಿನಿಂದ ರೈಲ್ವೆ ಸೇತುವೆ ಕೆಳಭಾಗದಲ್ಲಿ ಸಂಪರ್ಕಿಸಬಹುದು ಎಂದಾದರೆ ಹೊಳೆ ಬದಿಯಲ್ಲಿರುವ ಈ ರಸ್ತೆಗೆ ನೀರು ಬಂದು ರಸ್ತೆ ಬ್ಲಾಕ್ ಆಗುವ ಪರಿಸ್ಥಿತಿ. ಒಟ್ಟಿನಲ್ಲಿ ಇಲ್ಲಿಯ ಜನತೆಗೆ ಈ ಸಂಪರ್ಕ ರಸ್ತೆಯಲ್ಲಿ ಪ್ರಯಾಣಿಸಬೇಕಾದರೆ ಸಂಕಷ್ಟದ ಸನ್ನಿವೇಶ. ಕಾಣಿಯೂರಿನಿಂದ ಸ್ವಲ್ಪ ದೂರದಲ್ಲಿಯೇ ರೈಲ್ವೆ ಸೇತುವೆಯ ಕೆಳಭಾಗದಲ್ಲಿ ರಸ್ತೆಯ ಪಕ್ಕದಲ್ಲಿಯೇ ಇರುವ ಹೊಳೆಯಲ್ಲಿ ನೀರು ಹರಿದು ಹೋಗುತ್ತಿದ್ದು. ಪ್ರತಿ ಬಾರಿಯ ಮಳೆಗಾಲದಲ್ಲಿ ರಸ್ತೆಯು ಮುಳುಗಡೆಯಾಗುವುದು ಸಾಮಾನ್ಯ. ಭಾರೀ ಮಳೆಯಿಂದ ಬಂದ ವಿಪರೀತ ನೆರೆ ನೀರಿಗೆ ಕಾಂಕ್ರೀಟ್ ರಸ್ತೆ ಮತ್ತು ತಡೆಗೋಡೆ ಕೊಚ್ಚಿ ಹೋಗಿದೆ. ಈ ಸಂಪರ್ಕ ರಸ್ತೆಯಲ್ಲಿ ದೊಡ್ಡದೊಂದು ತಿರುವು ಕೂಡ ಇದ್ದು ಮಳೆಗಾಲದಲ್ಲಿ ಸಂಪರ್ಕಿಸಿದರೆ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಮಳೆಗಾಲದಲ್ಲಿ ರಸ್ತೆಯು ಮುಳುಗುವುದರಿಂದ ಆತಂಕದಲ್ಲಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇಲ್ಲಿಯದ್ದಾಗಿದೆ. ಕಾಣಿಯೂರಿನಿಂದ ಮಾದೋಡಿ ಮೂಲಕ ಪೆರುವಾಜೆ ಬೆಳ್ಳಾರೆಗೆ, ಕಾಣಿಯೂರಿನಿಂದ ಅಬೀರ, ನೀರಜರಿ ಮೂಲಕ ಅಮೈಗೆ, ಕಾಣಿಯೂರಿನಿಂದ ಪೆರ್ಲೋಡಿಗೆ ಹಾಗೂ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರಕ್ಕೆ ಸಂಪರ್ಕಿಸುವ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೆಷ್ಟೋ ಶಾಲಾ ವಿದ್ಯಾರ್ಥಿಗಳು, ವಾಹನಗಳು, ಸಾರ್ವಜನಿಕರು ಸಂಚರಿಸುವ ರಸ್ತೆ ಇದಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಸಂಪರ್ಕ ಕಡಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದರ ಜೊತೆಗೆ ಅಪಾಯದ ಸನ್ನಿವೇಶವು ಎದುರಾಗಲಿದೆ. ಈ ಕುಸಿಯುತ್ತಿರುವ ರಸ್ತೆಗೆ ಸಮರ್ಪಕವಾದ ತಡೆಗೋಡೆ ನಿರ್ಮಾಣ ಹಾಗೂ ಮಳೆಗಾಲದಲ್ಲಿ ರಸ್ತೆಗೆ ನೀರು ಬರದಂತೆ ತಡೆಯಲು ಹೊಳೆಗೆ ತಡೆಗೋಡೆ ನಿರ್ಮಿಸಿ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ಬರಬಹುದಾದ ಅಪಾಯವನ್ನು ತಪ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹ. ಅತೀ ಪ್ರಮುಖ ರಸ್ತೆಯಾದ ಕಾರಣ ಸಂಬಂಧ ಪಟ್ಟ ಅಽಕಾರಿಗಳು ತುರ್ತಾಗಿ ಗಮನಹರಿಸಿ ಅತೀ ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.

ಕಾಣಿಯೂರು ರೈಲ್ವೆ ಸೇತುವೆಯ ಕೆಳಭಾಗದ ರಸ್ತೆಯು ಮಳೆಗಾಲದಲ್ಲಿ ಬ್ಲಾಕ್ ಮತ್ತು ತಡೆಗೋಡೆಯಿಲ್ಲದೇ ಅಪಾಯದ ಸ್ಥಿತಿಯಲ್ಲಿದೆ. ಇದೀಗ ಕಾಣಿಯೂರು ಭಜನಾ ಮಂದಿರದ ಬಳಿಯಿಂದ ಬರುವ ಸಂಪರ್ಕ ರಸ್ತೆ ಕೂಡ ಹೊಳೆಯ ಬದಿ ಕುಸಿಯುವ ಭೀತಿ ಎದುರಾಗಿದ್ದು, ತಡೆಗೋಡೆ ರಚನೆಗಾಗಿ ಸಂಬಂಧಪಟ್ಟವರಿಗೆ ಬರೆಯಲು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಜಯಂತ ಅಬೀರ
ಸದಸ್ಯರು, ಗ್ರಾ.ಪಂ.ಬೆಳಂದೂರು

LEAVE A REPLY

Please enter your comment!
Please enter your name here