ನೆಲ್ಯಾಡಿ: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ವತ್ವದಿಂದ ಉಚ್ಚಾಟನೆಯ ಬಗ್ಗೆ ಈ ತನಕ ನನಗೆ ಅಧಿಕೃತವಾಗಿ ಪಕ್ಷದ ಕಡೆಯಿಂದ ಯಾವುದೇ ಮಾಹಿತಿಯಾಗಲೀ, ಆದೇಶವಾಗಲೀ ಬಂದಿಲ್ಲ ಎಂದು ತಾ.ಪಂ.ಮಾಜಿ ಸದಸ್ಯೆ ಆಶಾ ಲಕ್ಷ್ಮಣ್ ಸ್ಪಷ್ಟಪಡಿಸಿದ್ದಾರೆ.
ನಾನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದೆನೆಂದು ಆರೋಪಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ನನಗೆ ಪಕ್ಷದ ವತಿಯಿಂದ ಯಾವುದೇ ಆದೇಶ ಬಂದಿಲ್ಲ. ಹಾಗೇನಾದರೂ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಲ್ಲಿ ಅದರ ಕುರುಹು ತೋರಿಸಲಿ. ನಾನು ಕಾನೂನಿನ ಚೌಕಟ್ಟಿನಲ್ಲಿ ಪಕ್ಷದ ಯಾವುದೇ ನಿರ್ಧಾರಕ್ಕೆ ಬದ್ಧಳಾಗಿರುತ್ತೇನೆ. ನನ್ನ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನನಗೆ ಉಸ್ತುವಾರಿ ನೀಡಿದ ಭಾಗದಲ್ಲಿ ನಾನು ನಮ್ಮ ಪಕ್ಷಕ್ಕಾಗಿ ಪ್ರಚಾರ ಮಾಡಿದ್ದೇನೆ. ಅದಕ್ಕೆ ಬೇಕಾದ ಮಾಹಿತಿ ನನ್ನ ಬಳಿ ಇದೆ. ಇದೊಂದು ಪಕ್ಷದಲ್ಲಿ ನನ್ನ ಬೆಳವಣಿಗೆಯನ್ನು ಕಂಡು ಸಹಿಸಲಾರದೇ ಕೆಲವು ನನ್ನ ವಿರೋಧಿಗಳು ಮಾಡಿದಂತಹ ಷಡ್ಯಂತ್ರವಾಗಿದೆ ಎಂದು ಆಶಾ ಲಕ್ಷ್ಮಣ್ ಹೇಳಿದ್ದಾರೆ. ಜಿ.ಕೃಷ್ಣಪ್ಪ ಅವರಿಗೆ ಪಕ್ಷದಿಂದ ಬಿ ಫಾರಂ ನೀಡಿದ ಬಳಿಕ ಬಿ.ರಮಾನಾಥ ರೈಯವರು ಸಂಧಾನ ನಡೆಸಿ ಒಟ್ಟಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಸೂಚನೆ ನೀಡಿದ್ದರು. ಅದರಂತೆ ನಾನು ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ನಿಷ್ಠೆಯಿಂದ ಪಕ್ಷದ ಅಭ್ಯರ್ಥಿ ಪರ ನನ್ನ ತಾ.ಪಂ.ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದೇನೆ. ಇದಕ್ಕೆ ಕಾರ್ಯಕರ್ತರೇ ಸಾಕ್ಷಿಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಇವೆಲ್ಲವೂ ನನ್ನ ವಿರುದ್ಧ ಮಾಡಿರುವ ಷಡ್ಯಂತ್ರವಾಗಿದೆ ಎಂದು ಆಶಾ ಲಕ್ಷ್ಮಣ್ ತಿಳಿಸಿದ್ದಾರೆ.